ಡೊನಾಲ್ಡ್ ಟ್ರಂಪ್
– ಫೇಸ್‌ಬುಕ್ ಚಿತ್ರ
ನ್ಯೂಯಾರ್ಕ್/ವಾಷಿಂಗ್ಟನ್: ಅಮೆರಿಕ ಪೌರತ್ವ ಪಡೆಯಬೇಕು ಎಂದು ಬಯಸುವ ವಲಸಿಗರಿಗಾಗಿ ಹತ್ತು ಲಕ್ಷ ಡಾಲರ್ ಶುಲ್ಕದ (ಅಂದಾಜು ₹9 ಕೋಟಿ) ‘ಗೋಲ್ಡ್ ಕಾರ್ಡ್’ಗೆ ಚಾಲನೆ ನೀಡಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಅಮೆರಿಕ್ಕೆ ಗಮನಾರ್ಹ ಕೊಡುಗೆ ನೀಡಬಲ್ಲಂಥ ಅಭ್ಯರ್ಥಿಗಳ ಸಾಮರ್ಥ್ಯ ಪರಿಗಣಿಸಿ, ವೀಸಾ ಆಧಾರಿತ ಈ ಸೌಲಭ್ಯವನ್ನು ನೀಡಲಾಗುತ್ತದೆ.
ಅಮೆರಿಕದ ವಿಶ್ವವಿದ್ಯಾಲಯಗಳು/ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಪೂರ್ಣಗೊಳಿಸುವ ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳುವ ಕಂಪನಿಗಳಿಗೆ ‘ಗೋಲ್ಡ್ ಕಾರ್ಡ್’ ಅನುಕೂಲವಾಗಲಿದೆ.
ಈ ಕಾರ್ಡ್‌ಗೆ ಚಾಲನೆ ನೀಡಿ ಮಾತನಾಡಿದ ಟ್ರಂಪ್,‘ಅಮೆರಿಕದಲ್ಲಿ ಉನ್ನತ ವ್ಯಾಸಂಗ ಪೂರೈಸುವ ಭಾರತ ಮತ್ತು ಚೀನಾ ವಿದ್ಯಾರ್ಥಿಗಳು, ಮರಳಿ ತಮ್ಮ ದೇಶಗಳಿಗೆ ಹೋಗಬೇಕಾಗುತ್ತದೆ. ಇದು ನಾಚಿಕೆಗೇಡಿನ ವಿಚಾರ’ ಎಂದು ಹೇಳಿದ್ದಾರೆ.
‘ಪ್ರತಿಭಾವಂತ ವ್ಯಕ್ತಿ ನಮ್ಮ ದೇಶಕ್ಕೆ ಬರುತ್ತಾನೆ ಎಂದರೆ ಅದು ನಮ್ಮ ಪಾಲಿಗೆ ಉಡುಗೊರೆ ಇದ್ದಂತೆ’ ಎಂದೂ ಹೇಳಿದ್ದಾರೆ.
ಐಬಿಎಂ ಸಿಇಒ ಅರವಿಂದ ಕೃಷ್ಣ ಹಾಗೂ ಡೆಲ್ ಟೆಕ್ನಾಲಜೀಸ್ ಸಿಇಒ ಮೈಕೆಲ್ ಡೆಲ್ ಅವರ ಉಪಸ್ಥಿತಿಯಲ್ಲಿ ‘ಗೋಲ್ಡ್ ಕಾರ್ಡ್’ ವೆಬ್‌ಸೈಟ್‌ಗೆ ಚಾಲನೆ ನೀಡಿದ ಟ್ರಂಪ್,‘ವಾರ್ಟನ್, ಹಾರ್ವರ್ಡ್ ಅಥವಾ ಎಂಐಟಿಯಂತಹ ಅಮೆರಿಕದ ಅಗ್ರಮಾನ್ಯ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಬಯಸುವ ಕಂಪನಿಗಳು ಈಗ ಈ ವೆಬ್‌ಸೈಟ್ ಮೂಲಕ ಗೋಲ್ಡ್ ಕಾರ್ಡ್ ಖರೀದಿಸಬಹುದು’ ಎಂದರು.
‘ಅಮೆರಿಕದ ವಿ.ವಿಗಳು/ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಪೂರೈಸುವ ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳಲು ತಾವು ಎದುರಿಸುತ್ತಿದ್ದ ಸಮಸ್ಯೆಗಳ ಕುರಿತು ಆ್ಯಪಲ್ ಸಿಇಒ ಟಿಮ್ ಕುಕ್ ಸೇರಿ ಹಲವು ಕಂಪನಿಗಳ ಉನ್ನತಾಧಿಕಾರಿಗಳು ನನ್ನ ಬಳಿ ಹೇಳಿಕೊಂಡಿದ್ದರು. ಈಗ, ಈ ಯಾವ ಸಮಸ್ಯೆಗಳೂ ಇರುವುದಿಲ್ಲ’ ಎಂದು ಟ್ರಂಪ್ ಹೇಳಿದರು.
‘ಒಂದು ವೇಳೆ, ವಾರ್ಟನ್ ಸಂಸ್ಥೆಯಲ್ಲಿ ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾದ ಅಭ್ಯರ್ಥಿಯೊಬ್ಬರನ್ನು ನೇಮಕ ಮಾಡಿಕೊಳ್ಳಲು ಐಬಿಎಂ ಬಯಸುತ್ತದೆ ಎಂದಿಟ್ಟುಕೊಳ್ಳಿ. ಆದರೆ, ನೇಮಕ ಮಾಡಿಕೊಂಡ ನಂತರ ಆ ವ್ಯಕ್ತಿ ಅಮೆರಿಕದಲ್ಲಿ ಎಷ್ಟು ದಿನ ಉಳಿಯಲು ಸಾಧ್ಯ ಎಂಬ ಬಗ್ಗೆ ಖಾತ್ರಿ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಕಂಪನಿಯು ಗೋಲ್ಡ್ ಕಾರ್ಡ್ ಖರೀದಿ ಮಾಡಬಹುದು’ ಎಂದು ಟ್ರಂಪ್ ವಿವರಿಸಿದರು.
‘ಈ ಕಾರ್ಡ್ ಹೊಂದಿದ ವ್ಯಕ್ತಿ ದೀರ್ಘ ಕಾಲದವರೆಗೆ ಅಮೆರಿಕದಲ್ಲಿ ನೆಲಸಬಹುದು. ಒಟ್ಟಾರೆ, ಇದು ಗ್ರೀನ್ ಕಾರ್ಡ್‌ಗಿಂತಲೂ ಅತ್ಯುತ್ತಮವಾದುದು. ಈಗ ಗ್ರೀನ್ ಕಾರ್ಡ್ ಪಡೆಯಲು ಸಾಧ್ಯ ಇಲ್ಲ. ಹೀಗಾಗಿ, ಗೋಲ್ಡ್ ಕಾರ್ಡ್ ಅತ್ಯುತ್ತಮ ಆಯ್ಕೆಯಾಗಲಿದೆ’ ಎಂದು ಹೇಳಿದರು.
ಗ್ರೀನ್ ಕಾರ್ಡ್‌ಗಿಂತಲೂ ‘ಗೋಲ್ಡ್ ಕಾರ್ಡ್’ ಹೆಚ್ಚು ಶಕ್ತಿಯುತ. ಇದು ಹೆಚ್ಚು ಅವಕಾಶಗಳನ್ನು ಸೃಷ್ಟಿಸುವ ಜೊತೆಗೆ ಉದ್ಯೋಗದಾತರಿಗೂ ನೆರವಾಗಲಿದೆ– ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಗೋಲ್ಡ್ ಕಾರ್ಡ್ ಖರೀದಿಯಿಂದ ಕಂಪನಿಗಳು ನೇಮಕ ಮಾಡಿಕೊಳ್ಳುವ ವ್ಯಕ್ತಿಗಳು ದೀರ್ಘ ಕಾಲ ಅಮೆರಿಕದಲ್ಲಿ ಇರುವ ಅರ್ಹತೆ ಪಡೆಯುವರು. ಈ ಕಾರ್ಡ್ ಅಮೆರಿಕ ಪೌರತ್ವ ಪಡೆಯುವುದಕ್ಕೂ ದಾರಿ ಮಾಡಿಕೊಡಲಿದೆ.– ಹೋವರ್ಡ್ ಲುಟ್ನಿಕ್, ವಾಣಿಜ್ಯ ಕಾರ್ಯದರ್ಶಿ ಅಮೆರಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.