
ವಾಷಿಂಗ್ಟನ್: ಭವಿಷ್ಯದಲ್ಲಿ ಅಧ್ಯಕ್ಷೀಯ ಚುನಾವಣೆ ಸ್ಪರ್ಧಿಸುವುದಾಗಿ ಅಮೆರಿಕದ ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಬಿಬಿಸಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಮುಂದಿನ ವರ್ಷಗಳಲ್ಲಿ ಮಹಿಳೆಯೊಬ್ಬರು ಅಮೆರಿಕದ ಅಧ್ಯಕ್ಷರಾಗಲಿದ್ದಾರೆ. ಬಹುಶಃ ಅದು ನಾನು ಆಗಿರಬಹುದು’ ಎಂದಿದ್ದಾರೆ.
‘ನಾನಿನ್ನೂ ಮುಗಿಸಿಲ್ಲ’ ಎಂದು ಹೇಳಿದ್ದಾರೆ.
2028ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಬೇಕೋ ಬೇಡವೋ ಎನ್ನುವುದರ ಬಗ್ಗೆ ನಿರ್ಧರಿಸಿಲ್ಲ ಎಂದಿರುವ ಅವರು, ಮುಂದೆ ಭಾರಿ ಸವಾಲುಗಳನ್ನು ಎದುರಿಸಬೇಕಾಗಬಹುದು ಎನ್ನುವುದನ್ನು ತಳ್ಳಿ ಹಾಕಿದ್ದಾರೆ.
‘ನಾನು ನನ್ನ ಜೀವವನ್ನು ಜನರ ಸೇವೆಯಲ್ಲೇ ಸವೆಸಿದ್ದೇನೆ. ಅದು ನನ್ನ ರಕ್ತದಲ್ಲಿಯೇ ಇದೆ. ಜನ ಸೇವೆಗೆ ಅನೇಕ ಮಾರ್ಗಗಳಿವೆ. ನಾನು ಚುನಾವಣೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ’ ಎಂದು ಹೇಳಿದ್ದಾರೆ.
2024ರ ಅಧ್ಯಕ್ಷೀಯ ಚುನಾವಣೆಯಿಂದ ಜೋ ಬೈಡನ್ ಹಿಂದೆ ಸರಿದ ಬಳಿಕ ಕಮಲಾ ಅವರು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದರು. ಆದರೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಸೋಲನುಭವಿಸಿದ್ದರು. ಈ ಬಗ್ಗೆ ಅವರು ಬರೆದಿರುವ ‘107 Days’ ಎನ್ನುವ ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದ್ದು, ಆ ಬಳಿಕ ಹಲವು ಸಂದರ್ಶನಗಳನ್ನು ನೀಡಿದ್ದಾರೆ.
‘2028ರ ಚುನಾವಣೆಯಲ್ಲಿ ಸ್ಪರ್ಧಿಸುವ ಆಯ್ಕೆ ನನ್ನ ಮುಂದೆ ಇದೆ. ಟ್ರಂಪ್ ವಿರುದ್ಧ ಹೋರಾಡುವುದಲ್ಲಿ ಹಾಗೂ ಚುನಾವಣೆಯಗೆ ತಯಾರಿ ನಡೆಸುವುದು ಸೇರಿದಂತೆ ಹಲವು ವಿಷಯಗಳಲ್ಲಿ ನಾನೇ ಪಕ್ಷವನ್ನು ಮುನ್ನಡೆಸುತ್ತಿದ್ದೇನೆ’ ಎಂದು ಕಳೆದ ವಾರ ಅಸೋಸಿಯೇಟ್ ಪ್ರೆಸ್ (ಎಪಿ)ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
2028ರ ಚುನಾವಣೆಗೆ ಸ್ಪರ್ಧಿಸುವ ಯೋಜನೆ ಇದೆಯೇ ಎನ್ನುವ ಪ್ರಶ್ನೆಗೆ, ‘ಆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸ್ಪರ್ಧಿಸಲೂಬಹುದು, ಇರದಿರಲೂಬಹುದು’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.