ADVERTISEMENT

ಯೆಮನ್‌ ಬಂಡುಕೋರ ಗುಂಪಿಗೆ ಉಗ್ರ ಸಂಘಟನೆ ಪಟ್ಟ: ನಿರ್ಧಾರ ಬದಲಿಸಲು ಅಮೆರಿಕ ನಕಾರ

ಏಜೆನ್ಸೀಸ್
Published 15 ಜನವರಿ 2021, 6:43 IST
Last Updated 15 ಜನವರಿ 2021, 6:43 IST
ಯೆಮನ್‌ ರಾಜಧಾನಿ ಸನಾ ವಶಪಡಿಸಿಕೊಂಡ ನಂತರ ಹೂಥಿ ಬಂಡುಕೋರರು ಅಲ್‌–ಸಬೀನ್‌ ಸ್ಕ್ವೇರ್‌ನಲ್ಲಿ ಸೆಲ್ಫಿ ತೆಗೆದುಕೊಂಡರು (ಸಂಗ್ರಹ ಚಿತ್ರ) –ರಾಯಿಟರ್ಸ್‌ ಚಿತ್ರ
ಯೆಮನ್‌ ರಾಜಧಾನಿ ಸನಾ ವಶಪಡಿಸಿಕೊಂಡ ನಂತರ ಹೂಥಿ ಬಂಡುಕೋರರು ಅಲ್‌–ಸಬೀನ್‌ ಸ್ಕ್ವೇರ್‌ನಲ್ಲಿ ಸೆಲ್ಫಿ ತೆಗೆದುಕೊಂಡರು (ಸಂಗ್ರಹ ಚಿತ್ರ) –ರಾಯಿಟರ್ಸ್‌ ಚಿತ್ರ   

ವಿಶ್ವಸಂಸ್ಥೆ: ಯೆಮನ್‌ನಲ್ಲಿ ಸಕ್ರಿಯವಾಗಿರುವ ಇರಾನ್‌ ಬೆಂಬಲಿತ ಬಂಡುಕೋರರ ಗುಂಪನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿರುವ ತನ್ನ ನಿರ್ಧಾರವನ್ನು ಬದಲಿಸಬೇಕು ಎಂಬ ವಿಶ್ವಸಂಸ್ಥೆಯ ಮನವಿಯನ್ನು ಅಮೆರಿಕ ತಿರಸ್ಕರಿಸಿದೆ.

ಸಂಘರ್ಷಕ್ಕೀಡಾಗಿರುವ ಕೊಲ್ಲಿ ರಾಷ್ಟ್ರದಲ್ಲಿ ಭೀಕರ ಬರ ಹಾಗೂ ಸಾವು–ನೋವನ್ನು ತಡೆ್ಗಟ್ಟುವ ಸಲುವಾಗಿ ತನ್ನ ಈ ನಿರ್ಧಾರವನ್ನು ಕೈಬಿಡಬೇಕು ಎಂದು ವಿಶ್ವಸಂಸ್ಥೆ ಮನವಿ ಮಾಡಿತ್ತು. ಆದರೆ, ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಸ್ಪಷ್ಟಪಡಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ಅಮೆರಿಕದ ಉಪರಾಯಭಾರಿ ರಿಚರ್ಡ್‌ ಮಿಲ್ಸ್‌, ‘ಯೆಮನ್‌ನಲ್ಲಿರುವ ಹೂಥಿ ಸಂಘಟನೆಯಿಂದ ಉದ್ಭವಿಸಬಹುದಾದ ಸಂಕಷ್ಟದ ಅರಿವು ಅಮೆರಿಕಕ್ಕೆ ಇದೆ. ಅಲ್ಲಿನ ಜನರಿಗೆ ತೊಂದರೆಯಾಗದಂತೆ ಎಲ್ಲ ನೆರವು ನೀಡಲು ಬದ್ಧ’ ಎಂದು ಹೇಳಿದರು.

ADVERTISEMENT

ಹೂಥಿ ಬಂಡುಕೋರರು 2014ರಲ್ಲಿ ಯೆಮನ್‌ ರಾಜಧಾನಿ ಸನಾ ಮೇಲೆ ದಾಳಿ ನಡೆಸಿದರು. ನಗರ ಹಾಗೂ ದೇಶದ ಉತ್ತರ ಭಾಗವನ್ನು ತಮ್ಮ ವಶಕ್ಕೆ ಪಡೆದ ಉಗ್ರರು, ಸರ್ಕಾರವನ್ನೇ ಕಿತ್ತೊಗೆದರು.

ದೇಶದಲ್ಲಿ ಸರ್ಕಾರವನ್ನು ಪುನರ್‌ಸ್ಥಾಪಿಸಲು ಅಮೆರಿಕ ಬೆಂಬಲಿತ, ಸೌದಿ ಅರೇಬಿಯಾ ನೇತೃತ್ವದ ಮೈತ್ರಿಕೂಟ ಪ್ರಯತ್ನ ಆರಂಭಿಸಿದೆ. ಆದರೆ, ಈ ಪ್ರಯತ್ನಗಳು ಇನ್ನೂ ಫಲ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.