ADVERTISEMENT

ಇಮ್ರಾನ್‌ ಪದಚ್ಯುತಿಗೆ ಅಮೆರಿಕ ಷಡ್ಯಂತ್ರ: ಆರೋಪ ಖಂಡಿಸಿದ ಬೈಡನ್‌ ಆಡಳಿತ

ಪಿಟಿಐ
Published 15 ಏಪ್ರಿಲ್ 2022, 2:13 IST
Last Updated 15 ಏಪ್ರಿಲ್ 2022, 2:13 IST
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (ಪಿಟಿಐ ಚಿತ್ರ)
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (ಪಿಟಿಐ ಚಿತ್ರ)   

ವಾಷಿಂಗ್ಟನ್‌: ಇಮ್ರಾನ್‌ ಖಾನ್‌ ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದ್ದರ ಹಿಂದೆ ತನ್ನ ಕೈವಾಡವಿದೆ ಎಂಬ ಆರೋಪಕ್ಕೆ ಅಮೆರಿಕ ಖಂಡನೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಹೊಸ ಸರ್ಕಾರದ ಜೊತೆಗೆ ಕೆಲಸ ಮಾಡುವ ನಿಟ್ಟಿನಲ್ಲಿ ಎದುರುನೋಡುತ್ತಿರುವುದಾಗಿ ತಿಳಿಸಿದೆ.

ಸ್ವತಃ ಇಮ್ರಾನ್‌ ಖಾನ್‌ ಮತ್ತು ಅವರ ಬೆಂಬಲಿಗರು ಪಾಕಿಸ್ತಾನದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಹಿಂದೆ ಅಮೆರಿಕದ ಷಡ್ಯಂತ್ರವಿದೆ ಎಂದು ಆರೋಪಿಸಿದ್ದರು.

'ಪಾಕಿಸ್ತಾನ ಪ್ರಧಾನಿ ಶಾಹಬಾಝ್‌ ಷರೀಫ್‌ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಅವರೊಂದಿಗೆ ಮತ್ತು ಅವರ ಸರ್ಕಾರದ ಜೊತೆಗೆ ಕೆಲಸ ಮಾಡಲು ಎದುರುನೋಡುತ್ತಿದ್ದೇವೆ' ಎಂದು ಅಮೆರಿಕ ವಕ್ತಾರ ನೆಡ್‌ ಪ್ರೈಸ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

'ಅಮೆರಿಕ ಮತ್ತು ಪಾಕಿಸ್ತಾನದ ನಡುವಿನ 75 ವರ್ಷಗಳ ಸಂಬಂಧ ಮಹತ್ವದ್ದಾಗಿದೆ. ಪಾಕಿಸ್ತಾನ ಮತ್ತು ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಏಳ್ಗೆಯ ನಿಟ್ಟಿನಲ್ಲಿ ಅಲ್ಲಿನ ಸರ್ಕಾರದ ಜೊತೆಗೆ ಕೆಲಸ ಮಾಡಲು ಅಮೆರಿಕ ಬಯಸುತ್ತದೆ' ಎಂದು ನೆಡ್‌ ಪ್ರೈಸ್‌ ಹೇಳಿದ್ದಾರೆ.

ಇಮ್ರಾನ್‌ ಖಾನ್‌ ಅವರನ್ನು ಅಧಿಕಾರದಿಂದ ಇಳಿಸುವುದರ ಹಿಂದೆ ಅಮೆರಿಕದ ಕೈವಾಡವಿದೆ ಎಂಬ ಆರೋಪಗಳ ಕುರಿತಾಗಿ ಮಾತನಾಡಿದ ನೆಡ್‌ ಪ್ರೈಸ್‌, 'ಈ ವಿಚಾರದಲ್ಲಿ ಬಹಳ ಸ್ಪಷ್ಟ ಸಂದೇಶ ನೀಡಲು ಬಯಸುತ್ತೇವೆ. ಇಂತಹ ಆರೋಪಗಳಲ್ಲಿ ಸತ್ಯಾಂಶವಿಲ್ಲ. ನಾವು ಶಾಂತಿ, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಪರವಾಗಿದ್ದೇವೆ. ಪಾಕಿಸ್ತಾನವಿರಲಿ ಅಥವಾ ವಿಶ್ವದ ಯಾವುದೇ ರಾಷ್ಟ್ರವಿರಲಿ, ಅಲ್ಲಿನ ಯಾವುದೇ ಒಂದು ರಾಜಕೀಯ ಪಕ್ಷವನ್ನು ವಿರೋಧಿಸುವುದಾಗಲಿ, ಬೆಂಬಲಿಸುವುದಾಗಲಿ ಮಾಡುವುದಿಲ್ಲ. ಸಮಾನತೆ ಮತ್ತು ನ್ಯಾಯ-ನಿಷ್ಠುರವಾಗಿ ನಡೆದುಕೊಳ್ಳುತ್ತೇವೆ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.