ADVERTISEMENT

ಅವಾಮಿ ಲೀಗ್‌ ನಾಯಕರ ಮನೆಗಳ ಮೇಲೆ ದಾಳಿ; ಬಾಂಗ್ಲಾದಾದ್ಯಂತ ವಿಸ್ತರಿಸಿದ ಹಿಂಸಾಚಾರ

ಪಿಟಿಐ
Published 7 ಫೆಬ್ರುವರಿ 2025, 13:52 IST
Last Updated 7 ಫೆಬ್ರುವರಿ 2025, 13:52 IST
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರ ಮನೆಯನ್ನು ಪ್ರತಿಭಟನಕಾರರು ಧ್ವಂಸಗೊಳಿಸಿದ ಬಳಿಕ ಕೊಠಡಿಯೊಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕುಟುಂಬದ ಸದಸ್ಯರ ಭಾವಚಿತ್ರಗಳು–ಎಪಿ ಚಿತ್ರ
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರ ಮನೆಯನ್ನು ಪ್ರತಿಭಟನಕಾರರು ಧ್ವಂಸಗೊಳಿಸಿದ ಬಳಿಕ ಕೊಠಡಿಯೊಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕುಟುಂಬದ ಸದಸ್ಯರ ಭಾವಚಿತ್ರಗಳು–ಎಪಿ ಚಿತ್ರ   

ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರ ಅವಾಮಿ ಲೀಗ್‌ ಪಕ್ಷದ ಪ್ರಮುಖ ನಾಯಕರ ಮನೆಗಳ ಮೇಲೆ ಶುಕ್ರವಾರ ಪ್ರತಿಭಟನಕಾರರು ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. 

ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್‌ ಅವರ ನಿವಾಸವನ್ನು ‍ಗುರುವಾರ ಧ್ವಂಸಗೊಳಿಸಿದ ಬೆನ್ನಲ್ಲೇ, ಶುಕ್ರವಾರ 2 ಡಜನ್‌ಗೂ ಅಧಿಕ ಜಿಲ್ಲೆಗಳಲ್ಲಿ ಅವರ ಕಲಾಕೃತಿಗಳನ್ನು ನಾಶಪಡಿಸಲಾಗಿದೆ.  

ಶೇಖ್ ಹಸೀನಾ ಅವರು ಫೇಸ್‌ಬುಕ್‌ ಮೂಲಕ ಬುಧವಾರ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇದನ್ನು ಪ್ರತಿಭಟಿಸಿ, ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಚಳವಳಿ (ಎಡಿಎಸ್‌ಎಂ) ಸಂಚಾಲಕ ಹಸ್ನತ್‌ ಅಬ್ದುಲ್ಲಾ ಅವರು ಪ್ರತಿಭಟನೆಗೆ ಕರೆ ನೀಡಿದ್ದರು. ನಂತರ ದೇಶದಾದ್ಯಂತ ಪ್ರತಿಭಟನಕಾರರು ಬೀದಿಗಿಳಿದು, ಅವಾಮಿ ಲೀಗ್‌ ನಾಯಕರ ಮನೆಗಳನ್ನು ನಾಶಪಡಿಸಿದರು.

ADVERTISEMENT

‘ಅವಾಮಿ ಲೀಗ್‌ನ ಕಾರ್ಯಕಾರಿ ಸದಸ್ಯ ಶೇಖ್ ಸಲೀಂ ಅವರ ಮನೆಯನ್ನು ಶುಕ್ರವಾರ ಬೆಳಿಗ್ಗೆ 1.30ರ ವೇಳೆಗೆ ಬೆಂಕಿ ಹಚ್ಚಿ ನಾಶಪಡಿಸಲಾಗಿದೆ. ಇದಾಗಿ ಒಂದು ಗಂಟೆ ಕಳೆದರೂ, ಸ್ಥಳಕ್ಕೆ ಆಗ್ನಿಶಾಮಕ ವಾಹನ ತೆರಳದಂತೆ ತಡೆಯೊಡ್ಡಲಾಯಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ಒಬೈದುಲ್‌ ಖಾದರ್‌, ಅವರ ಸಹೋದರ ಅಬ್ದುಲ್‌ ಖಾದರ್‌, ಮಾಜಿ ಮೇಯರ್ ಶಾಹದಾತ್‌ ಮನೆಗಳನ್ನು ನಾಶಪಡಿಸಲಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ ಎಂದು ‘ಡೈಲಿ ಸ್ಟಾರ್‌’ ಪತ್ರಿಕೆ ವರದಿ ಮಾಡಿದೆ.

‘ದೇಶದಾದ್ಯಂತ ನಡೆಯುತ್ತಿರುವ ಮನೆಗಳ ಮೇಲೆ ಬೆಂಕಿ ಹಚ್ಚುವುದು ಹಾಗೂ ಧ್ವಂಸಗೊಳಿಸುವುದನ್ನು ಬೆಂಬಲಿಸುವುದಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನಸ್‌ ತಿಳಿಸಿದ್ದಾರೆ.

ದೇಶದ ನಾಗರಿಕರು ಹಾಗೂ ಆಸ್ತಿಗಳಿಗೆ ಸೂಕ್ತ ರಕ್ಷಣೆ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ ಎಂದು ‘ಢಾಕಾ ಟ್ರಿಬ್ಯೂನ್‌’ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.