
ಅಮೆರಿಕ ಧ್ವಜ
ಮೌಂಟ್ ವೆರ್ನಾನ್/ಅಮೆರಿಕ: ವಾಷಿಂಗ್ಟನ್‌ನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಹಲವೆಡೆ ಸೇತುವೆಗಳು, ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಕೆಲವು ಪ್ರದೇಶಗಳಲ್ಲಿ ಜನರು ಮನೆಗಳ ಚಾವಣಿ ಏರಿ ರಕ್ಷಣೆ ಪಡೆದಿದ್ದಾರೆ.
‘ಮಳೆ ಮತ್ತು ಪ್ರವಾಹ ಹೆಚ್ಚುವ ಸಾಧ್ಯತೆ ಇದ್ದು, ಜನರು ಎಚ್ಚರ ವಹಿಸುವಂತೆ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ’ ವಾಷಿಂಗ್ಟನ್ ಗವರ್ನರ್ ಬಾಬ್ ಫರ್ಗುಸನ್ ‘ಎಕ್ಸ್’ ಪೋಸ್ಟ್ ಮೂಲಕ ಮನವಿ ಮಾಡಿದ್ದಾರೆ.
ಪ್ರಮುಖ ಕೃಷಿ ಪ್ರದೇಶವಾದ ಉತ್ತರ ಸಿಯಾಟಲ್ ಪ್ರವಾಹದಿಂದ ತತ್ತರಿಸಿದ್ದು, ಇಲ್ಲಿನ ಸ್ಕಗಿಟ್ ನದಿ ಪಾತ್ರದಿಂದ ಸುಮಾರು 78 ಸಾವಿರ ಕುಟುಂಬಗಳಿಗೆ ತಕ್ಷಣವೇ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ. ಸ್ಕಗಿಟ್ ಮತ್ತು ಸ್ನೋಹೋಮಿಶ್ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ.
ಅಮೆರಿಕ–ಕೆನಡಾ ಗಡಿ ಪ್ರದೇಶದ ಸುಮಾಸ್, ನೂಕ್ಸಾಕ್, ಎವರ್‌ಸನ್ ನಗರಗಳಿಂದ ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಸುಮಾಸ್ ಗಡಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಸಿಯಾಟಲ್ ಮತ್ತು ವ್ಯಾಂಕೋವರ್ ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
‘ನಾಲ್ಕು ವರ್ಷಗಳ ಹಿಂದೆ ಪ್ರವಾಹಕ್ಕೆ ಸಿಲುಕಿ ಸುಮಾಸ್ ನಗರ ಬಹುತೇಕ ನಾಶವಾಗಿತ್ತು. ಇದೀಗ ಮತ್ತೊಂದು ಮಹಾ ದುರಂತ ಎದುರಾಗಿದೆ’ ಎಂದು ಮೇಯರ್ ಬ್ರೂಸ್ ಬಾಷ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.