ADVERTISEMENT

ಆನ್‌ಲೈನ್ ತರಗತಿಗಳಿಗೆ ಅಮೆರಿಕದ ನಿರ್ಬಂಧ: ವಿದೇಶಿ ವಿದ್ಯಾರ್ಥಿಗಳಿಗೆ ಆತಂಕ

ಏಜೆನ್ಸೀಸ್
Published 7 ಜುಲೈ 2020, 6:34 IST
Last Updated 7 ಜುಲೈ 2020, 6:34 IST
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್   

ವಾಷಿಂಗ್‌ಟನ್: ಆನ್‌ಲೈನ್ ತರಗತಿಗಳ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಪಾಠ ಮುಂದುವರಿಸಲು ಶಿಕ್ಷಣ ಸಂಸ್ಥೆಗಳು ನಿರ್ಧರಿಸಿದರೆ ಅಮೆರಿಕದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಸ್ವದೇಶಗಳಿಗೆ ಹಿಂದಿರುಗಬೇಕಾಗುತ್ತದೆ ಎಂದು ಕೇಂದ್ರ ವಲಸೆ ವಿಭಾಗದ ಅಧಿಕಾರಿಗಳು ಸೋಮವಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೊವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ಬಹುತೇಕ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಶಿಕ್ಷಣದ ಮೊರೆ ಹೋಗಿವೆ. ಇದೀಗಅಮೆರಿಕದ ವಲಸೆ ಮತ್ತು ಅಬಕಾರಿ ಜಾರಿ ಅಧಿಕಾರಿಗಳು ಹೊರಡಿಸಿರುವ ಈ ನಿರ್ದೇಶನವು ಶಿಕ್ಷಣ ಸಂಸ್ಥೆಗಳ ಬಾಗಿಲು ತೆರೆಯಲೇಬೇಕಾದ ಒತ್ತಡವನ್ನು ಅಧಿಕಾರಿಗಳ ಮೇಲೆ ಹೇರಿದೆ. ಹಾರ್ವರ್ಡ್‌ ಸೇರಿದಂತೆ ಹಲವು ಪ್ರಮುಖ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ಶಿಕ್ಷಣದ ಮೊರೆ ಹೋಗುವ ಘೋಷಣೆ ಹೊರಬಿದ್ದ ದಿನವೇ ಈ ನಿರ್ದೇಶನಾ ಪತ್ರವನ್ನೂ ಪ್ರಕಟಿಸಲಾಗಿದೆ.

ಶಾಲೆ ಮತ್ತು ಕಾಲೇಜುಗಳು ಶೀಘ್ರ ಮಾಮೂಲಿ ಶಿಕ್ಷಣ ಕ್ರಮಕ್ಕೆ ಮರಳಬೇಕು ಎಂದುಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಈಚೆಗಷ್ಟೇ ಸೂಚಿಸಿದ್ದರು. ಇದರ ಬೆನ್ನಿಗೇ ಮಾರ್ಗದರ್ಶಿ ಸೂತ್ರಗಳನ್ನು ವಲಸೆ ವಿಭಾಗ ಪ್ರಕಟಿಸಿದೆ. ಶಾಲೆಗಳು ಇದೇ 'ಫಾಲ್' ಋತುವಿನಲ್ಲಿ ಬಾಗಿಲು ತೆರೆಯಬೇಕು ಎಂದು ಟ್ರಂಪ್ ಹೇಳಿದ್ದರು.

ADVERTISEMENT

'ಶಾಲೆಗಳು ಬಾಗಿಲು ತೆರೆಯಬಾರದು ಎಂಬ ಡೆಮಕ್ರಾಟ್‌ಗಳ ಆಗ್ರಹದ ಹಿಂದೆ ಆರೋಗ್ಯದ ಕಾರಣಗಳಿಲ್ಲ, ರಾಜಕೀಯ ಕಾರಣಗಳಿವೆ. ಇದು ನವೆಂಬರ್‌ನಲ್ಲಿ ಸಹಾಯಕ್ಕೆ ಬರುತ್ತದೆ ಎಂದು ಅವರು ಅಂದುಕೊಂಡಿದ್ದಾರೆ. ಆದರೆ ಅದು ತಪ್ಪು, ಜನರಿಗೆ ಅವರ ನಡೆ ಇಷ್ಟವಾಗುವುದಿಲ್ಲ' ಎಂದು ಟ್ರಂಪ್ ಟೀಕಿಸಿದ್ದರು.

ಹೊಸ ನಿಯಮಗಳ ಪ್ರಕಾರ ವಿದೇಶಿ ವಿದ್ಯಾರ್ಥಿಗಳು ಕೆಲವಾದರೂ ಆಫ್‌ಲೈನ್‌ತರಗತಿಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿಯೇ ನಡೆಯುವ ಕೋರ್ಸ್‌ಗಳವಿದ್ಯಾರ್ಥಿಗಳಿಗೆ ಹೊಸದಾಗಿ ವೀಸಾ ನೀಡಲಾಗುವುದು. ಎರಡೂ ಮಾದರಿಗಳಲ್ಲಿ (ಆಫ್‌ಲೈನ್ / ಆನ್‌ಲೈನ್) ಕೋರ್ಸ್‌ಗಳನ್ನುನಡೆಸುವಶಿಕ್ಷಣ ಸಂಸ್ಥೆಗಳಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗುವುದು.

ಅಮೆರಿಕದಲ್ಲಿರುವ ಸಾವಿರಾರು ವಿದ್ಯಾರ್ಥಿಗಳಲ್ಲಿ ಸರ್ಕಾರದ ಈ ನಡೆ ಆತಂಕ ಹುಟ್ಟುಹಾಕಿದೆ. ಕಳೆದ ಬಾರಿ ಕೊರೊನಾ ಪಿಡುಗು ವ್ಯಾಪಕವಾಗಿ ಹರಡಲು ಆರಂಭಿಸಿದ ಕಾರಣ ಅವರು ಸ್ವದೇಶಗಳಿಗೆ ಹಿಂದಿರುಗಲು ಸಾಧ್ಯವಾಗಿರಲಿಲ್ಲ. ಈಗ ಅಮೆರಿಕದಲ್ಲಿಯೂ ಮುಕ್ತ ಸಂಚಾರಕ್ಕೆ ನಿರ್ಬಂಧವಿರುವ ಕಾರಣ ಅವರು ತಾವಿರುವ ಸ್ಥಳಗಳಿಂದಲೇ ಆನ್‌ಲೈನ್ ತರಗತಿಗಳಲ್ಲಿ ಪಾಠ ಕೇಳುತ್ತಿದ್ದರು. ಆದರೆ ಇದೀಗ ಅಮೆರಿಕ ಆಡಳಿತ, 'ದೇಶ ಬಿಟ್ಟು ಹೋಗಿ ಅಥವಾ ಬೇರೆ ಕ್ರಮಗಳನ್ನು ಪರಿಗಣಿಸಿ. ಬೇರೆ ಶಾಲೆ / ಕಾಲೇಜಿಗೆ ಸೇರಲು ಸಾಧ್ಯವಿದ್ದರೆ ಸೇರಿಕೊಳ್ಳಿ' ಎಂದು ಹೇಳುತ್ತಿದೆ.

ಅಮೆರಿಕ ಸರ್ಕಾರದ ಈ ನಡೆಯನ್ನು ಖಂಡಿಸಿರುವ ಅಮೆರಿಕ ಶಿಕ್ಷಣ ಮಂಡಳಿಯು, 'ಸರ್ಕಾರ ಹೊರಡಿಸಿರುವ ಮಾರ್ಗದರ್ಶಿ ಸೂತ್ರಗಳು ಗಾಬರಿಯುಂಟು ಮಾಡುವಂತಿವೆ. ಶಾಲೆಗಳನ್ನು ಸುರಕ್ಷಿತವಾಗಿ ಮತ್ತೆ ಆರಂಭಿಸುವ ವಿಚಾರದಲ್ಲಿ ಗೊಂದಲ ಮೂಡಿಸಿದೆ' ಎಂದು ಹೇಳಿದೆ. ಈ ಮಂಡಳಿಯಲ್ಲಿ ಅಮೆರಿಕದ ವಿವಿಧ ವಿಶ್ವವಿದ್ಯಾಲಯಗಳ ಅಧ್ಯಕ್ಷರು ಸದಸ್ಯರಾಗಿದ್ದಾರೆ.

'ಕೊರೊನಾ ಪಿಡುಗು ಉಲ್ಬಣಗೊಂಡರೂ ವಿದ್ಯಾರ್ಥಿಗಳಿಗೆ ನಿಯಮಗಳಿಂದಯಾವುದೇ ರಿಯಾಯ್ತಿ ನೀಡಲು ಸಾದ್ಯವಿಲ್ಲ' ಎಂಬಉಲ್ಲೇಖ ಶಿಕ್ಷಣ ಮಂಡಳಿಯ ಸದಸ್ಯರಲ್ಲಿ ಆತಂಕ ಮೂಡಿಸಿದೆ. 'ಕೊರೊನಾ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ತಮ್ಮ ಸ್ವದೇಶಗಳಿಗೆ ಹಿಂದಿರುಗಲು ಸಾಧ್ಯವಾಗುತ್ತಿಲ್ಲ. ಹೊಸ ನಿಯಮಗಳಿಂದಾಗಿಅಮೆರಿಕದಲ್ಲಿಯೂ ಇರಲು ಆಗುವುದಿಲ್ಲ. ಇಂಥವರ ಕಥೆ ಏನಾಗುತ್ತದೆ' ಎಂದು ಶಿಕ್ಷಣ ಮಂಡಳಿಯ ಹಿರಿಯ ಉಪಾಧ್ಯಕ್ಷ ಟೆರ್ರಿ ಹರ್ಟಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.