ಡೊನಾಲ್ಡ್ ಟ್ರಂಪ್
– ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಇರಾನ್‌ನ ಪರಮಾಣು ಮೂಲಸೌಕರ್ಯಗಳ ಮೇಲೆ ಯಶಸ್ವಿಯಾಗಿ ದಾಳಿ ಮಾಡಿದ್ದೇವೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗೆ ರಾಜತಾಂತ್ರಿಕ ಮಾರ್ಗವಾಗಿ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ.
ಎನ್‌ಬಿಸಿ ಸುದ್ದಿ ವಾಹಿನಿ ಕಾರ್ಯಕ್ರಮದಲ್ಲಿ ಮಾತನಾಡಿರುವ ವ್ಯಾನ್ಸ್, 'ಅವರ (ಇರಾನ್) ಪರಮಾಣು ಕಾರ್ಯಕ್ರಮವನ್ನು ಕೊನೆಗೊಳಿಸುವುದು ನಮ್ಮ ಬಯಕೆಯಾಗಿತ್ತು. ಅದು ಮುಂದುವರಿಯುವುದನ್ನು ಬಯಸುವುದಿಲ್ಲ' ಎಂದು ತಿಳಿಸಿದ್ದಾರೆ.
ಮುಂದುವರಿದು, 'ಇರಾನ್ ಜೊತೆಗೆ ದೀರ್ಘಕಾಲಿಕ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದೇವೆ' ಎಂದೂ ಹೇಳಿದ್ದಾರೆ.
ಇಸ್ರೇಲ್ – ಇರಾನ್ ನಡುವಣ ಸಂಘರ್ಷವು ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ಹೊತ್ತಿನಲ್ಲೇ ಅಮೆರಿಕವು ಇರಾನ್ ಮೇಲೆ ದಾಳಿ ಮಾಡಿರುವುದು ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಜಾಗತಿಕ ವಲಯದಲ್ಲಿ ಕಳವಳ ವ್ಯಕ್ತವಾಗಿದೆ.
ಅಮೆರಿಕದ ದಾಳಿಯು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂದು ರಷ್ಯಾ ಆತಂಕ ವ್ಯಕ್ತಪಡಿಸಿದೆ.
ಏತನ್ಮಧ್ಯೆ, ಪಶ್ಚಿಮ ಏಷ್ಯಾ ರಾಷ್ಟ್ರಗಳಿಂದ ತೈಲ ಸರಬರಾಜಿಗೆ ಪ್ರಮುಖ ಮಾರ್ಗವಾಗಿರುವ ಹೋರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್ ಸಂಸತ್ತು ಅನುಮೋದನೆ ನೀಡಿದೆ.
ಇರಾನ್, ಇರಾಕ್, ಒಮನ್, ಕುವೈತ್, ಕತಾರ್, ಯುಎಇಗೆ ಹೊಂದಿಕೊಂಡಿರುವ ಈ ಜಲಸಂಧಿಯ ಮೂಲಕ ವಿಶ್ವದ ಐದನೇ ಒಂದರಷ್ಟು ತೈಲ ಸರಬರಾಜು ಆಗುತ್ತದೆ. ಒಂದು ವೇಳೆ ಈ ಮಾರ್ಗ ಬಂದ್ ಆದರೆ, ಜಾಗತಿಕವಾಗಿ ತೈಲ ಬಿಕ್ಕಟ್ಟು ತಲೆದೋರುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.