ADVERTISEMENT

ಲಕ್ಷಣ ಇಲ್ಲದಿದ್ದರೂ ಸೋಂಕಿತರ ಸಂಪರ್ಕಕ್ಕೆ ಬಂದವರ ಪರೀಕ್ಷೆ ಅಗತ್ಯ: ಡಬ್ಲ್ಯುಎಚ್‌ಒ

ಏಜೆನ್ಸೀಸ್
Published 28 ಆಗಸ್ಟ್ 2020, 3:07 IST
Last Updated 28 ಆಗಸ್ಟ್ 2020, 3:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ಕೊರೊನಾ ವೈರಸ್ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಅವರಿಗೆ ರೋಗ ಲಕ್ಷಣ ಇದ್ದರೂ ಇಲ್ಲದಿದ್ದರೂ ಪರೀಕ್ಷೆಗೆ ಒಳಪಡಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ರೋಗ ಲಕ್ಷಣ ಇಲ್ಲದಿದ್ದರೆ ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ (ಸಿಡಿಸಿ) ಕೇಂದ್ರದ ವೆಬ್‌ಸೈಟ್‌ನಲ್ಲಿ ಕಳೆದ ವಾರ ಉಲ್ಲೇಖಿಸಲಾಗಿತ್ತು.

ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಬ್ಲ್ಯುಎಚ್‌ಒದ ಕೊರೊನಾ ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮಾರಿಯಾ ವ್ಯಾನ್ ಕೆರ್ಖೋವ್, ರೋಗಲಕ್ಷಣಗಳ ಬೆಳವಣಿಗೆಯನ್ನು ಲೆಕ್ಕಿಸದೆ ಕೋವಿಡ್–19 ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಅಮೆರಿಕದ ಹೆಸರು ಉಲ್ಲೇಖಿಸದೆಯೇ ಹೇಳಿದ್ದಾರೆ.

ADVERTISEMENT

‘ರೋಗ ಲಕ್ಷಣ ಇರುವವರೂ ಹಾಗೂ ಇಲ್ಲದವರೂ ಸೊಂಕು ಹರಡುತ್ತಾರೆ ಎಂಬುದು ನಮಗೆ ತಿಳಿದಿದೆ. ಸೋಂಕು ಹರಡುವಿಕೆಯ ತೀವ್ರತೆಯ ವಿವಿಧ ಹಂತಗಳಲ್ಲಿ ದೇಶಗಳಿಗೆ ಡಬ್ಲ್ಯುಎಚ್‌ಒ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ತಮ್ಮ ಸಾಮರ್ಥ್ಯ, ಸೋಂಕು ಹರಡುವಿಕೆಯ ತೀವ್ರತೆಗೆ ಅನುಗುಣವಾಗಿ ಪರೀಕ್ಷೆ ನಡೆಸುವುದನ್ನು ಆಯಾ ದೇಶಗಳ ವಿವೇಚನೆಗೆ ಬಿಟ್ಟುಬಿಡಲಾಗಿತ್ತು’ ಎಂದೂ ಅವರು ಹೇಳಿದ್ದಾರೆ.

ವಿಶ್ವದಾದ್ಯಂತ ಈವರೆಗೆ 2.4 ಕೋಟಿ ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, 8,26,000 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.