
ಭಾರತ, ಅಮೆರಿಕ
ಪಿಟಿಐ
ನ್ಯೂಯಾರ್ಕ್: ಜಗತ್ತಿನ ವಿವಿಧ ದೇಶಗಳಿಂದ ಅಮೆರಿಕಕ್ಕೆ ಅಕ್ರಮ ಮಾರ್ಗಗಳ ಮೂಲಕ ಜನರನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಭಾರತೀಯ ಪ್ರಜೆ, ಅವರ ಪತ್ನಿ, ವಿವಿಧ ಸಂಘಟನೆ ಮತ್ತು 16 ಕಂಪನಿಗಳ ವಿರುದ್ಧ ಅಮೆರಿಕ ನಿರ್ಬಂಧ ವಿಧಿಸಿದೆ.
ಭಾರತೀಯ ಮೆಕ್ಸಿಕನ್ ಪ್ರಜೆ ವಿಕ್ರಾಂತ್ ಭಾರದ್ವಾಜ್ ಮತ್ತು ಅವರ ಸಹಚರರು, ಮೆಕ್ಸಿಕೊದಲ್ಲಿ ಅಂತರರಾಷ್ಟ್ರೀಯ ಅಪರಾಧ ಕೂಟ ಮತ್ತು ಮಾನವ ಕಳ್ಳಸಾಗಣೆ ಕೂಟಗಳನ್ನು ಕಟ್ಟಿಕೊಂಡಿದ್ದರು. ಅದರ ಮೂಲಕ ವಿವಿಧ ಖಂಡಗಳಿಂದ ಜನರನ್ನು ವಾಯು ಮತ್ತು ಸಮುದ್ರ ಮಾರ್ಗದ ಮೂಲಕ ದಾಖಲೆ ರಹಿತ ಮತ್ತು ಅಕ್ರಮವಾಗಿ ಅಮೆರಿಕ ಪ್ರವೇಶಿಸುವಂತೆ ಮಾಡುತ್ತಿದ್ದರು ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಭಾರದ್ವಾಜ್ ಅವರ ಈ ಕೃತ್ಯಗಳಲ್ಲಿ ಅವರ ಪತ್ನಿ ಇಂದು ರಾಣಿ ಸಹ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅವರ ಈ ಕೃತ್ಯಗಳು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತಿದ್ದ ಕಾರಣ ಅವರು ಮತ್ತು ಕೆಲ ಕಂಪನಿಗಳ ವಿರುದ್ಧ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಭಾರದ್ವಾಜ್ ಅವರು ಮೆಕ್ಸಿಕೊ, ಭಾರತ, ಯುಎಇಯಲ್ಲಿ ಹಲವು ಕಂಪನಿಗಳ ಸ್ಥಾಪಕರಾಗಿದ್ದು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದಾರೆ. ಅವರು ತಮ್ಮದೇ ಆದ ವಿಹಾರ ದೋಣಿಗಳನ್ನು ಹೊಂದಿದ್ದು, ಜನರನ್ನು ಅಕ್ರಮವಾಗಿ ಸಾಗಿಸಲು ಅವುಗಳನ್ನು ಬಳಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರದ್ವಾಜ್ ಮತ್ತು ಇಂದು ರಾಣಿ ಅವರ ನೇರ ಅಥವಾ ಪರೋಕ್ಷ ಒಡೆತನ ಅಥವಾ ನಿಯಂತ್ರಣದಲ್ಲಿರುವ ಭಾರತ ಮೂಲದ ವೀಣಾ ಶಿವಾನಿ ಎಸ್ಟೇಟ್ಸ್ ಲಿಮಿಟೆಡ್, ಭಾರತ ಮತ್ತು ಯುಎಇಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಎನ್ ಬಿಲ್ಡ್‌ಕಾನ್, ಭವಿಷ್ಯ ರಿಯಲ್‌ಕಾನ್, ವಿವಿಎನ್ ರಿಯಲ್ ಎಸ್ಟೇಟ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.