ADVERTISEMENT

ಅಫ್ಗನ್‌ನಿಂದ ಮರಳಲಿವೆ ಅಮೆರಿಕ, ನ್ಯಾಟೊ ಪಡೆಗಳು; ತಾಲಿಬಾನ್‌ ಬಗ್ಗೆ ಭಾರತ ಕಳವಳ

ಪಿಟಿಐ
Published 15 ಏಪ್ರಿಲ್ 2021, 4:00 IST
Last Updated 15 ಏಪ್ರಿಲ್ 2021, 4:00 IST
ಅಫ್ಗಾನಿಸ್ತಾನದಲ್ಲಿ ಅಮೆರಿಕದ ಸೇನಾ ಪಡೆ–ಸಾಂದರ್ಭಿಕ ಚಿತ್ರ
ಅಫ್ಗಾನಿಸ್ತಾನದಲ್ಲಿ ಅಮೆರಿಕದ ಸೇನಾ ಪಡೆ–ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಅಮೆರಿಕ ಹಾಗೂ ನ್ಯಾಟೊ, ಸೇನಾ ಪಡೆಗಳನ್ನು ಅಫ್ಗಾನಿಸ್ತಾನದಿಂದ ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿವೆ. ಈ ಬೆಳವಣಿಗೆಯಿಂದಾಗಿ ತಾಲಿಬಾನ್‌ ಮತ್ತೆ ಶಕ್ತಗೊಳ್ಳಲಿದೆ ಹಾಗೂ ಅದರ ವಲಯವನ್ನು ಉಗ್ರರ ಸುರಕ್ಷಿತ ಸ್ಥಳವಾಗಿ ಬಳಕೆ ಮಾಡುವ ಅಪಾಯಗಳ ಬಗ್ಗೆ ಭಾರತ ಕಳವಳ ಹೊಂದಿದೆ ಎಂದು ತಜ್ಞರು ಹೇಳಿದ್ದಾರೆ.

ಇದೇ ವರ್ಷ ಸೆಪ್ಟೆಂಬರ್‌ 11ರ ವೇಳೆಗೆ ಅಮೆರಿಕದ ಎಲ್ಲ ಪಡೆಗಳನ್ನು ಅಫ್ಗಾನಿಸ್ತಾನದಿಂದ ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಬುಧವಾರ ಘೋಷಿಸಿದ್ದಾರೆ. ದೇಶದ ಅತಿ ದೊಡ್ಡ, ಸುಮಾರು ಎರಡು ದಶಕಗಳ ಯುದ್ಧ ಕೊನೆಯಾಗಲಿದೆ ಎಂದಿದ್ದಾರೆ.

ಯುದ್ಧ ಪೀಡಿತ ರಾಷ್ಟ್ರದಿಂದ ನ್ಯಾಟೊ ಸಹ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಳ್ಳಲಿದೆ.

ADVERTISEMENT

'ಅಫ್ಗಾನಿಸ್ತಾನದಿಂದ ಅಮೆರಿಕ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿರುವುದು ಹಾಗೂ ದೇಶದಲ್ಲಿ ತಾಲಿಬಾಲ್‌ ಮತ್ತೆ ವ್ಯಾಪಿಸುವ ಸಾಧ್ಯತೆಯ ಬಗ್ಗೆ ಪ್ರಾದೇಶಿಕ ರಾಷ್ಟ್ರಗಳು, ಅದರಲ್ಲೂ ಭಾರತಕ್ಕೆ ಕಳವಳವನ್ನು ಉಂಟು ಮಾಡಲಿದೆ' ಎಂದು ಲಿಸಾ ಕರ್ಟಿಸ್‌ ಹೇಳಿದ್ದಾರೆ. ಅವರು ಡೊನಾಲ್ಡ್‌ ಟ್ರಂಪ್‌ ಆಡಳಿತದಲ್ಲಿ ಅಧ್ಯಕ್ಷರ ಡೆಪ್ಯೂಟಿ ಅಸಿಸ್ಟೆಂಟ್‌ ಹಾಗೂ ದಕ್ಷಿಣ ಮತ್ತು ಮಧ್ಯ ಏಷ್ಯಾದ ಎನ್‌ಎಸ್‌ಸಿ ಹಿರಿಯ ನಿರ್ದೇಶಕಿಯಾಗಿ (2017–2021) ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಸೆಂಟರ್‌ ಫಾರ್‌ ಎ ನ್ಯೂ ಅಮೆರಿಕನ್‌ ಸೆಕ್ಯುರಿಟಿಯಲ್ಲಿ ಸೀನಿಯರ್ ಫೆಲೊ ಮತ್ತು ಇಂಡೊ–ಪೆಸಿಫಿಕ್‌ ಭದ್ರತಾ ಕಾರ್ಯಕ್ರಮದ ನಿರ್ದೇಶಕಿಯಾಗಿದ್ದಾರೆ.

'1990ರ ದಶಕದಲ್ಲಿ ತಾಲಿಬಾನ್‌ ನಿಯಂತ್ರಿತ ಅಫ್ಗಾನಿಸ್ತಾನವು ಎಲ್ಲ ಪ್ರದೇಶಗಳ ಭಯೋತ್ಪಾದಕರು ಹಾಗೂ ಉಗ್ರಗಾಮಿಗಳಿಗೆ ಆಹ್ವಾನ ನೀಡಿತ್ತು. ಉಗ್ರರ ತರಬೇತಿ, ನೇಮಕಾತಿ ಹಾಗೂ ಹಣ ಸಂಗ್ರಹದ ಕಾರ್ಯಗಳನ್ನು ಅಫ್ಗಾನಿಸ್ತಾನದಿಂದ ನಡೆಸಲಾಗಿತ್ತು. ಲಷ್ಕರ್‌–ಎ–ತೈಬಾ ಹಾಗೂ ಜೈಷ್–ಎ–ಮೊಹಮ್ಮದ್ ಸಂಘನೆಗಳ ಸದಸ್ಯರು ಸೇರಿದಂತೆ ಹಲವು ಉಗ್ರರು ಭಾರತದಲ್ಲಿ ಕಾರ್ಯಾಚರಣೆಗಾಗಿ ತರಬೇತಿ ಪಡೆದಿದ್ದರು. 2001ರಲ್ಲಿ ಭಾರತದ ಸಂಸತ್ತಿನ ಮೇಲೆ ದಾಳಿ ಸೇರಿದಂತೆ ಹಲವು ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದಾರೆ' ಎಂದು ಕರ್ಟಿಸ್‌ ಹೇಳಿದ್ದಾರೆ.

'ಸದ್ಯದ ಪ್ರಶ್ನೆ, ಅಮೆರಿಕ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಂಡ ಬಳಿಕ ಕಾಬುಲ್‌ ಸರ್ಕಾರಕ್ಕೆ ಸಹಕಾರ ಮುಂದುವರಿಸಲಿದೆಯೇ ಹಾಗೂ ಅಘ್ಗಾನ್‌ ಜನರು ತಾಲಿಬಾನ್‌ನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಲಿದೆಯೇ' ಎಂದು ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್‌ ಹಖಾನಿ ಹೇಳಿದ್ದಾರೆ. ಹುಸೇನ್‌ ಪ್ರಸ್ತುತ ಹಡ್ಸನ್‌ ಇನ್‌ಸ್ಟಿಟ್ಯೂಟ್‌ನ ದಕ್ಷಿಣ ಮತ್ತು ಮಧ್ಯ ಏಷ್ಯಾದ ನಿರ್ದೇಶಕರಾಗಿದ್ದಾರೆ.

ಅಫ್ಗಾನಿಸ್ತಾನದಿಂದ ಸೇನಾ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳುವ ಬೈಡನ್‌ ಯೋಜನೆಗಳು ಅಲ್ಲಿ ದುರಂತಕ್ಕೆ ದಾರಿ ಮಾಡಿಕೊಡಬಹುದು ಎಂದು 'ವಾಷಿಂಗ್ಟನ್‌ ಪೋಸ್ಟ್‌' ಪತ್ರಿಕೆಯು ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.

2020ರ ಫೆಬ್ರುವರಿ 29ರಂದು ದೋಹಾದಲ್ಲಿ ಅಮೆರಿಕ ಮತ್ತು ತಾಲಿಬಾನ್‌ ಒಪ್ಪಂದಕ್ಕೆ ಸಹಿ ಹಾಕಿದ್ದು, 14 ತಿಂಗಳಲ್ಲಿ ಅಫ್ಗಾನಿಸ್ತಾನದಿಂದ ಅಮೆರಿಕದ ಎಲ್ಲ ಯೋಧರನ್ನು ಕರೆಸಿಕೊಳ್ಳಲು ಒಪ್ಪಿಗೆ ಸೂಚಿಸಲಾಗಿದೆ. 2001 ಸೆಪ್ಟೆಂಬರ್‌ 11ರ ದಾಳಿಯ ಬಳಿಕ ಅಮೆರಿಕವು ಅಫ್ಗಾನಿಸ್ತಾನದಲ್ಲಿ ಹೋರಾಟ ಹಾಗೂ ಪುನರ್‌ಸ್ಥಾಪನೆ ಕಾರ್ಯಗಳಿಗೆ ಒಂದು ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ಗೂ ಹೆಚ್ಚು ವ್ಯಯಿಸಿದೆ.

ದೀರ್ಘ ಹೋರಾಟಗಳಲ್ಲಿ ಸುಮಾರು 2,400 ಅಮೆರಿಕದ ಯೋಧರು ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ಅಫ್ಗನ್‌ ಸೇನೆಯ ಸಿಬ್ಬಂದಿ, ಅಫ್ಗನ್‌ ನಾಗರಿಕರು ಹಾಗೂ ತಾಲಿಬಾನ್‌ ಬಂಡುಕೋರರು ಹತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.