ಢಾಕಾ: ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಮರಳಿ ಢಾಕಾಗೆ ಕಳುಹಿಸಿಕೊಡಬೇಕು ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಸೋಮವಾರ ಭಾರತಕ್ಕೆ ರಾಜತಾಂತ್ರಿಕ ಮನವಿ ಸಲ್ಲಿಸಿದೆ.
ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಬಳಿಕ ಬಾಂಗ್ಲಾದೇಶದ ಸರ್ಕಾರ ಪತನಗೊಂಡು, 16 ವರ್ಷಗಳಿಂದ ಪ್ರಧಾನಿಯಾಗಿದ್ದ ಶೇಖ್ ಹಸೀನಾ (77) ಅವರು ಆಗಸ್ಟ್ 5ರಂದು ಭಾರತಕ್ಕೆ ಪಲಾಯನಗೈದಿದ್ದರು.
‘ನರಮೇಧ ಹಾಗೂ ಮಾನವೀಯತೆ ಮೇಲೆ ಎಸಗಿದ ಅಪರಾಧ’ದ ಕಾರಣ ಶೇಖ್ ಹಸೀನಾ, ಸಂಪುಟ ಸಚಿವರು, ಸಲಹೆಗಾರರು, ಸೇನಾಧಿಕಾರಿಗಳ ವಿರುದ್ಧ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ಐಸಿಟಿ) ಬಂಧನ ವಾರಂಟ್ ಹೊರಡಿಸಿತ್ತು.
‘ಭಾರತ ಸರ್ಕಾರಕ್ಕೆ ನಾವು ಅಧಿಕೃತ ರಾಜತಾಂತ್ರಿಕ ಸಂದೇಶವನ್ನು ಕಳುಹಿಸಿದ್ದು, ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸಲಿಕ್ಕಾಗಿ ಶೇಖ್ ಹಸೀನಾ ಅವರನ್ನು ವಾಪಸ್ ಕಳುಹಿಸಬೇಕು ಎಂದು ಕೇಳಿದ್ದೇವೆ’ ಎಂದು ವಿದೇಶಾಂಗ ಇಲಾಖೆಯ ಸಲಹೆಗಾರ ತೌಹೀದ್ ಹೊಸೈನ್ ತಿಳಿಸಿದರು.
‘ಪದಚ್ಯುತಗೊಂಡ ಬಾಂಗ್ಲಾದೇಶದ ಪ್ರಧಾನಿಯನ್ನು ವಾಪಸ್ ಕರೆಸುವ ಸಂಬಂಧ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದೇವೆ’ ಎಂದು ಗೃಹ ಸಚಿವಾಲಯದ ಸಲಹೆಗಾರ ಜಹಾಂಗೀರ್ ಆಲಂ ತಿಳಿಸಿದ್ದರು.
ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಈಗಾಗಲೇ ‘ಹಸ್ತಾಂತರ ಒಪ್ಪಂದ’ವಿದ್ದು, ಅದರ ಅನ್ವಯವೇ ಹಸೀನಾ ಅವರನ್ನು ಮರಳಿ ದೇಶಕ್ಕೆ ಕರೆಸಿಕೊಳ್ಳಲಾಗುವುದು ಎಂದು ಆಲಂ ಸ್ಪಷ್ಟಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.