ADVERTISEMENT

ಶ್ವೇತಭವನದ ಬಳಿ ಗುಂಡಿನ ದಾಳಿ: ರಾಷ್ಟ್ರೀಯ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿಗೆ ಗಾಯ

ಏಜೆನ್ಸೀಸ್
Published 27 ನವೆಂಬರ್ 2025, 3:26 IST
Last Updated 27 ನವೆಂಬರ್ 2025, 3:26 IST
ಶ್ವೇತಭವನ
ಶ್ವೇತಭವನ   

ವಾಷಿಂಗ್ಟನ್‌: ಶ್ವೇತಭವನದ ಸಮೀಪ ನಡೆದ ಗುಂಡಿನ ದಾಳಿಯಲ್ಲಿ ವೆಸ್ಟ್‌ ವರ್ಜೀನಿಯಾ ರಾಷ್ಟ್ರೀಯ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಭದ್ರತಾ ಸಿಬ್ಬಂದಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಮತ್ತು ವಾಷಿಂಗ್ಟನ್ ಮೇಯರ್ ಮುರಿಯಲ್ ಬೌಸರ್ ತಿಳಿಸಿದ್ದಾರೆ.

‘ದಾಳಿಯ ಉದ್ದೇಶವೇನು ಎಂಬುವುದು ಇನ್ನು ತಿಳಿದುಬಂದಿಲ್ಲ. ಯಾವುದೋ ಮೂಲೆಯಿಂದ ದಿಢೀರ್ ಎಂದು ಕಾಣಿಸಿಕೊಂಡ ಶಂಕಿತ, ತಕ್ಷಣವೇ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ’ ಎಂದು ಪೊಲೀಸ್ ಅಧಿಕಾರಿ ಜೆಫ್ರಿ ಕ್ಯಾರೊಲ್ ತಿಳಿಸಿದ್ದಾರೆ.

ADVERTISEMENT

‘ಗುಂಡಿನ ಸದ್ದು ಕೇಳುತ್ತಿದ್ದಂತೆ, ಆ ಪ್ರದೇಶದಲ್ಲಿದ್ದ ಇತರ ಸಿಬ್ಬಂದಿ ಗುಂಡು ಹಾರಿಸಿದ ವ್ಯಕ್ತಿಯನ್ನು ಹಿಡಿದಿದ್ದಾರೆ. ಅವರಲ್ಲಿ ಒಬ್ಬರು ಶಂಕಿತನ ಮೇಲೆ ಗುಂಡು ಹಾರಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಘಟನೆ ಬೆನ್ನಲ್ಲೇ ವಾಷಿಂಗ್ಟನ್‌ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವಂತೆ ಟ್ರಂಪ್‌ ಸೂಚಿಸಿದ್ದಾರೆ ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಾರೆ.

ಅಪರಾಧ ಪ್ರಕರಣ ತಗ್ಗಿಸುವ ಉದ್ದೇಶದಿಂದ ರಾಷ್ಟ್ರ ರಾಜಧಾನಿಗೆ ಪೊಲೀಸ್ ಬದಲು ರಾಷ್ಟ್ರೀಯ ಭದ್ರತಾ ಪಡೆಯನ್ನು ನಿಯೋಜನೆ ಮಾಡಿ ಟ್ರಂಪ್‌ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಇದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.