
ವಾಷಿಂಗ್ಟನ್: ರಾಷ್ಟ್ರೀಯ ತುರ್ತು ಸಂದರ್ಭಗಳಲ್ಲಿ ಬಳಸಲು ಉದ್ದೇಶಿಸಲಾದ ಕಾನೂನು ಬಳಸಿಕೊಂಡು ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಸೇರಿದಂತೆ ವಿವಿಧ ದೇಶಗಳ ಆಮದು ಸರಕುಗಳ ಮೇಲೆ ವಿಧಿಸಿದ್ದ ವ್ಯಾಪಕ ಸುಂಕಗಳನ್ನು ಶುಕ್ರವಾರ ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
ಜಾಗತಿಕ ಆರ್ಥಿಕತೆ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರುವ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಟ್ರಂಪ್ ಅವರ ಅಧಿಕಾರದ ಅತ್ಯಂತ ವಿವಾದಾತ್ಮಕ ಪ್ರತಿಪಾದನೆಗಳಲ್ಲಿ ಒಂದನ್ನು ತಿರಸ್ಕರಿಸಿದೆ.
6-3 ನ್ಯಾಯಮೂರ್ತಿಗಳ ಬೆಂಬಲದ ಬಹುಮತದ ತೀರ್ಪನ್ನು ಬರೆದ ಕನ್ಸರ್ವೇಟಿವ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್, ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಟ್ರಂಪ್ ಅವರು, ತಮ್ಮ ಅಧಿಕಾರ ವ್ಯಾಪ್ತಿ ಮೀರಿ 1977ರ ಈ ಕಾನೂನನ್ನು ಸುಂಕ ಹೇರಿಕೆಗೆ ಬಳಸಿದ್ದಾರೆ ಎಂಬ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದ್ದಾರೆ.
ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ ಅಥವಾ ಐಇಇಪಿಎ ಕಾನೂನು ಅನ್ನು ಬಳಸಿಕೊಂಡು ಟ್ರಂಪ್ ಸುಂಕ ವಿಧಿಸಿರುವುದು ಅಮೆರಿಕ ಕಾಂಗ್ರೆಸ್(ಸಂಸತ್) ಅಧಿಕಾರದ ಮೇಲಿನ ಹಸ್ತಕ್ಷೇಪವಾಗಿದೆ. ಅಲ್ಲದೆ ದೇಶದ ಪ್ರಮುಖ ಕಾನೂನು ತತ್ವವನ್ನು ಉಲ್ಲಂಘಿಸುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಸಂವಿಧಾನವು ತೆರಿಗೆ ವಿಧಿಸುವ ಅಧಿಕಾರವನ್ನು ಅಮೆರಿಕ ಕಾಂಗ್ರೆಸ್‌ಗೆ ಮಾತ್ರ ನೀಡಿದೆ. ಕಾರ್ಯಾಂಗಕ್ಕೆ ಜನರ ಜೇಬಿಗೆ ಕೈಹಾಕುವ ಯಾವುದೇ ಅಂತರ್ಗತ ಅಧಿಕಾರವಿಲ್ಲ ಎಂದು ನ್ಯಾಯಾಕಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.