ವಾಷಿಂಗ್ಟನ್/ನ್ಯೂಯಾರ್ಕ್: ಸೌರಶಕ್ತಿ ಉತ್ಪಾದನಾ ಘಟಕ ಸ್ಥಾಪನೆಗಾಗಿ ಅಧಿಕಾರಿಗಳಿಗೆ ಲಂಚ ನೀಡಿದ್ದರು ಇಲ್ಲವೇ ನೀಡಲು ಯತ್ನಿಸಿದ್ದರು ಎಂಬ ಆರೋಪ ಎದುರಿಸುತ್ತಿರುವ ಉದ್ಯಮಿ ಗೌತಮ್ ಅದಾನಿ ಹಾಗೂ ಸೋದರ ಸಂಬಂಧಿ ಸಾಗರ್ ಅದಾನಿ ವಿರುದ್ಧ ತಾನು ಕೈಗೊಂಡಿರುವ ತನಿಖೆಗೆ ನೆರವು ನೀಡುವಂತೆ ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ), ಭಾರತದ ಕಾನೂನು ಸಚಿವಾಲಯಕ್ಕೆ ಮನವಿ ಮಾಡಿದೆ.
ನ್ಯೂಯಾರ್ಕ್‌ನ ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶ ನಿಕೋಲಾಸ್ ಗರೌಫಿಸ್ ಅವರಿಗೆ ತನಿಖೆ ಕುರಿತ ವಸ್ತುಸ್ಥಿತಿ ವರದಿಯನ್ನು ಎಸ್‌ಇಸಿ ಸಲ್ಲಿಸಿದೆ.
ಈ ಬೆಳವಣಿಗೆ ಬೆನ್ನಲ್ಲೇ, ಬುಧವಾರದ ವಹಿವಾಟಿನಲ್ಲಿ ಅದಾನಿ ಸಮೂಹದ ಷೇರುಗಳ ಬೆಲೆ ಕುಸಿದಿದೆ.
‘ಗೌತಮ್ ಅದಾನಿ ಹಾಗೂ ಸಾಗರ್ ಅದಾನಿ ಭಾರತದಲ್ಲಿ ನೆಲಸಿದ್ದು, ಅವರಿಗೆ ಸಮನ್ಸ್ ನೀಡುವ ಪ್ರಯತ್ನ ನಡೆಯುತ್ತಿದೆ. ಬೇರೆ ದೇಶಗಳಲ್ಲಿರುವ ವ್ಯಕ್ತಿಗಳಿಗೆ ನೋಟಿಸ್ ನೀಡುವುದಕ್ಕೆ ಸಂಬಂಧಿಸಿ, ಹೇಗ್ ಸೇವಾ ಒಪ್ಪಂದದ ಅನ್ವಯ ಈ ಪ್ರಯತ್ನಗಳು ನಡೆಯುತ್ತಿವೆ‘ ಎಂದೂ ಎಸ್‌ಇಸಿ ಹೇಳಿದೆ.
‘ಆರೋಪಿಗಳಿಗೆ ಸಮನ್ಸ್ ನೀಡುವುದಕ್ಕೆ ಸಂಬಂಧಿಸಿ, ಪಡೆರಲ್ ರೂಲ್ಸ್ ಆಫ್ ಸಿವಿಲ್ ಪ್ರೊಸಿಜರ್ (ಎಫ್‌ಆರ್‌ಸಿಪಿ)ನ ನಿಯಮ 4(ಎಫ್) ಅಡಿ ಯಾವುದೇ ಕಾಲಮಿತಿ ಇಲ್ಲ. ಆದರೆ, ಹೇಗ್ ಸೇವಾ ಒಪ್ಪಂದದಂತಹ ಅಂತರರಾಷ್ಟ್ರೀಯವಾಗಿ ಒಪ್ಪಿದ ವಿಧಾನದ ಮೂಲಕ ಸಮನ್ಸ್ ನೀಡಬಹುದಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.
‘ಎಫ್‌ಆರ್‌ಸಿಪಿ ನಿಯಮ 5(ಎ)ಅಡಿ, ಅದಾನಿ ವಿರುದ್ಧದ ತನಿಖೆಗೆ ನೆರವು ನೀಡುವಂತೆ ಭಾರತದ ಕಾನೂನು ಸಚಿವಾಲಯವನ್ನು ಕೋರಲಾಗಿದೆ’ ಎಂದು ಎಸ್‌ಇಸಿ ಪರ ವಕೀಲ ಕ್ರಿಸ್ಟೋಫರ್ ಕೊಲರಾಡೊ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.