
ಡೊನಾಲ್ಡ್ ಟ್ರಂಪ್
ದಾವೋಸ್/ಸ್ವಿಟ್ಜರ್ಲೆಂಡ್ : ‘ಸೇನಾ ಬಲ ಬಳಸಿ ಗ್ರೀನ್‌ಲ್ಯಾಂಡ್ ಅನ್ನು ಬಲವಂತವಾಗಿ ವಶಕ್ಕೆ ಪಡೆಯುವುದಿಲ್ಲ. ಆದರೆ, ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಕ್ಷಣವೇ ಮಾತುಕತೆ ನಡೆಯಬೇಕು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದರು.
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಭೆಯಲ್ಲಿ ಗ್ರೀನ್‌ಲ್ಯಾಂಡ್ ವಿಷಯವನ್ನು ಪ್ರಸ್ತಾಪಿಸಿದ ಟ್ರಂಪ್, ‘ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕ ವಶಕ್ಕೆ ಪಡೆಯುವುದು ಅಗತ್ಯ’ ಎಂದು ಪ್ರತಿಪಾದಿಸಿದರು.
‘ಗ್ರೀನ್‌ಲ್ಯಾಂಡ್’ ಅನ್ನು ರಕ್ಷಿಸಬಲ್ಲ ಏಕೈಕ ದೇಶ ಅಮೆರಿಕ. ಆ ಉದ್ದೇಶದಿಂದ ನಾನು ಇಲ್ಲಿ ಮತ್ತೊಮ್ಮೆ ಈ ವಿಷಯ ಪ್ರಸ್ತಾಪಿಸುತ್ತಿದ್ದು, ತಕ್ಷಣವೇ ಮಾತುಕತೆ ನಡೆಯಬೇಕು’ ಎಂದರು.
‘ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕ ವಶಕ್ಕೆ ಪಡೆಯುವುದಕ್ಕೆ ನೀವು ‘ಹೌದು’ ಎನ್ನುವುದಾದರೆ, ನಿಮಗೆ ತುಂಬಾ ಕೃತಜ್ಞರಾಗಿರುತ್ತೇವೆ, ‘ಇಲ್ಲ’ ಎನ್ನುವುದಾದರೆ ನಿಮ್ಮನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ. ಶಕ್ತವಾದ ಮತ್ತು ಸುರಕ್ಷಿತವಾದ ಅಮೆರಿಕ ಎಂದರೆ ‘ಶಕ್ತವಾದ ನ್ಯಾಟೊ’ ಎಂದರ್ಥ ಎಂದು ಟ್ರಂಪ್ ಹೇಳಿದರು.
ಡೆನ್ಮಾರ್ಕ್ ವಿರುದ್ಧ ಸೇನಾ ಕ್ರಮ ಕೈಗೊಳ್ಳುವ ಸಾಧ್ಯತೆ ತಳ್ಳಿಹಾಕಿದ ಟ್ರಂಪ್, ‘ಅಮೆರಿಕ ಮತ್ತು ಯೂರೋಪ್ ನಡುವಿನ ಮೈತ್ರಿಯನ್ನು ಡೆನ್ಮಾರ್ಕ್ ಹರಿದು ಹಾಕುವ ಬೆದರಿಕೆ ಹಾಕುತ್ತಿದೆ’ ಎಂದು ದೂರಿದರು.
ಅಮೆರಿಕ ವಿಶ್ವದ ಆರ್ಥಿಕ ಎಂಜಿನ್: ‘ಅಮೆರಿಕವು ವಿಶ್ವದ ಆರ್ಥಿಕ ಎಂಜಿನ್ ಆಗಿದೆ. ಆದರೆ, ಯೂರೋಪ್ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ’ ಎಂದು ಟ್ರಂಪ್ ಹೇಳಿದರು.
‘ಅಮೆರಿಕವು ಆರ್ಥಿಕ ಪ್ರಗತಿ ಸಾಧಿಸಿದರೆ ಅದರಿಂದ ಇಡೀ ವಿಶ್ವವೇ ಅಭಿವೃದ್ಧಿ ಹೊಂದುತ್ತದೆ. ನಾವೇ ಭೂಮಂಡಲದ ಆರ್ಥಿಕ ಶಕ್ತಿ’ ಎಂದು ಅವರು ಪ್ರತಿಪಾದಿಸಿದರು.
‘ಯೂರೋಪ್ ಬಗ್ಗೆ ಹೇಳುವುದಾರೆ, ಈ ಖಂಡದ ಕೆಲವು ಭಾಗಗಳನ್ನು ಈಗ ಗುರುತಿಸಲು ಆಗುತ್ತಿಲ್ಲ. ನಾನು ಯೂರೋಪ್ ಅನ್ನು ಪ್ರೀತಿಸುತ್ತೇನೆ ಮತ್ತು ಯೂರೋಪ್ ಅಭಿವೃದ್ಧಿ ಹೊಂದುವುದನ್ನು ನೋಡಲು ಬಯಸುತ್ತೇನೆ. ಆದರೆ, ಈ ಖಂಡವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ’ ಎಂದು ಟ್ರಂಪ್ ಹೇಳಿದರು.
‘ಗ್ರೀನ್‌ಲ್ಯಾಂಡ್ ವಿಷಯದಲ್ಲಿ ‘ಚಿಂತನಶೀಲ ರಾಜತಾಂತ್ರಿಕತೆ’ ಅತ್ಯಗತ್ಯ ಎಂದು ನ್ಯಾಟೊ ಮುಖ್ಯಸ್ಥ ಮಾರ್ಕ್ ರುಟ್ಟೆ ಅಭಿಪ್ರಾಯಪಟ್ಟಿದ್ದಾರೆ.
‘ವಿಚಾರಪೂರ್ಣ ರಾಜತಾಂತ್ರಿಕತೆ ಮೂಲಕ ಮಾತ್ರ ಗ್ರೀನ್‌ಲ್ಯಾಂಡ್‌ನ ಈಗಿನ ಬಿಕ್ಕಟ್ಟನ್ನು ಬಗೆಹರಿಸಲು ಸಾಧ್ಯ. ಈ ಪ್ರಯತ್ನವನ್ನು ನಾನು ಸಾರ್ವಜನಿಕವಾಗಿ ಮಾಡಲು ಸಾಧ್ಯವಿಲ್ಲ, ಆದರೆ, ತೆರೆಮರೆಯಲ್ಲಿ ಮಾಡುತ್ತಿದ್ದೇನೆ’ ಎಂದು ವಿಶ್ವ ಆರ್ಥಿಕ ವೇದಿಕೆಯ ಸಭೆಯಲ್ಲಿ ಹೇಳಿದರು.
‘ಆರ್ಕ್‌ಟಿಕ್ ಭದ್ರತೆ ವಿಷಯದಲ್ಲಿ ಟ್ರಂಪ್ ಅವರ ನಿಲುವು ಸರಿಯಾಗಿದೆ. ನಾವು ಆರ್ಕ್‌ಟಿಕ್ ಅನ್ನು ರಕ್ಷಿಸಬೇಕಿದೆ’ ಎಂದಿರುವ ರುಟ್ಟೆ, ಗ್ರೀನ್‌ಲ್ಯಾಂಡ್ ವಿಷಯದಲ್ಲಿ ಉಂಟಾಗಿರುವ ಈಗಿನ ಬಿಕ್ಕಟ್ಟು 76 ವರ್ಷಗಳಷ್ಟು ಹಳೆಯದಾದ ನ್ಯಾಟೊ ಮಿಲಿಟರಿ ಮೈತ್ರಿಕೂಟದ ಪತನಕ್ಕೆ ಕಾರಣವಾಗಬಹುದು‘ ಎಂಬ ವಾದವನ್ನು ಅಲ್ಲಗಳೆದಿದ್ದಾರೆ.
ಟ್ರಂಪ್ ಮಾತು
ಭಾರತ್–ಪಾಕ್ ಸಂಘರ್ಷ ಸೇರಿ ಹಲವು ಯುದ್ಧಗಳನ್ನು ನಿಲ್ಲಿಸಿದ್ದು ನಾನೇ
ಅಮೆರಿಕದಿಂದಲೇ ಕೆನಡಾ ಉಳಿದುಕೊಂಡಿದೆ
ಡೆನ್ಮಾರ್ಕ್ ಕೃತಜ್ಞತೆ ಇಲ್ಲದ ದೇಶ
ಅಮೆರಿಕದಿಂದ ಮಾತ್ರ ಗ್ರೀನ್‌ಲ್ಯಾಂಡ್ ರಕ್ಷಣೆ ಸಾಧ್ಯ
ಗ್ರೀನ್‌ಲ್ಯಾಂಡ್ ಖರೀದಿ ಒಪ್ಪಂದ ತಕ್ಷಣ ಆಗಬೇಕು
ಟ್ರಂಪ್ ವಿಮಾನದಲ್ಲಿ ತಾಂತ್ರಿಕ ದೋಷ
ವಿಮಾನದಲ್ಲಿ ಸಣ್ಣ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಡೊನಾಲ್ಡ್ ಟ್ರಂಪ್ ಮೂರು ಗಂಟೆ ತಡವಾಗಿ ದಾವೋಸ್‌ಗೆ ಬಂದಿಳಿದರು. ಅಮೆರಿಕದ ಅಧ್ಯಕ್ಷರು ದಾವೋಸ್‌ಗೆ ಪ್ರಯಾಣಿಸಿದ್ದ ಏರ್ ಫೋರ್ಸ್ ಒನ್ ವಿಮಾನದಲ್ಲಿ ಎಲೆಕ್ಟ್ರಿಕ್ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣವೇ ವಿಮಾನವು ವಾಷಿಂಗ್ಟನ್‌ಗೆ ಹಿಂತಿರುಗಿತು. ಬದಲಿ ವಿಮಾನದಲ್ಲಿ ಅವರು ಪ್ರಯಾಣ ಮುಂದುವರಿಸಿದರು ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಅಮೆರಿಕದ ಅಧ್ಯಕ್ಷರ ಪ್ರಯಾಣಕ್ಕಾಗಿ ಏರ್ ಫೋರ್ಸ್ ಒನ್ ಎರಡು ಬೋಯಿಂಗ್ ವಿಮಾನಗಳನ್ನು ಅಭಿವೃದ್ಧಿಪಡಿಸಿದೆ. 35 ವರ್ಷಗಳಿಂದ ಬಳಕೆಯಲ್ಲಿರುವ ಈ ವಿಮಾನಗಳ ನಿರ್ವಹಣೆ ಬಗ್ಗೆ ಟ್ರಂಪ್ ಅವರೇ ಹಲವು ಬಾರಿ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.