ಲಲಿತ್ ಮೋದಿ
ಚಿತ್ರ: ಇನ್‌ಸ್ಟಾಗ್ರಾಂ
ಪೋರ್ಟ್ ವಿಲಾ(ವನವಾಟು): ಭಾರತದ ಉದ್ಯಮಿ ಲಲಿತ್ ಮೋದಿ ಅವರಿಗೆ ನೀಡಲಾಗಿರುವ ಪಾಸ್‌ಪೋರ್ಟ್‌ಅನ್ನು ರದ್ದು ಮಾಡುವಂತೆ ವನುವಾಟು ಪ್ರಧಾನಿ ಜೋಥಮ್ ನಪಾಟ್ ಅವರು ತಮ್ಮ ಪೌರತ್ವ ಸಮಿತಿಗೆ ಸೋಮವಾರ ಸೂಚನೆ ನೀಡಿದರು.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಅವ್ಯವಹಾರ ನಡೆಸಿದ ಆರೋಪ ಹೊತ್ತಿರುವ ಲಲಿತ್ ಮೋದಿ ಅವರು 2010ರಲ್ಲೇ ದೇಶವನ್ನು ತೊರೆದಿದ್ದಾರೆ.
‘ಭಾರತಕ್ಕೆ ವಾಪಸ್ ತೆರಳುವುದನ್ನು ತಪ್ಪಿಸಿಕೊಳ್ಳಲು ಅವರು ನಮ್ಮ ಪೌರತ್ವ ಪಡೆದುಕೊಂಡಿದ್ದರು’ ಎಂದು ನಪಾಟ್ ಮಾಹಿತಿ ನೀಡಿದ್ದಾರೆ. ‘ನನ್ನ ಭಾರತೀಯ ಪಾಸ್‌ಪೋರ್ಟ್ ಅನ್ನು ವಾಪಸು ಕೊಡಿ’ ಎಂದು ಲಲಿತ್ ಅವರು ಲಂಡನ್‌ನಲ್ಲಿರುವ ಭಾರತ ರಾಯಭಾರ ಕಚೇರಿಗೆ ಮಾರ್ಚ್ 7ರಂದು ಅರ್ಜಿ ಸಲ್ಲಿಸಿದ್ದರು.
‘ಅಂತರರಾಷ್ಟ್ರೀಯ ಮಾಧ್ಯಮದ ಮೂಲಕ ಲಲಿತ್ ಮೋದಿ ಅವರ ವಿಚಾರ ತಿಳಿಯಿತು. ಇಂಟರ್‌ಪೋಲ್ ಪರಿಶೀಲನೆ ಸೇರಿ ಎಲ್ಲ ರೀತಿಯ ಪರಿಶೀಲನೆಗಳನ್ನು ನಡೆಸಿಯೇ ನಾವು ಪೌರತ್ವ ನೀಡಿದ್ದೆವು. ಆದರೆ, ಇಂಟಲ್‌ಪೋಲ್‌ನವರು ಲಲಿತ್ ಅವರಿಗೆ ಇರುವ ಅಪರಾಧ ಹಿನ್ನೆಲೆಯ ಮಾಹಿತಿ ನೀಡಿರಲಿಲ್ಲ’ ಎಂದು ಪ್ರಧಾನಿ ಹೇಳಿದರು.
‘ಲಲಿತ್ ಅವರ ಬಗ್ಗೆ ಭಾರತ ಸರ್ಕಾರ ಎರಡು ಬಾರಿ ಎಚ್ಚರಿಕೆ ನೀಡಿದೆ. ಆದರೆ ‘ಲಲಿತ್ ಅವರ ಮೇಲಿರುವ ಅಪರಾಧಗಳಿಗೆ ಸಾಕ್ಷ್ಯಗಳಿಲ್ಲ’ ಎಂದು ಹೇಳಿದ ಇಂಟರ್‌ಪೋಲ್, ಭಾರತದ ಮನವಿಯನ್ನು ತಿರಸ್ಕರಿಸಿತು’ ಎಂದರು.
‘ಪೌರತ್ವ ಪಡೆದುಕೊಳ್ಳುವ ಲಲಿತ್ ಅವರ ಮನವಿಯನ್ನು ತಿರಸ್ಕರಿಸುವಂತೆ ಭಾರತ ಸರ್ಕಾರ ವನುವಾಟು ಸರ್ಕಾರಕ್ಕೆ ಮನವಿ ಮಾಡಿತ್ತು’ ಎಂದು ಮೂಲಗಳು ತಿಳಿಸಿವೆ.
ಹೂಡಿಕೆ ಮಾಡಿ ಪೌರತ್ವ ಪಡೆಯಿರಿ:
ಹೂಡಿಕೆ ಮಾಡುವ ಮೂಲಕ ಪೌರತ್ವ ಪಡೆದುಕೊಳ್ಳುವ ಯೋಜನೆಯೊಂದು ವನುವಾಟು ದೇಶದಲ್ಲಿದೆ. ವ್ಯಕ್ತಿಯೊಬ್ಬರ ಪೌರತ್ವ ಅರ್ಜಿಗೆ 1.30 ಲಕ್ಷ ಡಾಲರ್ (ಸುಮಾರು ₹1.13 ಕೋಟಿ) ಪಾವತಿಸಬೇಕು. ಪೌರತ್ವ ಪಡೆದುಕೊಳ್ಳಲು ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಒಂದೊಂದು ಮೊತ್ತವನ್ನು ನಿಗದಿಪಡಿಸಲಾಗಿದೆ. ಹಣ ಪಡೆದುಕೊಂಡು ಪೌರತ್ವ ನೀಡುವುದೇ ಈ ದೇಶದ ಪ್ರಮುಖ ಆದಾಯ ಮೂಲವಾಗಿದೆ. ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ಈ ದೇಶವು 80 ದ್ವೀಪಗಳನ್ನು ಒಳಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.