
ಡೊನಾಲ್ಡ್ ಟ್ರಂಪ್, ಮಡೂರೊ ಮಹಿಳಾ ಅನುಯಾಯಿಯ ಪ್ರತಿಭಟನೆ, ನಿಕೊಲಸ್ ಮಡೂರೊ
ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಆಡಳಿತವು ದಕ್ಷಿಣ ಅಮೆರಿಕದ ತೈಲ ಸಂಪದ್ಭರಿತ ರಾಷ್ಟ್ರ ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ‘ಸೆರೆ’ ಹಿಡಿದು ಅಮೆರಿಕಕ್ಕೆ ಕರೆದೊಯ್ದಿದೆ. ಹಲವು ದೇಶಗಳು ಅಮೆರಿಕದ ನಡೆಯನ್ನು ಖಂಡಿಸಿದರೂ ವಲಸೆ, ಮಾದಕ ವಸ್ತುಗಳು ಮತ್ತು ಮಾದಕವಸ್ತು ಭಯೋತ್ಪಾದನೆಯನ್ನು ಹತ್ತಿಕ್ಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಆದರೆ, ಮೇಲ್ನೋಟಕ್ಕೆ ಇದು ಕಾರಣ ಎಂದು ಕಂಡರೂ ಈ ಕಾರ್ಯಾಚರಣೆಯ ಹಿಂದೆ ಬೇರೆಯದೇ ಉದ್ದೇಶಗಳಿವೆ. ವೆನೆಜುವೆಲಾದ ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟಿರುವ ಅಮೆರಿಕ ಅಲ್ಲಿನ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಲೇ ಇತ್ತು. ಚೀನಾ, ರಷ್ಯಾಗಳಿಗೆ ಹತ್ತಿರವಾಗಿ ತನ್ನ ವಿರುದ್ಧ ತೊಡೆ ತಟ್ಟಿರುವ ವೆನೆಜುವೆಲಾ ಸರ್ಕಾರವನ್ನು ಕಿತ್ತು ಒಗೆದು, ಅಲ್ಲಿ ತನ್ನನ್ನು ಬೆಂಬಲಿಸುವ ಸರ್ಕಾರವನ್ನು ಸ್ಥಾಪಿಸುವುದು ಅಮೆರಿಕದ ಉದ್ದೇಶ ಎಂದು ವಿಶ್ಲೇಷಿಸಲಾಗುತ್ತಿದೆ..
2025ರ ನೊಬೆಲ್ ಶಾಂತಿ ಪ್ರಶಸ್ತಿಯು ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ಸಂದಿತ್ತು. ಪ್ರಶಸ್ತಿ ತನಗೇ ಸಿಗಬೇಕು ಎಂದು ಅದುವರೆಗೂ ಪ್ರತಿಪಾದಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾರಿಯಾ ಅವರ ಆಯ್ಕೆಯನ್ನು ಸ್ವಾಗತಿಸಿದ್ದರು. ವಿಶೇಷ ಎನ್ನಿಸಿದ್ದು, ಮಾರಿಯಾ ಆ ಪ್ರಶಸ್ತಿಯನ್ನು ಟ್ರಂಪ್‌ಗೆ ಅರ್ಪಿಸಿದ್ದರು. ಮುಖ್ಯ ವಿಚಾರವೆಂದರೆ, ಆ ಸಂದರ್ಭದಲ್ಲಿ ವೆನೆಜುವೆಲಾದ ಕರಾವಳಿ ಮೂಲಕ ಸಾಗುತ್ತಿದ್ದ ಹಡಗುಗಳ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಅವರು ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಅಮೆರಿಕ ತನ್ನ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿತ್ತು. ದೇಶದ ಅನೇಕರ ಸಾವಿಗೆ ಕಾರಣವಾಗಿದ್ದ ಅಮೆರಿಕದ ಕಾರ್ಯಾಚರಣೆಯನ್ನು ಸಹಜವಾಗಿಯೇ ವೆನೆಜುವೆಲಾ ವಿರೋಧಿಸಿತ್ತು. ಆದರೆ, ಮಾರಿಯಾ ಅಮೆರಿಕದ ಕಾರ್ಯಾಚರಣೆಯನ್ನು ಸಮರ್ಥಿಸಿದ್ದರು. ಟ್ರಂಪ್ ಅವರನ್ನು ಬೆಂಬಲಿಸಿದ್ದರು. ಇಷ್ಟಾದರೂ ಅಮೆರಿಕದ ಕಾರ್ಯಾಚರಣೆ ಆಗಲಿ, ಮಾರಿಯಾ ಅವರ ನಡೆಯಾಗಲಿ ಅನಿರೀಕ್ಷಿತವಾಗಿಯೇನೂ ಇರಲಿಲ್ಲ.
ಜಗತ್ತಿನಲ್ಲೇ ಅತಿ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರವಾಗಿರುವ ವೆನೆಜುವೆಲಾ, ಸುಮಾರು ಮೂರು ಶತಮಾನ ಸ್ಪೇನ್‌ನ ವಸಾಹತುವಾಗಿತ್ತು. ಸ್ಪೇನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ನೆರೆಯ ರಾಷ್ಟ್ರಗಳೊಂದಿಗೆ ಗಡಿ ವಿವಾದ, ಸರ್ವಾಧಿಕಾರ, ಸೇನಾ ದಂಗೆಯಿಂದ ತೆವಳುತ್ತಾ ಸಾಗುತ್ತಿದ್ದ ವೆನೆಜುವೆಲಾಗೆ ಸ್ಥಿರತೆ ತಂದುಕೊಟ್ಟು, ಅದನ್ನು ಅಭಿವೃದ್ಧಿಯ ಪಥದಲ್ಲಿ ನಡೆಯುವಂತೆ ಮಾಡಿದ್ದು ಹ್ಯೂಗೊ ಚಾವೇಸ್. ಎಡಪಂಥೀಯರಾಗಿದ್ದ ಚಾವೇಸ್, ಉದ್ದಿಮೆಗಳ ರಾಷ್ಟ್ರೀಕರಣ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡು ಆರ್ಥಿಕ ಬೆಳವಣಿಗೆ ಸಾಧಿಸಿದರು. ಆದರೆ, ಸರ್ವಾಧಿಕಾರಿ ಎನ್ನುವ ನೆಪದಲ್ಲಿ ದೇಶದ ಒಳಗೆ ಮತ್ತು ಹೊರಗೆ ಅವರ ವಿರೋಧಿಗಳು ಹೆಚ್ಚಾದರು. ದೇಶದ ಹೊರಗಿನ ವಿರೋಧಿಗಳಲ್ಲಿ ಅಮೆರಿಕ ಪ್ರಮುಖವಾದರೆ, ಒಳಗಿನ ವಿರೋಧಿಗಳಲ್ಲಿ ಮಾರಿಯಾ ಕೊರಿನಾ ಮಚಾದೊ ಪ್ರಮುಖರಾಗಿದ್ದರು. ಅಮೆರಿಕದ ವಿರೋಧಕ್ಕೆ ಕಾರಣವಾಗಿದ್ದು ಇಂಧನ ವ್ಯಾಪಾರ.
ವೆನೆಜುವೆಲಾದ ಅನಿಲ ಸಂಪನ್ಮೂಲಗಳ ಮೇಲೆ ಅಮೆರಿಕ ದೀರ್ಘಕಾಲದಿಂದಲೂ ಕಣ್ಣಿಟ್ಟಿದೆ. 1920ರಿಂದಲೂ ಅಮೆರಿಕದ ಕಂಪನಿಗಳು ವೆನೆಜುವೆಲಾದಲ್ಲಿ ಇಂಧನ ವ್ಯಾಪಾರ ಮಾಡುತ್ತಿದ್ದವು. 1976ರಲ್ಲಿ ವೆನೆಜುವೆಲಾದಲ್ಲಿ ಸರ್ಕಾರಿ ಸ್ವಾಮ್ಯದ ಇಂಧನ ಮತ್ತು ನೈಸರ್ಗಿಕ ಅನಿಲ ಕಂಪನಿಯನ್ನು) ಸ್ಥಾಪಿಸಿದರೂ ಅಮೆರಿಕವು ಪಾಲುದಾರಿಕೆ ಮತ್ತು ಇತರ ಪರೋಕ್ಷ ವಿಧಾನಗಳಲ್ಲಿ ತೈಲ ವ್ಯಾಪಾರದಲ್ಲಿ ತೊಡಗಿತ್ತು. ಆದರೆ, ಚಾವೇಸ್ ಅಧ್ಯಕ್ಷರಾದ (1998) ನಂತರ ರಾಷ್ಟ್ರೀಕರಣದಿಂದ ನಿಯಮಗಳು ಬಿಗಿಯಾಗಿ, ಅಮೆರಿಕ ವೆನೆಜುವೆಲಾದ ತೈಲ ಮಾರುಕಟ್ಟೆಯಿಂದ ಹೊರಬರಲೇಬೇಕಾಯಿತು. ಕಮ್ಯುನಿಸ್ಟ್ ವೆನೆಜುವೆಲಾ ಕಮ್ಯುನಿಸ್ಟ್ ಚೀನಾದತ್ತ ವಾಲಿತು. ಚೀನಾಕ್ಕೆ ತೈಲ ರಫ್ತು ಮಾಡತೊಡಗಿತು. ಅಮೆರಿಕವು ವೆನೆಜುವೆಲಾ ಮೇಲೆ ಹಲವು ರೀತಿಯ ನಿರ್ಬಂಧ ಹೇರಿದ್ದಲ್ಲದೇ ಆಗಿನಿಂದಲೂ ವೆನೆಜುವೆಲಾ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಲೇ ಇತ್ತು.
ಚಾವೇಸ್ ನಂತರ ಅವರ ಉತ್ತರಾಧಿಕಾರಿಯಾಗಿ ಬಂದ ನಿಕೊಲಸ್ ಮಡೂರೊ ಕೂಡ ಚಾವೇಸ್ ಅವರ ಅಮೆರಿಕ ವಿರೋಧಿ ನಿಲುವನ್ನು ಮುಂದುವರಿಸಿದರು. ಆದರೆ, ತೈಲದ ಬೆಲೆ ಏರಿಳಿತ, ವಿರೋಧಿಗಳ ಪಿತೂರಿ ಮುಂತಾದ ಕಾರಣಗಳಿಂದ ವೆನೆಜುವೆಲಾದ ಆರ್ಥಿಕ ಸ್ಥಿತಿ ಹದಗೆಡುತ್ತಾ ಬಂದಿತು. ಆಹಾರ ಧಾನ್ಯಗಳ ಬೆಲೆ ಏರಿಕೆ, ಬಡತನ ಹೆಚ್ಚಾಯಿತು. ಲಕ್ಷಾಂತರ ಮಂದಿ ದೇಶ ತ್ಯಜಿಸಿದರು. ಇಷ್ಟಾದರೂ ಸತತ ಮೂರು ಚುನಾವಣೆಗಳಲ್ಲಿ (2013, 2018, 2024) ಜಯ ಗಳಿಸಿ ಅಧ್ಯಕ್ಷರಾಗಿ ಮುಂದುವರಿದರು. ಅವರು ಅಕ್ರಮವಾಗಿ ಚುನಾವಣೆಗಳನ್ನು ಗೆಲ್ಲುತ್ತಿದ್ದಾರೆ ಎನ್ನುವುದು ವಿರೋಧಿಗಳ ವಾದವಾಗಿತ್ತು.
ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಟ್ರಂಪ್ ಅಧಿಕಾರಕ್ಕೇರಿದ ನಂತರ, ವೆನೆಜುವೆಲಾ ಸರ್ಕಾರದ ಮೇಲಿನ ಒತ್ತಡವನ್ನು ತೀವ್ರಗೊಳಿಸಿದರು; ಮಡೂರೊ ಬಂಧನಕ್ಕೆ ನೆರವಾಗುವಂಥ ಮಾಹಿತಿ ನೀಡಿದರೆ ಬಹುಮಾನ ಕೊಡುವುದಾಗಿ ಘೋಷಿಸಿದರು. ಜತೆಯಲ್ಲೇ, ಮಾದಕ ವಸ್ತುಗಳ ನೆಪದಲ್ಲಿ, ದಕ್ಷಿಣ ಅಮೆರಿಕದಿಂದ ಅಮೆರಿಕದತ್ತ ಸಾಗುತ್ತಿದ್ದ ಹಡಗುಗಳ ಮೇಲೆ 30 ದಾಳಿಗಳನ್ನು ನಡೆಸಿ, 110ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿದರು. ವೆನೆಜುವೆಲಾದ ಸಾವಿರಾರು ಪ್ರಜೆಗಳು ಅಕ್ರಮವಾಗಿ ಅಮೆರಿಕ ಪ್ರವೇಶಿಸುತ್ತಿದ್ದು, ಅದಕ್ಕೆ ಮಡೂರೊ ಕಾರಣ ಎನ್ನುವುದು ಅಮೆರಿಕದ ವಾದವಾಗಿತ್ತು. ವೆನೆಜುವೆಲಾದ ಜೈಲುಗಳಲ್ಲಿರುವ ಕೈದಿಗಳನ್ನು ಅಮೆರಿಕಕ್ಕೆ ರವಾನಿಸುತ್ತಿದ್ದಾರೆ ಎಂದು ಯಾವುದೇ ಆಧಾರ ನೀಡದೇ ಆರೋಪಿಸಿತ್ತು. ವೆನೆಜುವೆಲಾವು ತೈಲದಿಂದ ಬಂದ ಆದಾಯವನ್ನು ಮಾದಕ ದ್ರವ್ಯ ಸಂಬಂಧಿ ಅಪರಾಧಗಳಿಗೆ ಬಳಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದರು. ವೆನೆಜುವೆಲಾ,ತೈಲ ವ್ಯಾಪಾರದಲ್ಲಿ ಅಮೆರಿಕದ ಡಾಲರ್ ಕರೆನ್ಸಿಯನ್ನು ಬಳಸುವುದನ್ನು 2017ರಿಂದ ನಿಲ್ಲಿಸಿತ್ತು. ಚೀನಾದ ಯುವಾನ್ ಕರೆನ್ಸಿ ಮೂಲಕ ವಹಿವಾಟು ನಡೆಸುತ್ತಿತ್ತು. ಇದೂ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿತ್ತು.
ಎಲ್ಲ ಆರೋಪಗಳನ್ನು ನಿರಾಕರಿಸಿದ್ದ ಮಡೂರೊ, ಅಮೆರಿಕವು ತನ್ನನ್ನು ಅಧಿಕಾರದಿಂದ ಕೆಳಗಿಳಿಸಿ, ವೆನೆಜುವೆಲಾದ ತೈಲ ನಿಕ್ಷೇಪಗಳ ಮೇಲೆ ಹಿಡಿತ ಸಾಧಿಸಲು ಅಮೆರಿಕ ಪ್ರಯತ್ನ ನಡೆಸುತ್ತಿದ್ದು, ಅದಕ್ಕೆ ಮಾದಕ ವಸ್ತುಗಳ ದಾಳವನ್ನು ಬಳಸುತ್ತಿದೆ ಎಂದು ಹೇಳಿದ್ದರು.
ಭೌಗೋಳಿಕವಾಗಿ ಪಶ್ಚಿಮದ ರಾಷ್ಟ್ರಗಳಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಹೆಚ್ಚಿಸುವುದು ಅಮೆರಿಕದ ಈ ಕ್ರಮದ ಹಿಂದಿನ ಮತ್ತೊಂದು ಕಾರಣವಾದರೆ, ದಕ್ಷಿಣ ಅಮೆರಿಕದ ವ್ಯಾಪ್ತಿಯಲ್ಲಿ ಚೀನಾ ಮತ್ತು ರಷ್ಯಾ ಪ್ರಭಾವವನ್ನು ತಗ್ಗಿಸುವುದು ಮಗದೊಂದು ಕಾರಣ.
ವೆನೆಜುವೆಲಾ ಸೇರಿದಂತೆ ದಕ್ಷಿಣ ಅಮೆರಿಕದ ಹಲವು ರಾಷ್ಟ್ರಗಳಲ್ಲಿ ಚೀನಾವು ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್ ಮೂಲಕ ಭಾರಿ ಪ್ರಮಾಣದಲ್ಲಿ ಬಂಡವಾಳ ಹೂಡಿದೆ. ತನ್ನ ಮಹತ್ವಾಕಾಂಕ್ಷೆ ಯೋಜನೆಗೆ ಈ ಭಾಗದ 24 ರಾಷ್ಟ್ರಗಳು ಸಹಿ ಹಾಕಿವೆ ಎಂದು ಚೀನಾ ಈ ಹಿಂದೆ ಹೇಳಿಕೊಂಡಿತ್ತು. ಇಲ್ಲಿನ ಹಲವು ದೇಶಗಳಿಗೆ ಚೀನಾ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲೊಂದು. ಚೀನಾದೊಂದಿಗೆ ಪಾಲುದಾರಿಕೆ ಇದ್ದ ಹೊರತಾಗಿಯೂ ಈ ವಲಯದ ಹಲವು ರಾಷ್ಟ್ರಗಳು ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಹೊಂದಿವೆ. ಆದರೆ, ವೆನೆಜುವೆಲಾ ಮತ್ತು ಕ್ಯೂಬಾ ಅಮೆರಿಕದ ವಿರುದ್ಧ ತೊಡೆ ತಟ್ಟಿದ್ದವು. ಇತ್ತೀಚಿನ ವರ್ಷಗಳಲ್ಲಿ ಅಮೆರಿಕವು ಕ್ಯೂಬಾಕ್ಕಿಂತಲೂ ವೆನೆಜುವೆಲಾವನ್ನೇ ಹೆಚ್ಚು ಗುರಿಯಾಗಿಸಿಕೊಂಡಿತ್ತು.
ಅಮೆರಿಕದಿಂದ ದೂರವಾದ ಬಳಿಕ ಚೀನಾವು ವೆನೆಜುವೆಲಾಕ್ಕೆ ಹತ್ತಿರವಾಗಿತ್ತು. ಚೀನಾವು ಅಲ್ಲಿನ ಇಂಧನ ಕ್ಷೇತ್ರದಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ವೆನೆಜುವೆಲಾವು ತಾನು ಉತ್ಪಾದಿಸುವ ಒಟ್ಟು ತೈಲದಲ್ಲಿ ಶೇ 80ರಷ್ಟನ್ನು ಚೀನಾಕ್ಕೆ ಮಾರುತ್ತಿದೆ. 2024ರಲ್ಲಿ ಅಮೆರಿಕವು ವೆನೆಜುವೆಲಾದ ಮೇಲೆ ನಿರ್ಬಂಧಗಳನ್ನು ಹೇರಿದ ನಂತರ ಚೀನಾವು ಹೂಡಿಕೆಯನ್ನು ಸ್ವಲ್ಪ ಕಡಿಮೆ ಮಾಡಿದ್ದರೂ ಇಂಧನ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಮುಂದುವರಿದಿತ್ತು. ಚೀನಾ ಕಾನ್‌ಕೋರ್ಡ್ ರಿಸೋರ್ಸಸ್ ಕಾರ್ಪೊರೇಷನ್ ಎಂಬ ಖಾಸಗಿ ಕಂಪೆನಿಯು ವೆನೆಜುವೆಲಾದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯೊಂದಿಗೆ ಮ್ಯಾರಕೈಬೊ ಸರೋವರದಲ್ಲಿ ಎರಡು ತೈಲ ಉತ್ಪಾದನಾ ಘಟಕ ಅಭಿವೃದ್ಧಿಪಡಿಸಲು 100 ಕೋಟಿ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು.
ಜಗತ್ತಿನಲ್ಲೇ ಅತಿ ಹೆಚ್ಚು ಕಚ್ಚಾ ತೈಲ ನಿಕ್ಷೇಪ ಹೊಂದಿರುವ ರಾಷ್ಟ್ರ ವೆನೆಜುವೆಲಾ. ಜಗತ್ತಿನಲ್ಲಿರುವ ಒಟ್ಟು ತೈಲ ನಿಕ್ಷೇಪದಲ್ಲಿ ಶೇ 19.35ರಷ್ಟು ವೆನೆಜುವೆಲಾ ಒಂದರಲ್ಲೇ ಇದೆ. ಒಪೆಕ್‌ನ ಅಂಕಿ ಅಂಶಗಳ ಪ್ರಕಾರ 2024ರಲ್ಲಿ ಜಾಗತಿಕವಾಗಿ ಲಭ್ಯವಿದ್ದ ತೈಲ ನಿಕ್ಷೇಪದ ಪ್ರಮಾಣ 1,566 ಶತಕೋಟಿ (1.56 ಲಕ್ಷ ಕೋಟಿ) ಬ್ಯಾರೆಲ್‌ಗಳು. ಈ ಪೈಕಿ ವೆನುಜುವೆಲಾದಲ್ಲೇ 303.22 ಶತ ಕೋಟಿ (30,320 ಕೋಟಿ) ಬ್ಯಾರೆಲ್‌ಗಳಷ್ಟು ತೈಲ ಲಭ್ಯವಿದೆ. ಜಗತ್ತಿನಲ್ಲಿ ಅತಿ ಹೆಚ್ಚು ತೈಲ ನಿಕ್ಷೇಪ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಈ ಪುಟ್ಟ ರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕ 10ನೇ ಸ್ಥಾನದಲ್ಲಿದೆ. ಅಲ್ಲಿ 4,500 ಕೋಟಿ ಬ್ಯಾರಲ್‌ಗಳಷ್ಟು ತೈಲ ಲಭ್ಯವಿದೆಯಷ್ಟೆ.
ವೆನೆಜುವೆಲಾದ ಮೇಲೆ ಅಷ್ಟೇ ಅಲ್ಲ; ಇಡೀ ದಕ್ಷಿಣ ಅಮೆರಿಕದ ಹಲವು ರಾಷ್ಟ್ರಗಳ ಮೇಲೆ ಅಮೆರಿಕ ಕಣ್ಣು ನೆಟ್ಟಿದೆ. ಇದಕ್ಕೆ ಒಂದು ತೈಲ ಕಾರಣವಾದರೆ, ಇನ್ನೊಂದು ಲಿಥಿಯಂ. ವೆನೆಜುವೆಲಾ ಸೇರಿದಂತೆ ದಕ್ಷಿಣ ಅಮೆರಿಕದ ಹಲವು ರಾಷ್ಟ್ರಗಳಲ್ಲಿ ಲಿಥಿಯಂ ನಿಕ್ಷೇಪ ಭಾರಿ ಪ್ರಮಾಣದಲ್ಲಿದೆ. ಅರ್ಜೆಂಟೀನಾ, ಬೊಲಿವಿಯಾ, ಚಿಲಿ ರಾಷ್ಟ್ರಗಳನ್ನು ಲಿಥಿಯಂ ತ್ರಿಕೋನ (ಲಿಥಿಯಂ ಟ್ರೈಆ್ಯಂಗಲ್) ಎಂದೇ ಕರೆಯಲಾಗುತ್ತದೆ. ವಾಹನ ತಯಾರಿಕೆ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಈಗ ಲಿಥಿಯಂ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಬ್ಯಾಟರಿಗಳ ಉತ್ಪಾದನೆಗೆ ಇದು ಅತಿ ಅಗತ್ಯವಾಗಿದ್ದು, ಕೈಗಾರಿಕೆಗಳು ಅದರ ಲಭ್ಯತೆಯ ಮೇಲೆ ನಿಂತಿದೆ. ಲಿಥಿಯಂ ಆಧಾರಿತ ಕೈಗಾರಿಕೆಗಳಲ್ಲಿ ಚೀನಾ ದಾಪುಗಾಲು ಹಾಕುತ್ತಿದ್ದು, ಅದರ ಪಾರಮ್ಯವನ್ನು ಮುರಿಯುವುದಕ್ಕೆ ಅಮೆರಿಕ ಪ್ರಯತ್ನಿಸುತ್ತಿದೆ.
ನಿಕೊಲಸ್ ಮಡೂರೊ ಅವರನ್ನು ಹೊತ್ತೊಯ್ದಿರುವ ಅಮೆರಿಕವು, ಸೂಕ್ತವಾದ, ಸುರಕ್ಷಿತವಾದ, ನ್ಯಾಯಯುತವಾದ ಪರ್ಯಾಯ ವ್ಯವಸ್ಥೆ ಆಗುವವರೆಗೂ ವೆನೆಜುವೆಲಾದ ಆಡಳಿತವನ್ನು ತಾನೇ ನಡೆಸುವುದಾಗಿ ಘೋಷಿಸಿದೆ. ತಾವು ಈ ಹಿಂದೆ ಬೆಂಬಲಿಸಿದ್ದ ಮತ್ತು ಅಮೆರಿಕ ಪರ ನಿಲುವು ಹೊಂದಿದ್ದ ವೆನೆಜುವೆಲಾ ವಿರೋಧ ಪಕ್ಷದ (ವೆಂಟೆ ವೆನೆಜುವೆಲಾ) ನಾಯಕಿ ಮಚಾದೊ ಅವರು ದೇಶದ ಜನರ ವಿಶ್ವಾಸ ಉಳಿಸಿಕೊಂಡಿಲ್ಲ ಎಂದೂ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಮಡೊರೊ ಅವರನ್ನು ಅಮೆರಿಕವು ಮಾದಕ ವಸ್ತುಗಳಿಗೆ ಸಂಬಂಧಿಸಿದ ನ್ಯಾಯಾಲಯದಲ್ಲಿ ಶೀಘ್ರದಲ್ಲೇ ಹಾಜರುಪಡಿಸುವ ಸಾಧ್ಯತೆ ಇದೆ.
ವೆನೆಜುವೆಲಾದ ಸುಪ್ರೀಂ ಕೋರ್ಟ್, ಉಪಾಧ್ಯಕ್ಷ ಡೆಲ್ಸಿ ರಾಡ್ರಿಗಸ್ ಅವರನ್ನು ಮಧ್ಯಂತರ ಅಧ್ಯಕ್ಷರಾಗಿ ನೇಮಿಸಿದೆ. ತಾವು ಯಾವುದೇ ದೇಶದ ವಸಾಹತು ಆಗಿರಲು ಇಷ್ಟಪಡುವುದಿಲ್ಲ, ಮಡೂರೊ ಅವರು ಮಾತ್ರವೇ ನಮ್ಮ ಅಧ್ಯಕ್ಷರು ಎಂದು ರಾಡ್ರಿಗಸ್ ಹೇಳಿದ್ದಾರೆ. ಈ ಮೂಲಕ ಅಮೆರಿಕದೊಂದಿಗೆ ಕೈ ಜೋಡಿಸುವ ಸಾಧ್ಯತೆಯನ್ನು ಅವರು ನಿರಾಕರಿಸಿದ್ದಾರೆ. ಕೆರೀಬಿಯನ್ ಸಮುದ್ರದಲ್ಲಿ ಅಮೆರಿಕ ನಿಯೋಜಿಸಿರುವ ಸೇನೆಗೆ ಪ್ರತಿಯಾಗಿ ವೆನೆಜುವೆಲಾವೂ ತನ್ನ ನೆಲದಲ್ಲಿ ಸೇನೆ ನಿಯೋಜಿಸಿದೆ.
ವೆನೆಜುವೆಲಾದಲ್ಲಿ ತಾವೇ ಆಡಳಿತ ನಡೆಸುತ್ತೇವೆ ಎನ್ನುವ ಟ್ರಂಪ್ ಹೇಳಿಕೆಗೆ ಪೂರಕ ವಾತಾವರಣವು ಸದ್ಯ ಅಲ್ಲಿ ಕಾಣುತ್ತಿಲ್ಲ. ಅದು ವೆನೆಜುವೆಲಾದಲ್ಲಿ ಹೇಗೆ ಆಡಳಿತ ನಡೆಸಲಿದೆ, ಸೇನಾ ಕಾರ್ಯಾಚರಣೆ ಆರಂಭಿಸುವುದೇ, ಮಡೂರೊ ಅವರಿಗೆ ನಿಷ್ಠವಾಗಿದ್ದ ವೆನೆಜುವೆಲಾದ ಸೇನೆ ಈಗ ಯಾವ ನಿಲುವು ತಳೆಯಲಿದೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
l ಸ್ವತಂತ್ರ ರಾಷ್ಟ್ರಗಳ ಆಂತರಿಕ ರಾಜಕೀಯದಲ್ಲಿ ಮೂಗುತೂರಿಸುವುದು ಅಮೆರಿಕದ ಹಳೇ ಚಾಳಿ. 120 ವರ್ಷಗಳಲ್ಲಿ ಸುಮಾರು 35 ರಾಷ್ಟ್ರಗಳಲ್ಲಿನ ಸರ್ಕಾರವನ್ನು ಅಮೆರಿಕ ಉರುಳಿಸಿದೆ. ಅದಕ್ಕೆ ಹೊಸ ಸೇರ್ಪಡೆ ವೆನೆಜುವೆಲಾ
l 25 ವರ್ಷಗಳಲ್ಲಿ ಅಮೆರಿಕವು ಮೂರು ರಾಷ್ಟ್ರಗಳ ಆಂತರಿಕ ರಾಜಕೀಯದಲ್ಲಿ ಮಧ್ಯಪ್ರವೇಶಿಸಿ, ಅಲ್ಲಿನ ಸರ್ಕಾರವು ಪತನವಾಗುವಂತೆ ಮಾಡಿದೆ. ಹಿಂಸಾಚಾರ, ಅಶಾಂತಿಯ ಕಾರಣವನ್ನು ಮುಂದೊಡ್ಡಿ ತನ್ನ ಸೈನ್ಯವನ್ನು ಕಳುಹಿಸಿ, ಯುದ್ಧದ ಮೂಲಕ ಸರ್ಕಾರವನ್ನು ಉರುಳಿಸಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದಾಗಿ ಹೇಳುತ್ತಾ ಬೇರೆಯವರಿಗೆ ಆಡಳಿತವನ್ನು ಹಸ್ತಾಂತರಿಸುವುದು ಅಮೆರಿಕ ಪಾಲಿಸಿಕೊಂಡು ಬಂದಿರುವ ಕ್ರಮ
l 2001ರಲ್ಲಿ ತಾಲಿಬಾನ್ ಆಡಳಿತವಿದ್ದ ಅಫ್ಗಾನಿಸ್ಥಾನದ ರಾಜಧಾನಿ ಕಾಬೂಲ್‌ಗೆ ನುಗ್ಗಿದ ಅಮೆರಿಕ ಬೆಂಬಲಿತ ಸೇನಾ ಪಡೆಗಳು ಕೆಲವು ವಾರಗಳವರೆಗೆ ಕಾರ್ಯಾಚರಣೆ ನಡೆಸಿ ತಾಲಿಬಾನ್ ಆಡಳಿತವನ್ನು ಕಿತ್ತೆಸೆದವು. ಅಮೆರಿಕ ಬೆಂಬಲದಿಂದ ಹಮೀದ್ ಕರ್ಜೈ ನೇತೃತ್ವದ ಸರ್ಕಾರವು ಅಲ್ಲಿ ಸ್ಥಾಪನೆಯಾಯಿತು. ಆದರೆ, ಎರಡು ದಶಕಗಳ ಬಳಿಕ ಅಲ್ಲಿ ಮತ್ತೆ ತಾಲಿಬಾನ್ ಅಧಿಕಾರಕ್ಕೆ ಬಂದಿದೆ
l 2003ರಲ್ಲಿ ಇರಾಕ್‌ನಲ್ಲೂ ಸದ್ದಾಂ ಹುಸೇನ್ ಆಡಳಿತದ ವಿರುದ್ಧ ಅಮೆರಿಕ ಇದೇ ರೀತಿಯ ಕಾರ್ಯಾಚರಣೆ ನಡೆಸಿ, ಸದ್ದಾಂ ಅವರ ಆಡಳಿತವನ್ನು ಕೊನೆಗೊಳಿಸಿ, ಅವರನ್ನು ಬಂಧಿಸಿತ್ತು. ಅಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಸ್ಥಾಪಿಸುವ ಭರವಸೆಯನ್ನು ಅಮೆರಿಕ ನೀಡಿತ್ತು. ಆದರೆ, ನಾಗರಿಕ ಯುದ್ಧ, ರಾಜಕೀಯ ಅಸ್ಥಿರತೆಯಿಂದ ತತ್ತರಿಸಿರುವ ಅಲ್ಲೀಗ ಇಸ್ಲಾಮಿಕ್ ಸ್ಟೇಟ್ ಎಂಬ ಭಯೋತ್ಪಾದನಾ ಸಂಘಟನೆ ತಲೆ ಎತ್ತಿ, ಇಡೀ ಪಶ್ಚಿಮ ಏಷ್ಯಾದ ಭದ್ರತೆಗೇ ಸವಾಲಾಗಿದೆ
l 2011ರಲ್ಲಿ ಲಿಬಿಯಾದಲ್ಲಿ ನಾಗರಿಕ ಯುದ್ಧ ನಡೆಯುತ್ತಿದ್ದಾಗ ಅಮೆರಿಕ ಬೆಂಬಲಿತ ನ್ಯಾಟೊ ಪಡೆಗಳು ಮಧ್ಯಪ್ರವೇಶಿಸಿ ಮುಅಮ್ಮರ್ ಗಡಾಫಿ ನೇತೃತ್ವದ ಸರ್ಕಾರವನ್ನು ಉರುಳಿಸಿದ್ದವು. ಆ ಕಾರ್ಯಾಚರಣೆಯಲ್ಲಿ ಗಡಾಫಿ ಅವರು ಮೃತಪಟ್ಟಿದ್ದರು. ಈಗಲೂ ಅಲ್ಲಿನ ರಾಜಕೀಯ ಸ್ಥಿತಿ ಸ್ಥಿರವಾಗಿಲ್ಲ. ನ್ಯಾಯ ಸಮ್ಮತ ಚುನಾವಣೆ ನಡೆಸುವ ಪ್ರಯತ್ನಗಳು ಸಫಲವಾಗಿಲ್ಲ
l ಇದಲ್ಲದೇ, ತನ್ನ ಗುಪ್ತಚರ ಸಂಸ್ಥೆ ಸಿಐಎಯನ್ನು ಬಳಸಿಕೊಂಡು ಕೆಲವು ದೇಶಗಳಲ್ಲಿ ಕ್ಷಿಪ್ರಕ್ರಾಂತಿ ನಡೆಸಿ, ಅಲ್ಲಿನ ಸರ್ಕಾರ ಉರುಳಿಸಿರುವ ಆರೋಪವೂ ಅಮೆರಿಕದ ಮೇಲಿದೆ.
––––
ಆಧಾರ: ಪಿಟಿಐ, ಬಿಬಿಸಿ, ಒಪೆಕ್ ವಾರ್ಷಿಕ ವರದಿ–2025, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.