ADVERTISEMENT

ಮಾರಿಯಾ ಕೊರಿನಾ ಮಚಾದೊಗೆ ಒಲಿದ ‌ನೊಬೆಲ್‌ ಶಾಂತಿ ಪ್ರಶಸ್ತಿ: ಯಾರಿವರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2025, 12:31 IST
Last Updated 10 ಅಕ್ಟೋಬರ್ 2025, 12:31 IST
   

ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲುಲು ಮತ್ತು ಅಲ್ಲಿನ ಜನರ ಹಕ್ಕುಗಳಿಗಾಗಿ ದಣಿವರಿಯದೆ ಹೋರಾಡಿದ ಮಾರಿಯಾ ಕೊರಿನಾ ಮಚಾದೊ ಅವರನ್ನು 2025ರ ನೊಬೆಲ್‌ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನಾರ್ವೆ ಸಮಿತಿ ಸೋಮವಾರ ಪ್ರಕಟಿಸಿದೆ.

2025ರ ನೊಬೆಲ್ ಶಾಂತಿ ಪ್ರಶಸ್ತಿಯು ಶಾಂತಿ ಮತ್ತು ಬದ್ಧತೆಯ ಪ್ರತಿಪಾದಕಿ, ಹರಡುತ್ತಿರುವ ಕತ್ತಲೆಯ ನಡುವೆ ಪ್ರಜಾಪ್ರಭುತ್ವದ ಜ್ವಾಲೆಯನ್ನು ಪಸರಿಸುತ್ತಿರುವ ಮಹಿಳೆಗೆ ಸಲ್ಲುತ್ತದೆ ಎಂದು ಸಮಿತಿ ಹೇಳಿದೆ.

‘ವೆನೆಜುವೆಲಾದ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪ್ರಚುರ ಪಡಿಸಲು ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದೆಡೆಗೆ ಶಾಂತಿಯುತವಾಗಿ ದೇಶವನ್ನು ಕೊಂಡೊಯ್ಯಲು ನಡೆಸಿದ ಹೋರಾಟಗಳಿಗಾಗಿ ಮಾರಿಯಾ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗುತ್ತಿದೆ’ ಎಂದು ನಾರ್ವೆಯ ನೊಬೆಲ್ ಸಮಿತಿಯ ಅಧ್ಯಕ್ಷ ಜಾರ್ಗೆನ್‌ ವಾಟ್ನೆ ಫ್ರಿಡ್‌ನೆಸ್‌ ಅವರು ಹೇಳಿದ್ದಾರೆ.

ADVERTISEMENT

‘ನಿರಂಕುಶ ಆಡಳಿತದಿಂದಾಗಿ ಮಾನವೀಯತೆಯ ಅಧಃಪತನ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದಿರುಸುತ್ತಿರುವ ವೆನೆಜುವೆಲಾದಲ್ಲಿ ಸಮರ್ಥ ವಿರೋಧ ಪಕ್ಷವಾಗಿ ಮಾರಿಯಾ ಕಾರ್ಯನಿರ್ವಹಿಸಿದ್ದಾರೆ. ಜೀವ ಬೆದರಿಕೆಗಳು ಇದ್ದರೂ ದೇಶಕ್ಕಾಗಿ ದೃಢವಾಗಿ ನಿಂತಿದ್ದಾರೆ. ದೌರ್ಜನ್ಯದ ವಿರುದ್ಧ ನಾಗರಿಕರು ತೋರುವ ಧೈರ್ಯಕ್ಕೆ ಅವರು ಅದ್ಭುತ ಉದಾಹರಣೆಯಾಗಿದ್ದಾರೆ’ ಎಂದು ಫ್ರಿಡ್‌ನೆಸ್‌ ಹೇಳಿದ್ದಾರೆ.

ಪ್ರಜಾಪ್ರಭುತ್ವ ಪರ ಗುಂಪಿನ ಸಪೋಲಿಟಿಕ್ಸ್‌ಮೇಟ್‌ನ (Supoliticsmate) ಸಂಸ್ಥಾಪಕಿಯಾದ ಅವರು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಶಾಂತಿಯುತ ಪರಿವರ್ತನೆಗೆ ಶ್ರಮಿಸಿದ್ದಾರೆ. ಗುಂಡುಗಳ ಬದಲು ಮತಪತ್ರ (ballots over bullets) ಆಯ್ಕೆ ಎಂದು ಪ್ರತಿಪಾದಿಸಿದ್ದ ಅವರು, ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗಾಗಿ ದೀರ್ಘಕಾಲ ಪ್ರಚಾರ ಮಾಡಿದ್ದಾರೆ. ನಿರಂತರ ಬೆದರಿಕೆ ಹಾಗೂ ಅಪಾಯವನ್ನು ಮೆಟ್ಟಿನಿಂತ ಅವರು ವೆನೆಜುವೆಲಾದಲ್ಲಿ ಶಾಂತಿ ನೆಲೆಸುವಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ ಎಂದು ಸಮಿತಿ ಹೇಳಿದೆ.

ಮಚಾದೊ ಅವರಿಗೆ ಪ್ರಶಸ್ತಿ ಒಲಿದಿದ್ದು ಏಕೆ?

  • ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರು ತಾವು ನೊಬೆಲ್‌ ಪ್ರಶಸ್ತಿಯ ಅರ್ಹ ಆಯ್ಕೆ ಎಂದು ಪದೇ ಪದೇ ಹೇಳಿಕೊಂಡಿದ್ದರ ಹೊರತಾಗಿಯೂ. ನಾರ್ವೇಜಿಯನ್ ನೊಬೆಲ್ ಸಮಿತಿ ಮಚಾದೊ ಅವರನ್ನು ಆಯ್ಕೆ ಮಾಡಿದೆ. ಇದಕ್ಕೆ ಪ್ರಮುಖ ಕಾರಣಗಳು ಹೀಗಿವೆ..

  • ಮಚಾದೊ ಅವರನ್ನು ಒಂದು ಕಾಲದಲ್ಲಿ ತೀವ್ರವಾಗಿ ವಿಭಜನೆಯಾಗಿದ್ದ ವೆನಿಜುವೆಲಾದ ರಾಜಕೀಯ ವಿರೋಧ ಪಕ್ಷದಲ್ಲಿ ಪ್ರಮುಖ ವ್ಯಕ್ತಿ ಎಂದು ಸಮಿತಿ ಅಧ್ಯಕ್ಷ ಜೋರ್ಗೆನ್ ವಾಟ್ನೆ ಫ್ರೈಡ್ನೆಸ್ ಅವರು ಶ್ಲಾಘಿಸಿದ್ದಾರೆ.

  • ಮಾಚಾದೊ ಅವರ ನೇತೃತ್ವದಲ್ಲಿ ವಿರೋಧ ಪಕ್ಷದವರು ವೆನಿಜುವೆಲಾದಲ್ಲಿ ಸ್ವತಂತ್ರ ಚುನಾವಣೆಗಳು ಮತ್ತು ಪ್ರಾತಿನಿಧಿಕ ಸರ್ಕಾರದ ಬೇಡಿಕೆಯಲ್ಲಿ ಸಾಮಾನ್ಯ ನೆಲೆಯನ್ನು ಕಂಡುಕೊಂಡರು ಎಂದು ಸಮಿತಿ ಹೇಳಿದೆ.

  • ವೆನೆಜುವೆಲಾದ ಜನರಿಗಾಗಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ಉತ್ತೇಜಿಸುವ ಅವರ ದಣಿವರಿಯದ ಕೆಲಸ ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ಶಾಂತಿಯುತ ಪರಿವರ್ತನೆಗಾಗಿ ಅವರ ಹೋರಾಟವನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದೂ ಸಮಿತಿ ತಿಳಿಸಿದೆ.

ಮಚಾದೊ ಅವರ ಬಗ್ಗೆ

1967 ಅಕ್ಟೋಬರ್‌ 7ರಂದು ವೆನೆಜುವೆಲಾದ ಕರಾಕಸ್‌ನಲ್ಲಿ ಜನಿಸಿದ ಮಾರಿಯಾ ಅವರು ರಾಜಕಾರಣಿಯಾಗುವ ಮೊದಲು ಕೈಗಾರಿಕಾ ಎಂಜಿನಿಯರ್‌ ಆಗಿದ್ದರು.

2023ರಲ್ಲಿ ಪಕ್ಷದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದರು. ವೆನೆಜುವೆಲಾ ಅಧ್ಯಕ್ಷ ಸ್ಥಾನಕ್ಕೆ 2024ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಕಾರಣಾಂತರಗಳಿಂದಾಗಿ ಅವರು ಕಣದಿಂದ ಹಿಂದೆ ಸರಿಯಬೇಕಾಯಿತು. 

ಸರ್ವಾಧಿಕಾರಿತನ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿರುವ ಮಾರಿಯಾ ಅವರು ಹಲವು ಬಾರಿ ತಲೆಮರೆಸಿಕೊಳ್ಳಬೇಕಾದ ಪರಿಸ್ಥಿತಿಯು ನಿರ್ಮಾಣವಾಗಿತ್ತು.  ದೇಶದ ಅಧ್ಯಕ್ಷ ನಿಕೋಲಸ್ ಮಡುರೊ ವಿರುದ್ಧ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಕೆಲ ಕಾಲ ಅವರು ಸೆರೆವಾಸ ಅನುಭವಿಸಬೇಕಾಯಿತು.

ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾರಿ ಪೈಪೋಟಿ ಇತ್ತು. ಒಟ್ಟು 338 ಪ್ರಮುಖರು ಹಾಗೂ ಸಂಸ್ಥೆಗಳು ನೊಬೆಲ್‌ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮಗೆ ಈ ಪ್ರಶಸ್ತಿ ಸಿಗಬೇಕು ಎಂದು ಪದೇ ಪದೇ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದರೂ, ಸಮಿತಿಯು ಮಚಾದೊ ಅವರ ಹೋರಾಟವನ್ನು ಪ್ರಮುಖವಾಗಿ ಪರಿಗಣಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.