ADVERTISEMENT

ಉದ್ಯೋಗ ಪರವಾನಗಿ: ಸ್ವಯಂಚಾಲಿತ ವಿಸ್ತರಣೆ ಸೌಲಭ್ಯ ನಿಲ್ಲಿಸಿದ ಅಮೆರಿಕ

ಪಿಟಿಐ
Published 30 ಅಕ್ಟೋಬರ್ 2025, 14:46 IST
Last Updated 30 ಅಕ್ಟೋಬರ್ 2025, 14:46 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ವಾಷಿಂಗ್ಟನ್: ಎಚ್‌–1ಬಿ ವೀಸಾಕ್ಕಾಗಿ ಹೊಸದಾಗಿ ಸಲ್ಲಿಕೆಯಾಗುವ ಅರ್ಜಿಗೆ ಸಂಬಂಧಿಸಿದ ಶುಲ್ಕವನ್ನು ಹೆಚ್ಚಳ ಮಾಡಿದ್ದ ಅಮೆರಿಕ, ಈಗ ವಿದೇಶಿಗರ ಉದ್ಯೋಗ ಪರವಾನಗಿ ಅವಧಿ ಸ್ವಯಂಚಾಲಿತವಾಗಿ ವಿಸ್ತರಣೆಯಾಗುವ ಸೌಲಭ್ಯವನ್ನು ಕೊನೆಗೊಳಿಸುತ್ತಿರುವುದಾಗಿ ಘೋಷಿಸಿದೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತದ ಈ ನಡೆಯಿಂದ, ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಭಾರಿ ಸಂಖ್ಯೆಯ ಭಾರತೀಯರಿಗೆ ತೊಂದರೆಯಾಗಲಿದೆ.

ಭದ್ರತಾ ಇಲಾಖೆಯು ಈ ಕುರಿತು ಬುಧವಾರ ಘೋಷಣೆ ಮಾಡಿದೆ. ‘ವಿದೇಶಿಯರ ಉದ್ಯೋಗ ದೃಢೀಕರಣ ದಾಖಲೆಗಳ (ಇಎಡಿ) ಸಿಂಧುತ್ವವನ್ನು ವಿಸ್ತರಣೆ ಮಾಡುವುದಕ್ಕೂ ಮುನ್ನ ವ್ಯಾಪಕ ಪರಿಶೀಲನೆ ನಡೆಸಲಾಗುವುದು’ ಎಂದು ಹೇಳಿದೆ.

ADVERTISEMENT

‘ಹೊಸ ನಿಯಮದ ಪ್ರಕಾರ, 2025ರ ಅಕ್ಟೋಬರ್ 30ರಂದು ಅಥವಾ ನಂತರ ತಮ್ಮ ಇಎಡಿ ನವೀಕರಣಕ್ಕೆ ಅರ್ಜಿ ಸಲ್ಲಿಸುವ ವಿದೇಶಿಯರ ಉದ್ಯೋಗ ಪರವಾನಗಿ ಅವಧಿಯು ಸ್ವಯಂಚಾಲಿತವಾಗಿ ವಿಸ್ತರಣೆ ಆಗುವುದಿಲ್ಲ’ ಎಂದು ಇಲಾಖೆ ತಿಳಿಸಿದೆ.

‘ಅಕ್ಟೋಬರ್‌ 30ರ ಒಳಗಾಗಿ, ಪರವಾನಗಿಯನ್ನು ಸ್ವಯಂಚಾಲಿತವಾಗಿ ವಿಸ್ತರಣೆ ಮಾಡಲಾಗಿರುವ ಇಎಡಿಗಳಿಗೆ ಈ ಮಧ್ಯಂತರ ನಿಯಮ ಅನ್ವಯಿಸದು’ ಎಂದು ಸ್ಪಷ್ಟಪಡಿಸಿದೆ.

‘ಇಎಡಿ ಅವಧಿ ಕೊನೆಗೊಳ್ಳುವುದಕ್ಕೂ 180 ದಿನಗಳ ಮೊದಲೇ ನವೀಕರಣಕ್ಕೆ ವಿದೇಶಿಯರು ಅರ್ಜಿ ಸಲ್ಲಿಸಬೇಕು’ ಎಂದೂ ಇಲಾಖೆ ಸೂಚಿಸಿದೆ.

ಜೋ ಬೈಡನ್‌ ಅವರು ಅಧ್ಯಕ್ಷರಾಗಿದ್ದ ವೇಳೆ, ಇಎಡಿ ನವೀಕರಣ ಕೋರಿ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸುವ ವಿದೇಶಿಯರ ಉದ್ಯೋಗ ಪರವಾನಗಿಯು ಸ್ವಯಂಚಾಲಿತವಾಗಿ 540 ದಿನಗಳಷ್ಟು ವಿಸ್ತರಣೆಯಾಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.