ADVERTISEMENT

ತೈವಾನ್‌ನಲ್ಲಿ ಚೀನಾದ 'ನ್ಯೂ ನಾರ್ಮಲ್‌"ಗೆ ಅಮೆರಿಕ ಬಿಡುವುದಿಲ್ಲ: ಪೆಲೊಸಿ

ಪಿಟಿಐ
Published 11 ಆಗಸ್ಟ್ 2022, 2:28 IST
Last Updated 11 ಆಗಸ್ಟ್ 2022, 2:28 IST
ನ್ಯಾನ್ಸಿ ಪೆಲೊಸಿ
ನ್ಯಾನ್ಸಿ ಪೆಲೊಸಿ   

ವಾಷಿಂಗ್ಟನ್: ತೈವಾನ್‌ನಲ್ಲಿ ಚೀನಾ ಅಧಿಕಾರ ಸ್ಥಾಪನೆಗೆ(ನ್ಯೂ ನಾರ್ಮಲ್) ಅವಕಾಶ ನೀಡುವುದಿಲ್ಲ ಎಂದು ಅಮೆರಿಕದ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೊಸಿ ಹೇಳಿದ್ದಾರೆ.

ತಾವು ತೈವಾನ್‌ಗೆ ಭೇಟಿ ನೀಡಿದ ನಂತರ, ಪ್ರತೀಕಾರವಾಗಿ ತೈವಾನ್ ಜಲಸಂಧಿಯಲ್ಲಿ ಚೀನಾದ ಪ್ರಚೋದನಕಾರಿ ಸಮರಾಭ್ಯಾಸದ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

‘ನಾವು ಚೀನಾವನ್ನು ಗಮನಿಸುತ್ತಿದ್ದು, ಅವರು ‘ನ್ಯೂ ನಾರ್ಮಲ್’ ಅನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಪೆಲೊಸಿ, ಏಷ್ಯಾ ಪ್ರವಾಸದ ನಂತರ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ADVERTISEMENT

ತಾವು ವಾರದಿಂದ ನಡೆಸುತ್ತಿದ್ದ ಮಿಲಿಟರಿ ತಾಲೀಮು ಯಶಸ್ವಿಯಾಗಿ ಪೂರ್ಣಗೊಂಡಿರುವುದಾಗಿ ಬುಧವಾರ ಚೀನಾ ಘೋಷಿಸಿದೆ. ಚೀನಾ ತನ್ನ ಏಕ-ಚೀನಾ ನೀತಿಯನ್ನು ಜಾರಿಗೊಳಿಸಲು ನಿಯಮಿತ ಯುದ್ಧ ಗಸ್ತುಗಳನ್ನು ಆಯೋಜಿಸುತ್ತದೆ ಎಂದು ಎಚ್ಚರಿಸಿದೆ.

ತಮ್ಮದೇ ಭೂಪ್ರದೇಶ ಎಂದು ಪರಿಗಣಿಸುವ ತೈವಾನ್‌ಗೆ ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ಅವರ ಇತ್ತೀಚಿನ ಭೇಟಿ ಬಗ್ಗೆ ಚೀನಾ ವ್ಯಗ್ರಗೊಂಡಿತ್ತು. ತೈವಾನ್ ಸುತ್ತ ಮಿಲಿಟರಿ ತಾಲಿಮನ್ನು ಆರಂಭಿಸಿತ್ತು.

ನೂರಾರು ಯುದ್ಧ ವಿಮಾನಗಳು, ಹಲವು ಯುದ್ಧ ನೌಕೆಗಳು, ಅಣು ಜಲಾಂತರ್ಗಾಮಿ ನೌಕೆ ಮುಂತಾದ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಿತ್ತು.

‘ನಾವು ಚೀನಾದ ಬಗ್ಗೆ ಮಾತನಾಡಲು ಅಲ್ಲಿಗೆ ಹೋಗಿರಲಿಲ್ಲ. ತೈವಾನ್ ಅನ್ನು ಹೊಗಳಲು ಹೋಗಿದ್ದೆವು. ಚೀನಾವು ತೈವಾನ್ ಅನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂಬುದನ್ನು ಹೇಳಲು ನಮ್ಮ ಸ್ನೇಹವನ್ನು ತೋರಿಸಲು ನಾವು ಅಲ್ಲಿಗೆ ಹೋಗಿದ್ದೆವು’ ಎಂದು ಪೆಲೊಸಿ ಪ್ರತಿಪಾದಿಸಿದರು.

ನಿರಂಕುಶಾಧಿಕಾರದ ಎದುರು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವುದು, ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟಿನಲ್ಲಿ ಆರ್ಥಿಕ ಅಭಿವೃದ್ಧಿ, ಕೋವಿಡ್-19 ಮತ್ತು ಹವಾಮಾನ ಬಿಕ್ಕಟ್ಟಿಗೆ ಪ್ರತಿಕ್ರಿಯಿಸುವ ಮೂಲಕ ದೃಢವಾದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಅವಕಾಶಗಳನ್ನು ಬಳಸಿಕೊಳ್ಳುವುದು ಮತ್ತು ಹಂಚಿಕೆಯ ಸವಾಲುಗಳನ್ನು ಪರಿಹರಿಸುವ ಬಗ್ಗೆ ದ್ವಿಪಕ್ಷೀಯ ಚರ್ಚೆಗಳು ಕೇಂದ್ರೀಕೃತವಾಗಿದ್ದವು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.