ADVERTISEMENT

ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ: ಅವಸರದ ನಿರ್ಧಾರ ಇಲ್ಲ ಎಂದ ಅಮೆರಿಕ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 6:03 IST
Last Updated 9 ಸೆಪ್ಟೆಂಬರ್ 2021, 6:03 IST
ಜೆನ್‌ ಪ್ಸಾಕಿ
ಜೆನ್‌ ಪ್ಸಾಕಿ   

ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಿನ ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ನೀಡಲು ಯಾವುದೇ ರೀತಿಯ ಅವಸರ ಇಲ್ಲ ಎಂದು ಅಮೆರಿಕ ತಿಳಿಸಿದೆ.

‘ತಾಲಿಬಾನ್‌ಗಳಿಗೆ ಗೌರವ ನೀಡಬೇಕು ಮತ್ತು ಜಾಗತಿಕ ಸಮುದಾಯದ ಮೌಲ್ಯ ಹೊಂದಿದ ಸದಸ್ಯರು ಎಂದು ಅಧ್ಯಕ್ಷರಾಗಲಿ ಅಥವಾ ರಾಷ್ಟ್ರೀಯ ಭದ್ರತಾ ತಂಡದ ಸದಸ್ಯರು ಪರಿಗಣಿಸಿಲ್ಲ. ತಾಲಿಬಾನ್‌ ಅಂತಹ ಗೌರವವನ್ನು ಸಂಪಾದಿಸಿಲ್ಲ. ಇದೊಂದು ಉಸ್ತುವಾರಿ ಸಚಿವ ಸಂಪುಟವಾಗಿದೆ. ಈ ಸಂಪುಟದಲ್ಲಿ ಜೈಲಿನಲ್ಲಿದ್ದ ನಾಲ್ವರು ಮಾಜಿ ತಾಲಿಬಾನಿಗಳು ಸಹ ಇದ್ದಾರೆ’ ಎಂದು ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ ಸಾಕಿ ತಿಳಿಸಿದ್ದಾರೆ.

‘ನಾವು ಸರ್ಕಾರಕ್ಕೆ ಮಾನ್ಯತೆ ನೀಡುತ್ತೇವೆ ಎಂದು ತಾಲಿಬಾನ್‌ಗೆ ತಿಳಿಸಿಲ್ಲ ಅಥವಾ ಮಾನ್ಯತೆ ನೀಡುವ ಧಾವಂತವೂ ನಮಗಿಲ್ಲ. ಆದರೆ, ಅಫ್ಗಾನಿಸ್ತಾನ ತಾಲಿಬಾನ್‌ ನಿಯಂತ್ರಣದಲ್ಲಿರುವುದರಿಂದ ಸಂಪರ್ಕದಲ್ಲಿರುವುದು ಅನಿವಾರ್ಯ. ಅಫ್ಗಾನಿಸ್ತಾನದಲ್ಲಿರುವ ಅಮೆರಿಕ ನಾಗರಿಕರನ್ನು ವಾಪಸ್‌ ಕರೆತರಲು ತಾಲಿಬಾನ್‌ ಜತೆ ಮಾತುಕತೆ ನಡೆಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

’ತಾಲಿಬಾನ್‌ ಸರ್ಕಾರದಲ್ಲಿನ ಗೃಹ ಸಚಿವ ಸಿರಾಜುದ್ದೀನ್‌ ಹಖ್ಖಾನಿ, ಭಯೋತ್ಪಾದನೆಗೆ ಕುಖ್ಯಾತವಾದ ಹಖ್ಖಾನಿ ಸಂಘಟನೆಯ ಭಯೋತ್ಪಾದಕ. ಅಮೆರಿಕದ ನಾಗರಿಕರೊಬ್ಬರು ಸೇರಿದಂತೆ ಆರು ಜನರು ಬಾಂಬ್‌ ದಾಳಿಯಲ್ಲಿ ಸಾವಿಗೀಡಾದ ಪ್ರಕರಣದಲ್ಲಿ ಈತ ಬೇಕಾಗಿದ್ದಾನೆ. ಅಮೆರಿಕ ಪಡೆಗಳ ಮೇಲೆ ನಡೆದ ದಾಳಿಯಲ್ಲೂ ಈತ ಭಾಗಿಯಾಗಿದ್ದಾನೆ ಎಂದು ಹೇಳಲಾಗಿದೆ. ಈತನನ್ನು ಹಿಡಿದುಕೊಟ್ಟವರಿಗೆ 1 ಕೋಟಿ ಅಮೆರಿಕನ್ ಡಾಲರ್ (₹73.7535 ಕೋಟಿ) ಬಹುಮಾನ ಘೋಷಿಸಲಾಗಿದೆ’ ಎಂದು ಹೇಳಿದ್ದಾರೆ.

‘ಆದರೂ, ಅಫ್ಗಾನಿಸ್ತಾನದ ಉಸ್ತುವಾರಿ ವಹಿಸಿಕೊಂಡವರ ಜತೆ ನಾವು ಮಾತುಕತೆ ನಡೆಸಬಾರದೇ? ಅಫ್ಗಾನಿಸ್ತಾನದಲ್ಲಿ ಉಳಿದಿರುವ ಅಮೆರಿಕದ ನಾಗರಿಕರನ್ನು ವಾಪಸ್‌ ಕರೆತರಬಾರದೇ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.