ADVERTISEMENT

ಕುಲಭೂಷಣ್ ಜಾಧವ್ ಬಂಧನಕ್ಕೆ ಸಹಕರಿಸಿದ್ದ ಪಾಕಿಸ್ತಾನದ ವಿದ್ವಾಂಸನ ಹತ್ಯೆ

ಪಿಟಿಐ
Published 9 ಮಾರ್ಚ್ 2025, 6:18 IST
Last Updated 9 ಮಾರ್ಚ್ 2025, 6:18 IST
   

ಪೆಶಾವರ: ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಇರಾನ್‌ನಿಂದ ಅಪಹರಿಸಲು ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐಗೆ ಸಹಾಯ ಮಾಡಿದ ಆರೋಪ ಹೊತ್ತಿದ್ದ ಪಾಕಿಸ್ತಾನಿ ವಿದ್ವಾಂಸ ಮುಫ್ತಿ ಶಾ ಮಿರ್ ಅವರನ್ನು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಶುಕ್ರವಾರ ರಾತ್ರಿ ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರಬರುತ್ತಿದ್ದಾಗ ಕೆಚ್‌ನ ಟರ್ಬತ್ ಪಟ್ಟಣದಲ್ಲಿ ಮಿರ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಡಾನ್ ಪತ್ರಿಕೆ ತಿಳಿಸಿದೆ.

‘ಮೋಟಾರ್ ಸೈಕಲ್‌ಗಳಲ್ಲಿ ಬಂದ ಶಸ್ತ್ರಸಜ್ಜಿತ ವ್ಯಕ್ತಿಗಳು ಮುಫ್ತಿ ಶಾ ಮಿರ್ ಮೇಲೆ ಗುಂಡು ಹಾರಿಸಿದರು. ಅವರು ಗಂಭೀರವಾಗಿ ಗಾಯಗೊಂಡರು’ಎಂದು ಪೊಲೀಸರು ಹೇಳಿದ್ದಾರೆ ಎಂದು ಪತ್ರಿಕೆ ಉಲ್ಲೇಖಿಸಿದೆ.

ADVERTISEMENT

ಅವರನ್ನು ತಕ್ಷಣ ಟರ್ಬತ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು ಎಂದು ವರದಿ ತಿಳಿಸಿದೆ.

ಮುಫ್ತಿ ಶಾ ಮಿರ್ ಅವರು ಜಮಿಯತ್ ಉಲೇಮಾಎ ಇಸ್ಲಾಂಎಫ್‌(ಜೆಯುಐ-ಎಫ್) ಪಕ್ಷಕ್ಕೆ ಹತ್ತಿರವಾಗಿದ್ದರು. ಈ ಹಿಂದೆ ಇದೇ ರೀತಿ ನಡೆದ ಹಲವು ದಾಳಿಗಳಲ್ಲಿ ಅವರು ಪಾರಾಗಿದ್ದರು. ಖುಜ್ದಾರ್‌ನಲ್ಲಿ ಜೆಯುಐ-ಎಫ್‌ನ ಇಬ್ಬರು ನಾಯಕರನ್ನು ಗುಂಡಿಕ್ಕಿ ಕೊಂದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.