ADVERTISEMENT

ದಕ್ಷಿಣ ಆಫ್ರಿಕಾದಲ್ಲಿ ಓಮೈಕ್ರಾನ್ ಹೆಚ್ಚಳ; ತಂಡ ನಿಯೋಜಿಸಿದ ಡಬ್ಲ್ಯುಎಚ್‌ಒ

ಪಿಟಿಐ
Published 3 ಡಿಸೆಂಬರ್ 2021, 2:39 IST
Last Updated 3 ಡಿಸೆಂಬರ್ 2021, 2:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೋಹಾನ್ಸ್‌ಬರ್ಗ್: ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್‌ ಪತ್ತೆಯಾಗಿರುವ ದಕ್ಷಿಣ ಆಫ್ರಿಕಾದ ಗೌಟೆಂಗ್ ಪ್ರಾಂತ್ಯಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲುಎಚ್‌ಒ) ಅಧಿಕಾರಿಗಳ ತಂಡವನ್ನು ನಿಯೋಜಿಸಿದೆ. ಕಣ್ಗಾವಲು ಕ್ರಮಗಳನ್ನು ಹೆಚ್ಚಿಸಲು ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಪರ್ಕ ಪತ್ತೆಗಾಗಿ ಕೆಲಸ ಮಾಡಲು ಈ ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಬುಧವಾರ 8,500 ರಷ್ಟಿದ್ದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ದಿಢೀರನೇ ಏರಿಕೆ ಕಂಡಿದ್ದು, ಗುರುವಾರ 11,500 ಹೊಸ ಪ್ರಕರಣಗಳು ದಾಖಲಾಗಿವೆ. ನವೆಂಬರ್ ಮಧ್ಯದ ವೇಳೆಯಲ್ಲಿ ದೇಶದಲ್ಲಿ ದಿನಕ್ಕೆ 200 ರಿಂದ 300 ಪ್ರಕರಣಗಳಷ್ಟೇ ವರದಿಯಾಗುತ್ತಿದ್ದವು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಾರದಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಓಮೈಕ್ರಾನ್ ಪ್ರಕರಣ ವರದಿಯಾಗಿತ್ತು. ಇದೀಗ ವಿಶ್ವದ 24 ದೇಶಗಳಲ್ಲಿ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.

ADVERTISEMENT

'ಓಮೈಕ್ರಾನ್ ಪ್ರಕರಣಗಳ ಮೇಲೆ ಕಣ್ಗಾವಲು ಕ್ರಮಗಳನ್ನು ಕೈಗೊಳ್ಳಲು ಮತ್ತು ದೇಶದಲ್ಲಿನ ಸೋಂಕಿತರ ಸಂಪರ್ಕ ಪತ್ತೆಗಾಗಿ ಗೌಟೆಂಗ್ ಪ್ರಾಂತ್ಯಕ್ಕೆ ನಾವು ತಂಡವನ್ನು ನಿಯೋಜಿಸಿದ್ದೇವೆ. ತಂಡವು ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ಜೀನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆ ನಡೆಸುವಲ್ಲಿ ನಿರತವಾಗಿದೆ' ಎಂದು ಡಬ್ಲ್ಯುಎಚ್‌ಒ ಪ್ರಾದೇಶಿಕ ತುರ್ತು ನಿರ್ದೇಶಕ ಡಾ. ಸಲಾಮ್ ಗೂಯೆ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಆರ್ಥಿಕ ಕೇಂದ್ರವಾಗಿರುವ ಗೌಟೆಂಗ್ ಪ್ರಾಂತ್ಯದಲ್ಲಿ ವಾರದಿಂದೀಚೆಗೆ ಶೇ 80 ರಷ್ಟು ಪ್ರಕರಣಗಳು ವರದಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.