ADVERTISEMENT

ಅಪ್ಪ, ಲವ್ ಯೂ, ನಿಮ್ಮೊಂದಿಗೆ ನಾವಿದ್ದೇವೆ: ಭಾವುಕರಾದ ಮಡೂರೊ ಪುತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜನವರಿ 2026, 5:59 IST
Last Updated 7 ಜನವರಿ 2026, 5:59 IST
<div class="paragraphs"><p>ಕೊಲಸ್ ಮಡೂರೊ ಗೆರ್ರಾ</p></div>

ಕೊಲಸ್ ಮಡೂರೊ ಗೆರ್ರಾ

   

ಕರಾಕಸ್‌: ಅಮೆರಿಕದಿಂದ ಸೆರೆ ಹಿಡಿಯಲ್ಪಟ್ಟ ವೆನೆಜುವೆಲಾದ ಪದಚ್ಯುತ ಅಧ್ಯಕ್ಷ ನಿಕೊಲಸ್ ಮಡೂರೊ ಅವರ ಪುತ್ರ, ಸಂಸದ ನಿಕೊಲಸ್ ಮಡೂರೊ ಗೆರ್ರಾ ಅವರು ರಾಷ್ಟ್ರೀಯ ಸದನವನ್ನು ಉದ್ದೇಶಿಸಿ ಮಾತನಾಡುವಾಗ ಭಾವುಕರಾದರು.

ಕರಾಕಸ್‌ನಲ್ಲಿ ನಡೆದ ರಾಷ್ಟ್ರೀಯ ಅಸೆಂಬ್ಲಿ ಅಧಿವೇಶನದ 2026ರಿಂದ 2031ರ ಅವಧಿಗೆ ಚುನಾಯಿತರಾದ ಸಂಸದ ಗೆರ್ರಾ ಪ್ರಮಾಣವಚನ ಸ್ವೀಕರಿಸಿದರು.

ADVERTISEMENT

ಈ ಸಂದರ್ಭದಲ್ಲಿ ವೆನೆಜುವೆಲಾ ನಾಯಕತ್ವಕ್ಕೆ ಸಂಪೂರ್ಣ ಬೆಂಬಲವನ್ನು ಘೋಷಿಸಿದರು. ಇದೇ ಸಂದರ್ಭದಲ್ಲಿ ಮಡೂರೊ ದಂಪತಿಯ ಬಿಡುಗಡೆಗೆ ಆಗ್ರಹಿಸಿದ್ದರಲ್ಲದೆ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರಿಗೆ ಅಚಲ ಬೆಂಬಲವನ್ನು ಘೋಷಿಸಿದರು.

ಮಡೂರೊ ಸೆರೆ ಹಿಡಿದಿರುವ ಅಮೆರಿಕದ ಕೃತ್ಯವನ್ನು ಖಂಡಿಸಿರುವ ಗೆರ್ರಾ, ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ಹಾಗೂ ಒಗ್ಗಟ್ಟಿಗಾಗಿ ಮನವಿ ಮಾಡಿದ್ದಾರೆ.

'ಒಂದು ರಾಷ್ಟ್ರದ ಮುಖಂಡನನ್ನು ಅಪಹರಣ ಮಾಡಿರುವುದನ್ನು ಸಹಜ ಎಂದು ಪರಿಗಣಿಸಿದರೆ ಯಾವ ದೇಶವು ಸುರಕ್ಷಿತವಾಗಿರುವುದಿಲ್ಲ' ಎಂದು ಅವರು ಎಚ್ಚರಿಸಿದ್ದಾರೆ.

'ಅಪ್ಪಾ, ನಾನು ನಿಮಗೆ ಹೇಳಬಯಸುತ್ತೇನೆ. ನೀವು ನಮ್ಮೆಲ್ಲರನ್ನು ಪ್ರಬಲರನ್ನಾಗಿಸಿದ್ದೀರಿ. ನೀವು ಹಿಂತಿರುಗುವವರೆಗೂ ನಾವು ನಮ್ಮ ಕರ್ತವ್ಯವನ್ನು ನಿಭಾಯಿಸಲಿದ್ದೇವೆ. ತಾಯ್ನಾಡು ಒಳ್ಳೆಯ ಕೈಗಳಲ್ಲಿದೆ' ಎಂದು ಭಾವೋದ್ವೇಗದಿಂದ ನುಡಿದಿದ್ದಾರೆ.

'ಶೀಘ್ರದಲ್ಲೇ ವೆನೆಜುವೆಲಾದಲ್ಲಿ ನಿಮ್ಮನ್ನು ನಾವು ತಬ್ಬಿಕೊಳ್ಳಲಿದ್ದೇವೆ. ನಿಮ್ಮ ಮಕ್ಕಳನ್ನು, ಸಿಲಿಯಾರನ್ನು ನೋಡಲಿದ್ದೀರಿ' ಎಂದಿದ್ದಾರೆ.

'ವೆನೆಜುವೆಲಾ ಅಮರವಾಗಲಿ, ತಾಯ್ನಾಡು ಅಮರವಾಗಲಿ. ತಾಯ್ನಾಡಿಗೆ ಬೇಕಾದ ಎಲ್ಲವನ್ನು ಮಾಡಲಿದ್ದೇವೆ. ಅಪ್ಪ, ಲವ್ ಯೂ' ಎಂದು ಹೇಳಿದ್ದಾರೆ.