ADVERTISEMENT

ಭಾರತದ ಮೇಲೆ ಶೇ 500ರಷ್ಟು ಸುಂಕ ವಿಧಿಸಬಹುದಾದ ಮಸೂದೆಗೆ ಟ್ರಂಪ್ ಒಪ್ಪಿಗೆ?: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜುಲೈ 2025, 6:44 IST
Last Updated 2 ಜುಲೈ 2025, 6:44 IST
<div class="paragraphs"><p>ರಾಯಿಟರ್ಸ್ ಚಿತ್ರ</p></div>
   

ರಾಯಿಟರ್ಸ್ ಚಿತ್ರ

ವಾಷಿಂಗ್ಟನ್: ರಷ್ಯಾದ ತೈಲ ಮತ್ತು ಇಂಧನ ಉತ್ಪನ್ನಗಳನ್ನು ಖರೀದಿಸುವ ಚೀನಾ ಮತ್ತು ಭಾರತದಂತಹ ದೇಶಗಳ ಮೇಲೆ ಶೇ 500ರಷ್ಟು ಸುಂಕ ವಿಧಿಸಬಹುದಾದ ಸೆನೆಟ್ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದನೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆಗಳನ್ನು ಉಲ್ಲೇಖಿಸಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ರಷ್ಯಾ ವಿರುದ್ಧ ಕಠಿಣ ನಿರ್ಬಂಧಗಳ ಮಸೂದೆಯನ್ನು ಮತಕ್ಕಾಗಿ ಸೆನೆಟ್ ಮುಂದಿಡಬೇಕು ಎಂದು ಟ್ರಂಪ್ ನನಗೆ ಹೇಳಿದ್ದಾರೆ ಎಂದು ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಭಾನುವಾರ ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ADVERTISEMENT

ಟ್ರಂಪ್ ಅವರ ಈ ನಿರ್ಧಾರವನ್ನು ಒಂದು ದೊಡ್ಡ ಪ್ರಗತಿ ಎಂದು ಕರೆದಿರುವ ಅವರು, ಇದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಉಕ್ರೇನ್ ವಿರುದ್ಧದ ಯುದ್ಧದ ಕುರಿತು ಮಾತುಕತೆಗೆ ಒತ್ತಾಯಪೂರ್ವಕವಾಗಿ ಕರೆತರುವ ಪ್ರಯತ್ನಗಳ ಭಾಗವಾಗಿದೆ ಎಂದು ಹೇಳಿದ್ದಾರೆ.

‘ಈ ಮಸೂದೆಯ ಪರಿಣಾಮ ಹೇಗಿರುತ್ತದೆ ಎಂದರೆ, ನೀವು ರಷ್ಯಾದಿಂದ ಉತ್ಪನ್ನಗಳನ್ನು ಖರೀದಿಸುತ್ತಿದ್ದರೆ, ಉಕ್ರೇನ್‌ಗೆ ನೆರವು ನೀಡದೇ ಇದ್ದರೆ, ಅಮೆರಿಕವು ನಿಮ್ಮ ದೇಶದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ 500ರಷ್ಟು ಸುಂಕ ವಿಧಿಸುತ್ತದೆ. ಭಾರತ ಮತ್ತು ಚೀನಾ ರಷ್ಯಾದಿಂದ ಶೇ 70ರಷ್ಟು ತೈಲ ಖರೀದಿಸುತ್ತವೆ’ ಎಂದು ಗ್ರಹಾಂ ಹೇಳಿದ್ದಾರೆ.

ಆ ಮಸೂದೆ ಅಮೆರಿಕ ಸಂಸತ್ತಿನಲ್ಲಿ ಅಂಗೀಕಾರ ಪಡೆದು ಕಾನೂನಾಗಿ ಜಾರಿ ಮಾಡಲು ಸಹಿ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಟ್ರಂಪ್ ನಿರ್ಧರಿಸಬಹುದು ಎಂದು ಅವರು ಒತ್ತಿ ಹೇಳಿದ್ದಾರೆ.

ಉಕ್ರೇನ್ ಮೇಲೆ ರಷ್ಯಾದ ಕ್ರೂರ ಆಕ್ರಮಣಕ್ಕಾಗಿ ಚೀನಾ, ಭಾರತ ಮತ್ತು ರಷ್ಯಾ ವಿರುದ್ಧ ಈ ಮಸೂದೆ ಆರ್ಥಿಕ ಬಂಕರ್ ಬಸ್ಟರ್ ಆಗಿದೆ. ಮಸೂದೆ ಅಂಗೀಕಾರವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಗ್ರಹಾಂ ಹೇಳಿದ್ದಾರೆ.

ಗ್ರಹಾಂ ಅವರ ಹೇಳಿಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್, ರಷ್ಯಾಕ್ಕೆ ಅಮೆರಿಕದ ಸೆನೆಟರ್ ಅವರ ನಿಲುವಿನ ಬಗ್ಗೆ ತಿಳಿದಿದೆ ಮತ್ತು ಅವರ ಹೇಳಿಕೆಯನ್ನು ಗಮನಿಸಿದೆ ಎಂದು ಹೇಳಿದ್ದಾರೆ.

ಸೆನೆಟರ್ ಅವರ ಅಭಿಪ್ರಾಯಗಳು ನಮಗೆ ಚೆನ್ನಾಗಿ ತಿಳಿದಿವೆ, ಅವು ಇಡೀ ಜಗತ್ತಿಗೆ ಚೆನ್ನಾಗಿ ತಿಳಿದಿವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.