
ಬಾಂಗ್ಲಾದೇಶ ಧ್ವಜ
– ಪಿಟಿಐ ಚಿತ್ರ
ಢಾಕಾ: ‘ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ‘ಇನ್‌ಕ್ವಿಲಾಬ್ ಮಂಚ್’ ಸಂಘಟನೆಯ ನಾಯಕ ಶರೀಫ್ ಉಸ್ಮಾನ್ ಹಾದಿ ಅವರ ಹತ್ಯೆಗೆ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಒಂದು ಗುಂಪು ಸಂಚು ರೂಪಿಸಿದೆ’ ಎಂದು ಹಾದಿ ಸಹೋದರ ಒಮರ್ ಹಾದಿ ಆರೋಪಿಸಿದ್ದಾರೆ.
ಢಾಕಾದಲ್ಲಿ ‘ಇನ್‌ಕ್ವಿಲಾಬ್ ಮಂಚ್’ ಸಂಘಟನೆ ಮಂಗಳವಾರ ಆಯೋಜಿಸಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಮಾತನಾಡಿದ ಒಮರ್, ‘ಉಸ್ಮಾನ್ ಹಾದಿಯನ್ನು ಕೊಲ್ಲಲು ನೀವೇ ಕಾರಣ. ಈಗ ಇದನ್ನೇ ಸಮಸ್ಯೆಯಾಗಿ ಬಳಸಿಕೊಂಡು ಚುನಾವಣೆಯನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದ್ದೀರಿ. ಉಸ್ಮಾನ್ ಹಾದಿ ಕೊಲೆಯಾದಾಗ ಅಧಿಕಾರದಲ್ಲಿದ್ದವರು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
‘ನನ್ನ ಸಹೋದರನ ಹತ್ಯೆಯಲ್ಲಿ ಭಾಗಿಯಾಗಿರುವ ಇಡೀ ಗುಂಪಿನ ವಿವರವನ್ನು ಸರ್ಕಾರವು ತಕ್ಷಣವೇ ಬಹಿರಂಗಪಡಿಸಬೇಕು. ಇಲ್ಲದಿದ್ದರೆ, ನೀವು ದೇಶವನ್ನು ಬಿಟ್ಟು ಪಲಾಯನ ಮಾಡಬೇಕಾಗಬಹುದು’ ಎಂದು ಎಚ್ಚರಿಸಿದ್ದಾರೆ.
ಅವಾಮಿ ಲೀಗ್ ಪಕ್ಷ ಮತ್ತು ಭಾರತವನ್ನು ತೀವ್ರವಾಗಿ ಟೀಕಿಸುತ್ತಿದ್ದ ಹಾದಿ, ಕಳೆದ ವರ್ಷ ನಡೆದ ‘ಜುಲೈ ದಂಗೆ’ ಎಂದೇ ಕರೆಯುವ ವಿದ್ಯಾರ್ಥಿಗಳ ನೇತೃತ್ವದ ಹಿಂಸಾತ್ಮಕ ಪ್ರತಿಭಟನೆಯ ನಾಯಕರಲ್ಲಿ ಒಬ್ಬರಾಗಿದ್ದರು. ಹಸೀನಾ ನೇತೃತ್ವದ ಸರ್ಕಾರವನ್ನು ಉರುಳಿಸಿದ ಬಳಿಕ ‘ಇನ್‌ಕ್ವಿಲಾಬ್ ಮಂಚ್’ವನ್ನು ಸ್ಥಾಪಿಸಿದ್ದರು.
2026ರ ಫೆಬ್ರುವರಿ 12ರಂದು ಬಾಂಗ್ಲಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇದರಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದ ಹಾದಿ ಪ್ರಚಾರ ಆರಂಭಿಸಿದ್ದರು. ಡಿ.12ರಂದು ಹಾದಿ ಅವರು ಪ್ರಚಾರ ನಡೆಸುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಮುಸುಕುಧಾರಿ ವ್ಯಕ್ತಿಯೊಬ್ಬರು ಮೇಲೆ ಗುಂಡು ಹಾರಿಸಿದ್ದರು. ತೀವ್ರ ಗಾಯಗೊಂಡಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗೆ ಸಿಂಗಪುರಕ್ಕೆ ಕಳುಹಿಸಲಾಗಿತ್ತು. ಆರು ದಿನಗಳ ಬಳಿಕ ನಿಧನರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.