ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್
ಟೆಹರಾನ್: 'ನಾವು ಯುದ್ಧವನ್ನು ಬಯಸುವುದಿಲ್ಲ. ಒಂದು ವೇಳೆ, ಇಸ್ರೇಲ್ ಮತ್ತು ಅಮೆರಿಕ ಆಕ್ರಮಣ ಮಾಡಿದರೆ ಅವರ ವಿರುದ್ಧ ನಿಲ್ಲುತ್ತೇವೆ' ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
'ಇರಾನ್ ಅನ್ನು ವಿಭಜಿಸಲು ಮತ್ತು ನಾಶ ಮಾಡಲು ಅಮೆರಿಕ, ಇಸ್ರೇಲ್ ಯತ್ನಿಸುತ್ತಿವೆ. ಆದರೆ, ಇರಾನ್‌ನ ಯಾವೊಬ್ಬ ವ್ಯಕ್ತಿಯೂ ದೇಶದ ವಿಭಜನೆಯನ್ನು ಬಯಸುವುದಿಲ್ಲ' ಎಂದು ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಇಸ್ರೇಲ್, ಅಮೆರಿಕ ಹಾಗೂ ಇರಾನ್ ನಡುವೆ ಇತ್ತೀಚೆಗೆ ಸಂಘರ್ಷ ನಡೆದಿತ್ತು.
ಇಸ್ರೇಲ್ ಪಡೆಗಳು ಇರಾನ್ ಮೇಲೆ ಜೂನ್ 13ರಂದು ದಾಳಿ ಮಾಡಿದ್ದವು. ಇದರೊಂದಿಗೆ, ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಆರಂಭವಾಗಿತ್ತು. ಈ ಯುದ್ಧದಲ್ಲಿ ಅಮೆರಿಕವೂ ಮಧ್ಯಪ್ರವೇಶಿಸಿತ್ತು. ಇರಾನ್‌ನ ಮೂರು ಪ್ರಮುಖ ಪರಮಾಣು ಮೂಲಸೌಕರ್ಯಗಳ ಮೇಲೆ ಜೂನ್ 22ರಂದು ದಾಳಿ ಮಾಡಿತ್ತು. ಇದರೊಂದಿಗೆ ಸಂಘರ್ಷ ಮತ್ತಷ್ಟು ಉದ್ವಿಗ್ನಗೊಂಡಿತ್ತು.
ಅಮೆರಿಕದ ದಾಳಿಯಿಂದ ಕೆರಳಿದ್ದ ಇರಾನ್, ಕತಾರ್ ಹಾಗೂ ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ ತಿರುಗೇಟು ನೀಡಿತ್ತು. ಬಳಿಕ, ಜೂನ್ 24ರಂದು ಕದನಕ್ಕೆ ವಿರಾಮ ಘೋಷಣೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.