ADVERTISEMENT

ಭಾರತದ ಮೇಲೂ ನಾವು ಸುಂಕ ಹೇರುತ್ತೇವೆ: ಡೊನಾಲ್ಡ್ ಟ್ರಂಪ್‌

ಪಿಟಿಐ
ರಾಯಿಟರ್ಸ್
Published 14 ಫೆಬ್ರುವರಿ 2025, 15:37 IST
Last Updated 14 ಫೆಬ್ರುವರಿ 2025, 15:37 IST
<div class="paragraphs"><p>ವಾಷಿಂಗ್ಟನ್‌ನಲ್ಲಿರುವ ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತುಕತೆ ನಡೆಸಿದರು  </p></div>

ವಾಷಿಂಗ್ಟನ್‌ನಲ್ಲಿರುವ ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತುಕತೆ ನಡೆಸಿದರು

   

–ಪಿಟಿಐ ಚಿತ್ರ 

ವಾಷಿಂಗ್ಟನ್‌: ‘ಅಮೆರಿಕದ ಸರಕುಗಳ ಮೇಲೆ ಭಾರತ ವಿಧಿಸುವ ಸುಂಕ ತೀರಾ ಹೆಚ್ಚಾಗಿದ್ದು, ನ್ಯಾಯದಿಂದ ಕೂಡಿಲ್ಲ. ಅದಕ್ಕೆ ಪ್ರತಿಯಾಗಿ ನಾವೂ ಭಾರತದ ಸರಕುಗಳ ಮೇಲೆ ಅಷ್ಟೇ ಪ್ರಮಾಣದ ಸುಂಕ ವಿಧಿಸಲಿದ್ದೇವೆ. ಇದರಲ್ಲಿ ಯಾವುದೇ ರಿಯಾಯಿತಿ ಇಲ್ಲ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಕಟಿಸಿದರು.

ADVERTISEMENT

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶ್ವೇತಭವನದಲ್ಲಿ ಮಾತುಕತೆ ನಡೆಸಿದ ಬಳಿಕ ಗುರುವಾರ (ಭಾರತೀಯ ಕಾಲಮಾನ ಶುಕ್ರವಾರ) ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮೋದಿ ಅವರ ಸಮ್ಮುಖದಲ್ಲೇ ಈ ಮಾತು ಹೇಳಿದರು.

ಅಮೆರಿಕದೊಂದಿಗೆ ವ್ಯಾಪಾರ ಮಾಡುತ್ತಿರುವ ಎಲ್ಲ ದೇಶಗಳ ಮೇಲೆ ಪ್ರತಿ ಸುಂಕ ವಿಧಿಸುವ ನೀತಿಯನ್ನು ಅಮೆರಿಕ ಘೋಷಿಸಿದ ಕೆಲ ಗಂಟೆಗಳಲ್ಲೇ ಮೋದಿ–ಟ್ರಂಪ್ ಮಾತುಕತೆ ನಡೆಯಿತು.

‘ಭಾರತ ವಿಧಿಸುವ ದೊಡ್ಡ ಪ್ರಮಾಣದ ಸುಂಕಗಳು, ಭಾರತೀಯ ಮಾರುಕಟ್ಟೆಗೆ ನಾವು ವ್ಯಾಪಕವಾಗಿ ಪ್ರವೇಶಿಸದಂತೆ ಬಲವಾಗಿ ನಮ್ಮನ್ನು ಕಟ್ಟಿಹಾಕಿವೆ. ನಿಜವಾಗಿ ಇದೊಂದು ದೊಡ್ಡ ಸಮಸ್ಯೆ ಎಂಬುದನ್ನು ನಾನು ಹೇಳಲೇಬೇಕಿದೆ’ ಎಂದು ಟ್ರಂಪ್‌ ಹೇಳಿದರು. ‘ಆದರೆ, ಮೋದಿ ಅವರು ಕೆಲವು ಸರಕುಗಳ ಮೇಲಿನ ಸುಂಕದಲ್ಲಿ ತುಸು ಕಡಿತ ಮಾಡಿದ್ದಾರೆ’ ಎಂಬ ಮಾತನ್ನೂ ಪೋಣಿಸಿದರು.

ಟ್ರಂಪ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮೋದಿ, ಭಾರತದ ಹಿತಾಸಕ್ತಿಯನ್ನೂ ಕಾಪಾಡಿಕೊಳ್ಳುವುದಾಗಿ ಸ್ಪಷ್ಟಪಡಿಸಿದರು. ‘ಟ್ರಂಪ್‌ ಅವರಿಗೆ ಅವರ ದೇಶದ ಹಿತಾಸಕ್ತಿಯೇ ಪರಮೋಚ್ಚವಾದುದು. ಅವರ ಈ ಗುಣವನ್ನು ಮೆಚ್ಚುತ್ತೇನೆ ಮತ್ತು ನಾನೂ ಅವರಿಂದ ಕಲಿತಿದ್ದೇನೆ. ಅವರಂತೆಯೇ, ನನಗೂ ಭಾರತದ ಹಿತಾಸಕ್ತಿಯೇ ಎಲ್ಲಕ್ಕಿಂತಲೂ ಮುಖ್ಯವಾಗಿದೆ’ ಎಂದು ಹೇಳಿದರು.

‘ಭಾರತವು ಅಮೆರಿಕದಿಂದ ಅಧಿಕ ಪ್ರಮಾಣದ ತೈಲ, ನೈಸರ್ಗಿಕ ಅನಿಲ, ಎಫ್‌–35 ಯುದ್ದ ವಿಮಾನಗಳು ಮತ್ತು ಮಿಲಿಟರಿ ಶಸ್ತ್ರಾಸ್ತ್ರ ಖರೀದಿಸಲಿದೆ. ಆ ಮೂಲಕ, ಭಾರತ ತನ್ನ ವ್ಯಾಪಾರ ಕೊರತೆಯನ್ನು ತಗ್ಗಿಸಿಕೊಳ್ಳಲಿದೆ’ ಎಂದು ಟ್ರಂಪ್‌ ಸ್ಪಷ್ಟಪಡಿಸಿದರು.

‘ರಕ್ಷಣಾ ಕ್ಷೇತ್ರದಲ್ಲಿ ಪಾಲುದಾರಿಕೆ ವಿಸ್ತರಿಸಲು ಎರಡೂ ದೇಶಗಳು ನಿರ್ಧರಿಸಿವೆ. ಜಗತ್ತಿನಲ್ಲಿಯೇ ಅತ್ಯಂತ ವಿನಾಶಕಾರಿಯಾದ ಹಾಗೂ ಎಂಥದೇ ಸನ್ನಿವೇಶದಲ್ಲಿಯೂ ಪ್ರಬಲ ದಾಳಿ ಸಾಮರ್ಥ್ಯ ಹೊಂದಿರುವ ‘ಎಫ್‌–35’ ಯುದ್ಧ ವಿಮಾನಗಳನ್ನು ಭಾರತಕ್ಕೆ ಪೂರೈಸಲಾಗುತ್ತದೆ’ ಎಂದು ಹೇಳಿದರು.

‘ಮುಯ್ಯಿಗೆ ಮುಯ್ಯಿ’ ತೀರಿಸುವ ಸುಂಕ ಸಮರದ ವಿಷಯವಾಗಿ ಪರಿಹಾರದ ಮಾರ್ಗೋಪಾಯ ಕಂಡುಕೊಳ್ಳಲು ಎರಡೂ ದೇಶಗಳ ಮಧ್ಯೆ ನಡೆದ ಉನ್ನತಮಟ್ಟದ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ. ‘ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೂ ಮುಂದಿನ ಏಳು ತಿಂಗಳಲ್ಲಿ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಮಾಹಿತಿ ನೀಡಿದರು. 

‘ಸುಂಕಗಳ ವಿಷಯವಾಗಿ ಇಬ್ಬರೂ ನಾಯಕರು ತಮ್ಮ ತಮ್ಮ ದೃಷ್ಟಿಕೋನ ಹೊಂದಿದ್ದಾರೆ. ಗಮನಾರ್ಹವಾದ ಸಂಗತಿ ಏನೆಂದರೆ, ಈ ವಿಷಯದ ಕುರಿತು ಚರ್ಚೆ ಮುಂದುವರಿಸಲು ಮಾರ್ಗವೊಂದು ನಮ್ಮ ಮುಂದಿದೆ’ ಎಂದು ಮಿಸ್ರಿ ವಿವರಿಸಿದರು.

‘2025ರಲ್ಲೇ ಎರಡೂ ದೇಶಗಳ ಮಧ್ಯೆ ವ್ಯಾಪಾರ ಒಪ್ಪಂದವೊಂದನ್ನು ಮಾಡಿಕೊಳ್ಳುವ ಪ್ರಯತ್ನಗಳು ಆರಂಭವಾಗಿವೆ. ಈ ಮಧ್ಯೆ, ಅಮೆರಿಕದ ಕೆಲವು ಆಯ್ದ ಸರಕುಗಳ ಮೇಲಿನ ಸುಂಕವನ್ನು ನವದೆಹಲಿಯು (ಭಾರತ) ಇತ್ತೀಚೆಗೆ ಕಡಿತ ಮಾಡಿ, ಅಮೆರಿಕದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯ ಅವಕಾಶ ಹಿಗ್ಗಿಸಿರುವುದನ್ನು ವಾಷಿಂಗ್ಟನ್‌ (ಅಮೆರಿಕ) ಸ್ವಾಗತಿಸುತ್ತದೆ’ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

  • ರಕ್ಷಣಾ ಕ್ಷೇತ್ರದಲ್ಲಿ ಪಾಲುದಾರಿಕೆ ವಿಸ್ತರಣೆ. ಭಾರತಕ್ಕೆ ಎಫ್‌–35 ಯುದ್ದ ವಿಮಾನಗಳು ಹಾಗೂ ಮಿಲಿಟರಿ ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಅಮೆರಿಕದ ಒಪ್ಪಿಗೆ

  • ಅಮೆರಿಕದಿಂದ ತೈಲ ಮತ್ತು ನೈಸರ್ಗಿಕ ಅನಿಲ ಖರೀದಿಯ ಪ್ರಮಾಣವನ್ನು 1,500 ಕೋಟಿ ಡಾಲರ್‌ನಿಂದ 2,500 ಕೋಟಿ ಡಾಲರ್‌ಗೆ ಹೆಚ್ಚಿಸಲಿರುವ ಭಾರತ * ಅಕ್ರಮ ವಲಸೆ ತಡೆಗಟ್ಟಲು ಎರಡೂ ದೇಶಗಳಿಂದ ಬಿಗಿ ಕಾನೂನು ಕ್ರಮ

  • ಪ್ರಧಾನಿ ಮೋದಿ ನನ್ನ ‘ಅಗ್ರಗಣ್ಯ ಸ್ನೇಹಿತ’ ಹಾಗೂ ‘ದೈತ್ಯ ಶಕ್ತಿಯ ವ್ಯಕ್ತಿ’ ಎಂದು ಬಣ್ಣಿಸಿದ ಟ್ರಂಪ್‌

ರಾಷ್ಟ್ರ ಹಿತಾಸಕ್ತಿ ಮುಖ್ಯ ಎನ್ನುವ ಡೊನಾಲ್ಡ್‌ ಟ್ರಂಪ್‌ ಗುಣ ನನಗೆ ಇಷ್ಟ. ಅವರಂತೆ ನಾನು ಕೂಡ ಭಾರತದ ಹಿತಾಸಕ್ತಿಗೇ ಅಗ್ರಸ್ಥಾನ ನೀಡುತ್ತೇನೆ  
ನರೇಂದ್ರ ಮೋದಿ ಪ್ರಧಾನಿ

‘ಉಕ್ರೇನ್‌–ರಷ್ಯಾ ಕದನ: ಭಾರತ ತಟಸ್ಥವಾಗಿಲ್ಲ’

‘ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧದ ವಿಚಾರದಲ್ಲಿ ಭಾರತ ತಟಸ್ಥ ನಿಲುವು ತಳೆದಿದೆ ಎಂದು ವಿಶ್ವವು ಭಾವಿಸಿದೆ. ಆದರೆ ಭಾರತ ಎಂದೂ ತಟಸ್ಥ ನಿಲುವು ತಳೆದಿಲ್ಲ. ವಾಸ್ತವವಾಗಿ ಭಾರತ ಎಂದಿಗೂ ಶಾಂತಿ ಪರವಾಗಿಯೇ ಇದೆ ಎಂಬುದನ್ನು ಪುನರುಚ್ಚರಿಸಲು ಬಯಸುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಉಕ್ರೇನ್‌–ರಷ್ಯಾ ನಡುವಿನ ಯುದ್ಧ ಕುರಿತ ಸುದ್ದಿಗಾರರ ಪ್ರಶ್ನೆಗೆ ಮೋದಿ ಹೀಗೆ ಉತ್ತರಿಸಿದರು. ‘ಈ ಯುದ್ಧ ಕೊನೆಗಾಣಿಸುವ ನಿಟ್ಟಿನಲ್ಲಿ ಡೊನಾಲ್ಡ್‌ ಟ್ರಂಪ್‌ ನಡೆಸುವ ಪ್ರಯತ್ನಗಳಿಗೆ ನಾನು ಬೆಂಬಲ ನೀಡುತ್ತೇನೆ’ ಎಂದರು.

‘ನಾನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ‘ಇದು ಯುದ್ಧದ ಕಾಲವಲ್ಲ’ ಎಂಬುದಾಗಿ ಹೇಳಿದ್ದೆ. ಯುದ್ಧಭೂಮಿಯಲ್ಲಿ ಪರಿಹಾರ ಸಿಗುವುದಿಲ್ಲ. ಎಲ್ಲ ಕಡೆಯವರು ಒಟ್ಟಿಗೆ ಕುಳಿತು ಮಾತುಕತೆ ನಡೆಸಿದಾಗ ಮಾತ್ರ ಪರಿಹಾರ ಸಿಗಲಿದೆ ಎಂದೂ ಹೇಳಿದ್ದೆ’ ಎಂದು ಮೋದಿ ತಿಳಿಸಿದರು.

ಟ್ರಂಪ್‌ ಹೇಳಿದ್ದು...

  • ಭಾರತ–ಮಧ್ಯಪ್ರಾಚ್ಯ–ಯುರೋಪ್‌ ಆರ್ಥಿಕ ಕಾರಿಡಾರ್ ಪ್ರಮುಖ ವ್ಯಾಪಾರ ಮಾರ್ಗವಾಗಿದ್ದು ಇದನ್ನು ಕಾರ್ಯಗತಗೊಳಿಸಲು ಭಾರತ ಮತ್ತು ಅಮೆರಿಕ ಒಟ್ಟಿಗೆ ಶ್ರಮಿಸಲಿವೆ *

  • ಪೂರ್ವ ಲಡಾಖ್‌ ಗಡಿ ವಿಚಾರದಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಅಪಾಯಕಾರಿ. ಸಂಘರ್ಷ ಬಗೆಹರಿಸಲು ನೆರವು ನೀಡಲು ಸಿದ್ಧ *

  • ಅಣು ಶಕ್ತಿಯನ್ನು ನಾಗರಿಕರ ಏಳಿಗೆಗೆ ಬಳಸಬೇಕು. ಈ ನಿಟ್ಟಿನಲ್ಲಿ ಸಹಕಾರ ಹೆಚ್ಚಳಕ್ಕೆ ಭಾರತ–ಅಮೆರಿಕ ಶ್ರಮಿಸಲಿವೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.