ADVERTISEMENT

2020ರಲ್ಲೇ ಕೋವಿಡ್‌–19 ಲಸಿಕೆ ಪೂರೈಕೆ ಸಾಧ್ಯ: ಫೈಜರ್‌

ಏಜೆನ್ಸೀಸ್
Published 28 ಅಕ್ಟೋಬರ್ 2020, 1:49 IST
Last Updated 28 ಅಕ್ಟೋಬರ್ 2020, 1:49 IST
ಕೋವಿಡ್–19 ಲಸಿಕೆ–ಸಾಂದರ್ಭಿಕ ಚಿತ್ರ
ಕೋವಿಡ್–19 ಲಸಿಕೆ–ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಕೊರೊನಾ ವೈರಸ್‌ ಲಸಿಕೆ ಪ್ರಯೋಗಕ್ಕೆ ಸಂಬಂಧಿಸಿದ ಮಹತ್ವದ ದತ್ತಾಂಶ ಬಿಡುಗಡೆ ಸಾಧ್ಯವಾಗದೆಂದು ಫೈಜರ್‌ ಕಂಪನಿ ಹೇಳಿದೆ. ಆದರೆ, 2020ರಲ್ಲಿಯೇ ಲಸಿಕೆ ಪೂರೈಸುವ ಭರವಸೆಯನ್ನೂ ವ್ಯಕ್ತಪಡಿಸಿದೆ.

ಯೋಜಿಸಿದಂತೆಯೇ ಕ್ಲಿನಿಕಲ್‌ ಟ್ರಯಲ್‌ ಮುಂದುವರಿದು ಔಷಧ ನಿಯಂತ್ರಣ ಸಂಸ್ಥೆಯಿಂದ ಅನುಮತಿ ದೊರೆತರೆ, ಇದೇ ವರ್ಷ ಅಮೆರಿಕದಲ್ಲಿ ಸುಮಾರು 4 ಕೋಟಿ ಡೋಸ್‌ಗಳಷ್ಟು ಕೊರೊನಾ ವೈರಸ್‌ ಲಸಿಕೆ ಪೂರೈಸುವುದಾಗಿ ಫೈಜರ್‌ ಫಾರ್ಮಾ ಕಂಪನಿಯ ಸಿಇಒ ಆಲ್ಬರ್ಟ್‌ ಬೌರ್ಲಾ ಹೇಳಿದ್ದಾರೆ.

2020ರ ಅಂತ್ಯದೊಳಗೆ ಲಸಿಕೆಯ 4 ಕೋಟಿ ಡೋಸ್‌ಗಳು ಹಾಗೂ 2021ರ ಮಾರ್ಚ್‌ಗೆ 10 ಕೋಟಿ ಡೋಸ್‌ಗಳ ಪೂರೈಕೆಗೆ ಅಮೆರಿಕ ಸರ್ಕಾರ ಫೈಜರ್‌ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ADVERTISEMENT

ಅಕ್ಟೋಬರ್‌ಗೆ ಲಸಿಕೆ ಕುರಿತ ಪ್ರಯೋಗದ ಮಾಹಿತಿ ಸಿಗಲಿದೆ ಎಂದು ಫೈಜರ್ ಕಂಪನಿ ಈ ಹಿಂದೆ ಹೇಳಿತ್ತು. ನವೆಂಬರ್‌ 3ರಂದು ಅಧ್ಯಕ್ಷೀಯ ಚುನಾವಣೆ ನಿಗದಿಯಾಗಿರುವುದರಿಂದ ಲಸಿಕೆ ದತ್ತಾಂಶ ಬಿಡುಗಡೆಯ ಬಗ್ಗೆ ನಿರೀಕ್ಷೆ ಹೆಚ್ಚಿತ್ತು. 'ನಾವು ಕೊನೆಯ ಹಂತದಲ್ಲಿದ್ದೇವೆ. ಸಾರ್ವಜನಿಕ ಆರೋಗ್ಯ ಮತ್ತು ಜಾಗತಿಕ ಆರ್ಥಿಕತೆಯ ಹಿತದೃಷ್ಟಿಯಿಂದ ಎಲ್ಲರೂ ತಾಳ್ಮೆ ವಹಿಸಬೇಕಿದೆ. ಲಸಿಕೆಯ ಸಾಮರ್ಥ್ಯವನ್ನು ಪೂರ್ಣವಾಗಿ ಅರಿಯಲು ಇನ್ನೂ ಸಾಧ್ಯವಾಗಿಲ್ಲ' ಎಂದು ಆಲ್ಬರ್ಟ್‌ ಬೌರ್ಲಾ ಹೇಳಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಕೋವಿಡ್‌–19 ಲಸಿಕೆಯ ಬಳಕೆಗೆ ನವೆಂಬರ್‌ ಮೂರನೇ ವಾರದಲ್ಲಿ ಅನುಮತಿ ಕೋರುವ ಸಾಧ್ಯತೆ ಇದೆ. ಕಳೆದ ತ್ರೈಮಾಸಿಕದಲ್ಲಿ ಫೈಜರ್‌ ಕಂಪನಿಯ ಲಾಭಾಂಶದಲ್ಲಿ ಶೇ 71ರಷ್ಟು ಇಳಿಕೆಯಾಗಿದ್ದು, 2.2 ಬಿಲಿಯನ್‌ ಡಾಲರ್‌ ದಾಖಲಾಗಿದೆ. ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತುರ್ತು ಶಸ್ತ್ರಚಿಕಿತ್ಸೆಗಳ ಪ್ರಮಾಣ ಇಳಿಕೆಯಾಗಿರುವುದರಿಂದ ಕಂಪನಿಯ ಆಸ್ಪತ್ರೆ ಉದ್ಯಮದಲ್ಲಿಯೂ ಇಳಿಕೆ ಕಂಡು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.