ADVERTISEMENT

ಮತ್ತೆ ನಾಲ್ಕು ವರ್ಷ ಡೊನಾಲ್ಡ್ ಟ್ರಂಪ್‌ನ್ನು‌ ಸಹಿಸಲಾಗದು: ಕಮಲಾ ಹ್ಯಾರಿಸ್

ಕಮಲಾಗೆ ಅಮೆರಿಕದ ಅಧ್ಯಕ್ಷೆಯಾಗುವ ಬಯಕೆ –ಟ್ರಂಪ್‌ ವ್ಯಂಗ್ಯ

ಪಿಟಿಐ
Published 3 ನವೆಂಬರ್ 2020, 7:59 IST
Last Updated 3 ನವೆಂಬರ್ 2020, 7:59 IST
ಕಮಲಾ ಹ್ಯಾರಿಸ್‌
ಕಮಲಾ ಹ್ಯಾರಿಸ್‌   

ವಾಷಿಂಗ್ಟನ್‌: ‘ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ದೇಶವನ್ನು ಮುನ್ನಡೆಸುವಲ್ಲಿ ವಿಫಲರಾಗಿದ್ದಾರೆ. ಮುಂದಿನ ನಾಲ್ಕು ವರ್ಷ ಮತ್ತೆ ಅವರನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಅಮೆರಿಕದ ಉಪಾಧ್ಯಕ್ಷ ಸ್ಥಾನದ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರುಫಿಲಿಡೆಲ್ಫಿಯಾದಲ್ಲಿ ವಾಗ್ದಾಳಿ ನಡೆಸಿದರು.

ಸೋಮವಾರ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ನಾವು ನಮ್ಮ ದೇಶವನ್ನು ಪ್ರೀತಿಸುತ್ತೇವೆ. ಹಾಗಾಗಿ ನಾವು ನಾಳೆ ಜೊ ಬೈಡನ್‌ ಅವರನ್ನು ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಆಯ್ಕೆ ಮಾಡಲಿದ್ದೇವೆ’ ಎಂದರು.

ಪ್ರಚಾರಕ್ಕಾಗಿ ಹಲವು ನಗರ, ಪಟ್ಟಣಗಳಿಗೆ ಭೇಟಿ ನೀಡಿದ್ದೇವೆ. ಜನರು ನೆಚ್ಚಿನ ನಾಯಕನನ್ನು ಬೆಂಬಲಿಸಲು ಮಕ್ಕಳೊಂದಿಗೆ ಆಗಮಿಸುತ್ತಾರೆ. ತಮ್ಮ ಉತ್ಸಾಹವನ್ನು ತೋರಿಸುತ್ತಾರೆ. ಆಗ ನಮಗೂ ಉತ್ಸಾಹ ಹೆಚ್ಚಲಿದೆ’ ಎಂದು ಅವರು ಹೇಳಿದರು.

ADVERTISEMENT

‘ಆರೋಗ್ಯ, ಆರ್ಥಿಕತೆ, ಮಕ್ಕಳ ಭವಿಷ್ಯ, ಎಲ್ಲರನ್ನು ಸಮಾನ ಗೌರವದಿಂದ ಕಾಣುವ ಕಾನೂನು ವ್ಯವಸ್ಥೆ, ಗಿನ್ಸ್‌ಬರ್ಗ್‌ನ ಪರಂಪರೆಯನ್ನು ಮುನ್ನಡೆಸುವ ನ್ಯಾಯಾಲಯ ಸೇರಿದಂತೆ ಎಲ್ಲವೂ ಅಪಾಯದಲ್ಲಿದೆ’ ಎಂದು ವ್ಯಾಖ್ಯಾನಿಸಿದರು.

ಟ್ರಂಪ್‌ ಅವರು ಅಮೆರಿಕದ ನಾಗರಿಕರಲ್ಲಿ ಕೊರೊನಾ ಸೋಂಕಿನ ಬಗ್ಗೆ ಸುಳ್ಳು ಹೇಳಿದ್ದಾರೆ. ಜ.28 ರಂದು ಅವರಿಗೆ ತಿಳಿದಿದ್ದ ವಿಷಯ ನಮಗೂ ಹೇಳಿದ್ದರೆ ನಾವು ಸೋಂಕಿನಿಂದ ದೂರವಿರಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು ಎಂದು ಟೀಕಿಸಿದರು.

ಟ್ರಂಪ್‌ ಕೇವಲ ತಮ್ಮ ಬಗ್ಗೆ ಚಿಂತಿಸಿದರು. ಅಮೆರಿಕದ ಬಗ್ಗೆ ಅಲ್ಲ. ಈ ನಡೆಯಿಂದ 2.30 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಕಳೆದುಕೊಂಡಿದ್ದೇವೆ. ಟ್ರಂಪ್‌ಗೆ ವೈರಸ್‌ ಅನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಪರಿಣಾಮ, ಆರ್ಥಿಕ ಬಿಕ್ಕಟ್ಟನ್ನು ನಾವು ಅನುಭವಿಸುತ್ತಿದ್ದೇವೆ ಎಂದು ಹ್ಯಾರಿಸ್‌ ದೂರಿದರು.

ಕಮಲಾಗೆ ಅಧ್ಯಕ್ಷೆ ಆಗುವ ಬಯಕೆ –ಟ್ರಂಪ್ ವ್ಯಂಗ್ಯ

ಕೆನೊಷಾ ವರದಿ: ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್, ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಆಗಲು ಬಯಸಿದ್ದಾರೆ. ಈ ಒಂದು ‘ಸಕಾರಣ’ಕ್ಕಾಗಿ ತಮ್ಮ ಪ್ರತಿಸ್ಪರ್ಧಿ ಜೋ ಬೈಡನ್ ಅವರಿಗೆ ಮತ ನೀಡಬಾರದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕೋರಿದ್ದಾರೆ.

‘77 ವರ್ಷದ ಬೈಡನ್‌ ಒಮ್ಮೆ ಚುನಾಯಿತರಾದರೆ ಒಂದು ತಿಂಗಳ ಅವಧಿಯಲ್ಲಿಯೇ ಕಮಲಾ ಹ್ಯಾರಿಸ್ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ’ ಎಂದು ಕೆನೊಷಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಟ್ರಂಪ್‌ ವ್ಯಾಖ್ಯಾನಿಸಿದರು.

‘ಬೈಡನ್ ಮತ್ತು ಕಮಲಾ?’ ಇಲ್ಲಿ ಕಮಲಾ ಯಾರೆಂದು ಯಾರಿಗಾದರೂ ತಿಳಿದಿದೆಯೇ ಎಂದು ಸಭಿಕರನ್ನು ಪ್ರಶ್ನಿಸಿದರು. ಈ ಮಹಿಳೆಗೆ ಮೊದಲ ಅಧ್ಯಕ್ಷೆ ಆಗುವ ಬಯಕೆಯಿದೆ. ಇದೇ ಕಾರಣದಿಂದ ನಿದ್ರೆ ಸ್ಥಿತಿಯಲ್ಲಿರುವ ಬೈಡನ್‌ ಅವರಿಗೆ ನೀವು ಬೆಂಬಲಿಸುವುದಿಲ್ಲ ಅಲ್ಲವೇ?’ ಎಂದು ಸಭಿಕರನ್ನು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.