ADVERTISEMENT

ಪ್ರಾಣಿಗಳೇ ಕೋವಿಡ್‌ನ ಮೂಲ ಸಾಧ್ಯತೆ

ವಿಶ್ವಸಂಸ್ಥೆ ಹಾಗೂ ಚೀನಾ ಕೈಗೊಂಡ ಜಂಟಿ ಅಧ್ಯಯನ ಪ್ರತಿಪಾದನೆ

ಏಜೆನ್ಸೀಸ್
Published 29 ಮಾರ್ಚ್ 2021, 11:54 IST
Last Updated 29 ಮಾರ್ಚ್ 2021, 11:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌: ಬಾವಲಿಯಿಂದ ಮತ್ತೊಂದು ಪ್ರಾಣಿಗೆ ಹಾಗೂ ಪ್ರಾಣಿ ಮೂಲಕ ಮಾನವನಿಗೆ ಕೋವಿಡ್‌–19 ಹರಡಿರುವ ಸಾಧ್ಯತೆಯೇ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಚೀನಾ ಕೈಗೊಂಡಿದ್ದ ಜಂಟಿ ಅಧ್ಯಯನ ಹೇಳಿದೆ.

ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್‌ಗೆ ಕಾರಣವಾದ ಕೊರೊನಾ ವೈರಸ್ ಪ್ರಯೋಗಾಲಯದಿಂದ ಸೋರಿಕೆ ಆಗಿರುವ ಸಾಧ್ಯತೆ ತೀರಾ ಕಡಿಮೆ ಎಂದೂ ಈ ಅಧ್ಯಯನ ಹೇಳಿದೆ.

‘ಅಸೋಸಿಯೇಟೆಡ್‌ ಪ್ರೆಸ್‌’ ಸುದ್ದಿ ಸಂಸ್ಥೆ ಈ ಅಧ್ಯಯನ ವರದಿಯ ಕರಡನ್ನುಆಧರಿಸಿ ವರದಿ ಮಾಡಿದೆ.

ADVERTISEMENT

ಈ ವೈರಸ್‌ ಹೇಗೆ ವಿಶ್ವದೆಲ್ಲೆಡೆ ಪ್ರಸರಣವಾಯಿತು ಎಂಬ ಬಗ್ಗೆ ಈ ವರದಿಯಲ್ಲಿ ಅಲ್ಪ ಮಾಹಿತಿ ಸಿಗಬಹುದಷ್ಟೆ. ಪ್ರಮುಖ ಪ್ರಶ್ನೆಗಳಿಗೆ ಅಧ್ಯಯನ ವರದಿಯಲ್ಲಿ ಉತ್ತರ ಸಿಗುವುದಿಲ್ಲ.

ಪ್ರಯೋಗಾಲಯದಿಂದಲೇ ಈ ವೈರಸ್‌ನ ಸೋರಿಕೆಯಾಗಿದೆ ಎಂಬ ವಾದವನ್ನು ಬದಿಗಿಟ್ಟು, ಉಳಿದ ಆಯಾಮದಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ ಇದೆ ಎಂಬುದನ್ನು ಅಧ್ಯಯನ ಕೈಗೊಂಡಿದ್ದ ತಂಡ ಪ್ರತಿಪಾದಿಸುತ್ತದೆ ಎಂದು ಸುದ್ದಿಸಂಸ್ಥೆ ಹೇಳಿದೆ.

ಕೋವಿಡ್‌–19ಗೆ ಕಾರಣವಾಗುವ ‘ಸಾರ್ಸ್‌–ಕೋವ್‌–2’ ವೈರಸ್‌ ಪ್ರಸರಣ ಕುರಿತಂತೆ ನಾಲ್ಕು ಸಾಧ್ಯತೆಗಳನ್ನು ಸಂಶೋಧಕರು ಮುಂದಿಟ್ಟಿದ್ಧಾರೆ.

ಮೊದಲನೇ ಸಾಧ್ಯತೆ ಎಂದರೆ, ಬಾವಲಿಗಳಿಂದ ಪ್ರಾಣಿಯೊಂದರ ಮೂಲಕ ಮನುಷ್ಯನಿಗೆ ವೈರಸ್‌ನ ಪ್ರಸರಣ. ಈ ರೀತಿಯ ಪ್ರಸರಣದ ಸಾಧ್ಯತೆಯೇ ಅಧಿಕ ಎಂಬುದು ಸಂಶೋಧಕರ ಪ್ರತಿಪಾದನೆಯಾಗಿದೆ.

ಬಾವಲಿಗಳಿಂದ ನೇರವಾಗಿ ಮನುಷ್ಯರಿಗೆ ಪ್ರಸರಣವಾಗಿರುವ ಸಾಧ್ಯತೆ ಇದೆ ಎಂಬುದು ಎರಡನೇ ವಾದ. ಶೀತಲೀಕರಿಸಿದ ಆಹಾರ ಉತ್ಪನ್ನಗಳ ಮೂಲಕ ಹರಡಿರಬಹುದು ಎಂಬುದು ಮೂರನೇ ವಾದ. ಈ ರೀತಿಯ ಪ್ರಸರಣದ ಸಾಧ್ಯತೆ ಬಹಳ ಕಡಿಮೆ ಎಂಬುದು ಸಂಶೋಧಕರ ಪ್ರತಿಪಾದನೆಯಾಗಿದೆ.

ಪ್ಯಾಂಗೋಲಿನ್‌ಗಳಲ್ಲಿ ಸಹ ಕೊರೊನಾ ವೈರಸ್‌ಗಳ ವಾಹಕಗಳಾಗಿವೆ. ಮಿಂಕ್‌ ಹಾಗೂ ಬೆಕ್ಕುಗಳು ಕೋವಿಡ್‌–19 ಸೋಂಕಿಗೆ ಹೆಚ್ಚು ಒಳಗಾಗುತ್ತವೆ. ಈ ಪ್ರಾಣಿಗಳು ಸಹ ಕೊರೊನಾ ವೈರಸ್ ವಾಹಕಗಳಂತೆ ಕಾರ್ಯ ಮಾಡುತ್ತವೆ ಎಂದು ಅಭಿಪ್ರಾಯಪಟ್ಟಿದ್ಧಾರೆ.

ಜಂಟಿ ಅಧ್ಯಯನ ತಂಡದ ನೇತೃತ್ವವನ್ನು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞ ಪೀಟರ್‌ ಬೆನ್‌ ಎಂಬರೇಕ್‌ ವಹಿಸಿದ್ದರು. ಈ ತಂಡ, ಮೊದಲ ಬಾರಿಗೆ ಕೋವಿಡ್‌–19 ವರದಿಯಾದ ವುಹಾನ್‌ ನಗರಕ್ಕೆ ಭೇಟಿ ನೀಡಿ, ಅಧ್ಯಯನ ಕೈಗೊಂಡಿದೆ.

ಜಂಟಿ ಅಧ್ಯಯನ ತಂಡ ಸಿದ್ಧಪಡಿಸಿರುವ ಈ ವರದಿಯೇ ಅಂತಿಮ ಎಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ ಎಂದು ಸುದ್ದಿಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.