ADVERTISEMENT

ಇರಾನ್‍ನಿಂದ ತೈಲ ಉತ್ಪನ್ನಗಳ ಆಮದು ನಿಲ್ಲಿಸುವಂತೆ ಭಾರತಕ್ಕೆ ಅಮೆರಿಕ ಆದೇಶ

ಏಜೆನ್ಸೀಸ್
Published 27 ಜೂನ್ 2018, 11:38 IST
Last Updated 27 ಜೂನ್ 2018, 11:38 IST
ಕೃಪೆ: ರಾಯಿಟರ್ಸ್
ಕೃಪೆ: ರಾಯಿಟರ್ಸ್   

ವಾಷಿಂಗ್ಟನ್: ನವಂಬರ್ ತಿಂಗಳ ಹೊತ್ತಿಗೆ ಇರಾನ್‌ನಿಂದ ತೈಲ ಉತ್ಪನ್ನಗಳ ಆಮದು ಸಂಪೂರ್ಣವಾಗಿ ನಿಲ್ಲಿಸುವಂತೆ ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳಿಗೆ ಅಮೆರಿಕ ಆದೇಶ ನೀಡಿದೆ.

ಚೀನಾ ಮತ್ತು ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳು ನವಂಬರ್ 4 ತಾರೀಖಿನೊಳಗೆ ಇರಾನ್‍ನಿಂದ ತೈಲ ಉತ್ಪನ್ನಗಳ ಆಮದು ನಿಲ್ಲಿಸಬೇಕು ಎಂದು ಅಮೆರಿಕದ ಗೃಹ ಸಚಿವಾಲಯ ಹೇಳಿದೆ. ಚೀನಾ ಮತ್ತು ಭಾರತ ಇರಾನ್‍ನಿಂದ ತೈಲ ಆಮದು ಮಾಡುತ್ತಿರುವ ಪ್ರಧಾನ ರಾಷ್ಟ್ರಗಳಾಗಿವೆ.

ಇರಾನ್ ವಿರುದ್ಧ ಹೇರಿರುವ ವಾಣಿಜ್ಯ ನಿರ್ಬಂಧ ಭಾರತ ಮತ್ತು ಚೀನಾದ ಕಂಪನಿಗಳಿಗೂ ಅನ್ವಯವಾಗುತ್ತದೆ.ಈ ಎರಡು ರಾಷ್ಟ್ರಗಳಿಗೆ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎಂದು ಅಮೆರಿಕದ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಾಜಕೀಯ ಮತ್ತು ಆರ್ಥಿಕವಾಗಿ ಇರಾನ್‍ನ್ನು ಪ್ರತ್ಯೇಕವಾಗಿಡಲು ಅಮೆರಿಕ ಈ ರೀತಿಯ ನಡೆ ಸ್ವೀಕರಿಸಿದೆ.

ADVERTISEMENT

ಇರಾನ್‌‍ನಿಂದ ತೈಲ ಆಮದಿನ ಪ್ರಮಾಣವನ್ನು ಈಗಲೇ ಕಡಿಮೆ ಮಾಡುತ್ತಾ ಬಂದರೆ ನವಂಬರ್ ತಿಂಗಳ ಹೊತ್ತಿಗೆ ಪೂರ್ಣವಾಗಿ ನಿಲ್ಲಿಸಬಹುದು. ಈ ವಿಷಯದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅಮೆರಿಕ ಹೇಳಿದೆ.
ಆದಾಗ್ಯೂ, ಮುಂದಿನ ವಾರ ಭಾರತದೊಂದಿಗೆ ನಡೆಯಲಿರುವ ಮಾತುಕತೆಯಲ್ಲಿ ಈ ವಿಷಯವನ್ನು ಅಮೆರಿಕ ಚರ್ಚಿಸುವ ಸಾಧ್ಯತೆ ಇದೆ.

ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜತೆಗಿನ 2015ರ ಐತಿಹಾಸಿಕ ಪರಮಾಣು ಒಪ್ಪಂದವನ್ನು ರದ್ದುಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.