ADVERTISEMENT

299 ಅಕ್ರಮ ವಲಸಿಗರನ್ನು ಪನಾಮಗೆ ರವಾನಿಸಿದ ಅಮೆರಿಕ

ಪಿಟಿಐ
ರಾಯಿಟರ್ಸ್
Published 21 ಫೆಬ್ರುವರಿ 2025, 0:32 IST
Last Updated 21 ಫೆಬ್ರುವರಿ 2025, 0:32 IST
<div class="paragraphs"><p>ಪನಾಮ ಸಿಟಿಯ ಹೋಟೆಲ್‌ವೊಂದರಲ್ಲಿ ಇರಿಸಲಾಗಿರುವ ಅಕ್ರಮ ವಲಸಿಗರು ತಮ್ಮ ಕೋಣೆಯ ಕಿಟಿಕಿಗಳ ಬಳಿ ಬಂದು ಸಹಾಯ ಕೋರಿದರು</p></div>

ಪನಾಮ ಸಿಟಿಯ ಹೋಟೆಲ್‌ವೊಂದರಲ್ಲಿ ಇರಿಸಲಾಗಿರುವ ಅಕ್ರಮ ವಲಸಿಗರು ತಮ್ಮ ಕೋಣೆಯ ಕಿಟಿಕಿಗಳ ಬಳಿ ಬಂದು ಸಹಾಯ ಕೋರಿದರು

   

(ರಾಯಿಟರ್ಸ್ ಚಿತ್ರ)

ಪನಾಮ ಸಿಟಿ: ‘ನಮಗೆ ಸಹಾಯ ಮಾಡಿ’, ‘ನಮ್ಮ ದೇಶದಲ್ಲಿ ನಮಗೆ ಸುರಕ್ಷತೆ ಇಲ್ಲ’, ‘ನಾವು ಅಫ್ಗಾನ್‌ ಹುಡುಗಿಯರು, ನಮಗೆ ಸಹಾಯ ಮಾಡಿ’ ಎಂಬ ಬರಹಗಳನ್ನು ಕಿಟಿಕಿ ಗಾಜುಗಳ ಮೇಲೆ ಬರೆದು, ‘ನಮಗಿಲ್ಲಿ ಸ್ವಾತಂತ್ರ್ಯವಿಲ್ಲ’ ಎಂಬಂತೆ ಸಂಜ್ಞಾ ಭಾಷೆ ಮೂಲಕ ಸಹಾಯ ಕೋರುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ADVERTISEMENT

ಸಹಾಯಕ್ಕಾಗಿ ಮೊರೆ ಇಡುತ್ತಿ ರುವವರು ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿದ್ದ ಭಾರತ, ಇರಾನ್‌, ಅಫ್ಗಾನಿಸ್ತಾನ, ಚೀನಾ ಸೇರಿದಂತೆ ವಿವಿಧ ದೇಶಗಳ ನಾಗರಿಕರು. ಇಂಥ 299 ಮಂದಿಯನ್ನು ಪನಾಮ ದೇಶದ ಪನಾಮ ಸಿಟಿಯ ಹೋಟೆಲ್‌ವೊಂದರಲ್ಲಿ ಕಳೆದ ಶನಿವಾರದಿಂದ ಇರಿಸಲಾಗಿದೆ.

ಅಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬುವ ಪ್ರಕ್ರಿಯೆಯಲ್ಲಿ ಸಹಕಾರ ನೀಡುವಂತೆ ಅಮೆರಿಕವು ಈಗ ಪನಾಮ, ಕೋಸ್ಟರಿಕಾ ಸೇರಿದಂತೆ ಮಧ್ಯ ಅಮೆರಿಕದ ಕೆಲವು ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಮೆರಿಕ ಕಳುಹಿಸುವ ಅಕ್ರಮ ವಲಸಿಗರು ಮತ್ತು ವಲಸಿಗರ ದೇಶಗಳ ನಡುವೆ ‘ಸೇತುವೆ’ಯಾಗಿ ಕೆಲಸ ಮಾಡುವುದಾಗಿ ಪನಾಮ ಹಾಗೂ ಕೋಸ್ಟರಿಕಾ ದೇಶಗಳು ಒಪ್ಪಿಕೊಂಡಿವೆ.

ಮುಂದಿನ ವಾರದಲ್ಲಿ ಭಾರತವೂ ಸೇರಿದಂತೆ ಮಧ್ಯ ಏಷ್ಯಾ ದೇಶಗಳ ಹಲವು ನಾಗರಿಕರನ್ನು ಅಮೆರಿಕ ಸೇನಾ ವಿಮಾನಗಳ ಮೂಲಕ ಕೋಸ್ಟರಿಕಾಕ್ಕೆ ಕಳುಹಿಸಲಿದೆ. ಹೋಟೆಲ್‌ನಲ್ಲಿ ಸುಮಾರು 50 ಮಕ್ಕಳೂ ಇದ್ದಾರೆ ಎಂದು ವರದಿಯಾಗಿದೆ.

ವಾಪಸ್‌ ತೆರಳಲು ಒಪ್ಪದ ವಲಸಿಗರು

ಪನಾಮ ಹೋಟೆಲ್‌ನಲ್ಲಿ ಇರಿಸಲಾಗಿರುವ 299 ವಲಸಿಗರ ಪೈಕಿ 171 ವಲಸಿಗರು ತಮ್ಮ ತಮ್ಮ ದೇಶಗಳಿಗೆ ವಾಪಸು ತೆರಳಲು ಒಪ್ಪಿಕೊಂಡಿದ್ದಾರೆ. ಆದರೆ, ಸುಮಾರು 98 ಮಂದಿ ವಾಪಸು ತೆರಳಲು ಒಪ್ಪಿಕೊಂಡಿಲ್ಲ. ಇರಾನ್‌, ಅಫ್ಗಾನಿಸ್ತಾನದಂಥ ದೇಶದ ವಲಸಿಗರ ಪೈಕಿ ಮಹಿಳೆಯರು ಮತ್ತು ಮಕ್ಕಳೂ ಇದ್ದಾರೆ. ಇವರು ಈಗ ಸಹಾಯಕ್ಕಾಗಿ ಅಂಗಲಾಚು ತ್ತಿದ್ದಾರೆ. ಇವರೆಲ್ಲರೂ ಅಮೆರಿಕದ ಆಶ್ರಯ ಕೋರಲು ಇಚ್ಛಿಸುವವರು ಎನ್ನಲಾಗಿದೆ.

98 ವಲಸಿಗರನ್ನು ಬುಧವಾರ ಪನಾಮದ ಗಡಿ ಭಾಗದ ಡಾರಿಯನ್‌ ಪ್ರದೇಶಕ್ಕೆ ರವಾನಿಸಿದೆ. ಈ ಪ್ರದೇಶವು ಅತಿ ದಟ್ಟವಾದ ಮತ್ತು ವಿಷ ಪ್ರಾಣಿ, ಜಂತುಗಳಿರುವ ಅರಣ್ಯವನ್ನು ಹೊಂದಿದೆ. ಮುಂದಿನ ನಿರ್ಧಾರ ಕೈಗೊಳ್ಳುವವರೆಗೂ ಇವರು ಇಲ್ಲಿಯೇ ಇರಲಿದ್ದಾರೆ ಎಂದು ಪನಾಮ ಸರ್ಕಾರ ಹೇಳಿದೆ.

‘ಭಾರತೀಯರು ಸುರಕ್ಷಿತ’

ಪನಾಮ ಹೋಟೆಲ್‌ನಲ್ಲಿ ಭಾರತೀಯರು ಇರುವ ಬಗ್ಗೆ ಮತ್ತು ಅವರನ್ನು ವಾಪಸು ಕರೆಸಿಕೊಳ್ಳುವ ಬಗ್ಗೆ ಪನಾಮ ಸರ್ಕಾರವು ಅಲ್ಲಿರುವ ಭಾರತದ ರಾಯಭಾರ ಕಚೇರಿಗೆ ಮಾಹಿತಿ ನೀಡಿದೆ. ಈ ಬಗ್ಗೆ ಭಾರತದ ರಾಯಭಾರ ಕಚೇರಿಯು ಗುರುವಾರ ತನ್ನ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿದೆ.

‘ನಾವು ಪನಾಮ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಭಾರತೀಯರು ಅಲ್ಲಿನ ಹೋಟೆಲ್‌ನಲ್ಲಿ ಸುರಕ್ಷಿತವಾಗಿದ್ದಾರೆ. ಅವರ ಸುರಕ್ಷತೆಗಾಗಿ ರಾಯಭಾರ ಕಚೇರಿ ತಂಡವು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’ ಎಂದು ಕಚೇರಿ ಪೋಸ್ಟ್‌ ಹಂಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.