ADVERTISEMENT

ವೈಮಾನಿಕ ದಾಳಿ ಬೆನ್ನಲ್ಲೇ ವೆನೆಜುವೆಲಾ ಅಧ್ಯಕ್ಷ ಮಡುರೊ, ಪತ್ನಿ ಸೆರೆ: ಟ್ರಂಪ್‌

ಏಜೆನ್ಸೀಸ್
Published 3 ಜನವರಿ 2026, 10:29 IST
Last Updated 3 ಜನವರಿ 2026, 10:29 IST
   

ಕ್ಯಾರಕಾಸ್: ವೆನೆಜುವೆಲಾ ಮೇಲಿನ ವೈಮಾನಿಕ ದಾಳಿ ಬಳಿಕ ಅಮೆರಿಕ ಪಡೆಗಳು ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ 'ಟ್ರುತ್ ಸೋಶಿಯಲ್‌'ನಲ್ಲಿ ಪೋಸ್ಟ್‌ ಮಾಡಿರುವ ಅವರು, ವೆನೆಜುವೆಲಾ ಮತ್ತು ಅದರ ಅಧ್ಯಕ್ಷನ ವಿರುದ್ಧ ದೊಡ್ಡ ಪ್ರಮಾಣದ ದಾಳಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಅಮೆರಿಕದ ಕಾನೂನು ಜಾರಿ ಸಂಸ್ಥೆಗಳ ಜತೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಮಡುರೊ ಮತ್ತು ಅವರ ಪತ್ನಿಯನ್ನು ವಶಕ್ಕೆ ಪಡೆದು ದೇಶದಿಂದ ಹೊರಗೆ ಕಳುಹಿಸಲಾಯಿತು ಎಂದು ಹೇಳಿದ್ದಾರೆ.

ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ ಸುಮಾರು ಎರಡು ಗಂಟೆಗಳ ನಂತರ ಟ್ರಂಪ್ ಈ ಪೋಸ್ಟ್‌ ಮಾಡಿದ್ದಾರೆ. ಅಲ್ಲದೇ ಹೆಚ್ಚಿನ ವಿವರಗಳನ್ನು ಫ್ಲೋರಿಡಾದಲ್ಲಿರುವ ಮಾರ್-ಎ-ಲಾಗೊದಲ್ಲಿ ನಿವಾಸದಲ್ಲಿ ಬೆಳಿಗ್ಗೆ 11:00 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ತಿಳಿಸುವುದಾಗಿ ಹೇಳಿದ್ದಾರೆ.

ADVERTISEMENT

ಕ್ಯಾರಕಾಸ್ ಮೇಲೆ ಅಮೆರಿಕ ಸರಣಿ ದಾಳಿ:

ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮೇಲೆ ಅಮೆರಿಕ ಸರಣಿ ದಾಳಿ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಶನಿವಾರ ಮುಂಜಾನೆ ರಾಜಧಾನಿ ಕ್ಯಾರಕಾಸ್‌ ಮೇಲೆ ನಡೆದ ದಾಳಿಯಲ್ಲಿ ಅಮೆರಿಕದ ಪಡೆಗಳು ಭಾಗಿಯಾಗಿರುವುದನ್ನು ಟ್ರಂಪ್ ಆಡಳಿತಾಧಿಕಾರಿಗಳು ದೃಢಪಡಿಸಿದ್ದಾರೆ.

ಸರಣಿ ಸ್ಫೋಟಗಳು ಸಂಭವಿಸಿದ್ದು, ರಾಜಧಾನಿ ಕ್ಯಾರಕಾಸ್‌ನಲ್ಲಿ ವಿದ್ಯುತ್‌ ಕಡಿತಗೊಂಡಿದೆ. ಹಲವು ಯುದ್ಧ ವಿಮಾನಗಳನ್ನು ಬಳಸಿ ಅಮೆರಿಕ ದಾಳಿ ನಡೆಸಿದೆ. ನಗರದ ದಕ್ಷಿಣ ಭಾಗದಲ್ಲಿ ಪ್ರಮುಖ ಸೇನಾ ನೆಲೆಯ ಬಳಿಯೂ ದಟ್ಟವಾದ ಹೊಗೆ ಆವರಿಸಿದೆ. ಈ ಸ್ಫೋಟದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.