ADVERTISEMENT

ಡೆಲ್ಟಾ ರೂಪಾಂತರ ತಳಿ ಹೆಚ್ಚು ವೇಗವಾಗಿ ಹರಡುತ್ತದೆ: ವಿಶ್ವ ಆರೋಗ್ಯ ಸಂಸ್ಥೆ

ಏಜೆನ್ಸೀಸ್
Published 26 ಜೂನ್ 2021, 3:20 IST
Last Updated 26 ಜೂನ್ 2021, 3:20 IST
ಸಾಂದರ್ಭಿಕ ಚಿತ್ರ (ಐಸ್ಟಾಕ್)
ಸಾಂದರ್ಭಿಕ ಚಿತ್ರ (ಐಸ್ಟಾಕ್)   

ಲಂಡನ್: ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರವು ಈವರೆಗೆ ಪತ್ತೆಯಾಗಿರುವ ರೂಪಾಂತರಿತ ವೈರಸ್‌ಗಳಲ್ಲೇ ಅತಿ ಹೆಚ್ಚು ಹರಡುವಂಥದ್ದಾಗಿದ್ದು, 85 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಹೇಳಿದ್ದಾರೆ.

ಬಡ ದೇಶಗಳಲ್ಲಿ ಲಸಿಕೆಗಳ ಕೊರತೆಯು ಡೆಲ್ಟಾ ರೂಪಾಂತರದ ಪ್ರಸರಣ ಉಲ್ಬಣಗೊಳ್ಳುತ್ತಿರುವುದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

ಲಸಿಕೆಗಳ ಹಂಚಿಕೆಗಾಗಿ ಸ್ಥಾಪಿಸಲಾದ ಸಲಹಾ ಗುಂಪಿನ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಮಾಹಿತಿ ನೀಡಿದ್ದಾರೆ.

‘ಹಂಚಿಕೆ ಮಾಡಲು ಲಸಿಕೆ ಇಲ್ಲದಿರುವುದು ಗುಂಪಿನ ಸದಸ್ಯರನ್ನು ಹತಾಶರನ್ನಾಗಿಸಿದೆ’ ಎಂದಿರುವ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್, ಲಸಿಕೆಯೇ ಇಲ್ಲದಿದ್ದರೆ ಏನನ್ನು ಹಂಚಿಕೆ ಮಾಡುವುದು ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಶ್ರೀಮಂತ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ತಕ್ಷಣ ಲಸಿಕೆ ನೀಡಲು ನಿರಾಕರಿಸುತ್ತಿರುವುದನ್ನು ಟೀಕಿಸಿದ್ದಾರೆ.

ದಶಕಗಳ ಹಿಂದೆ ಏಡ್ಸ್‌ ಮತ್ತು 2009ರಲ್ಲಿ ಹಂದಿ ಜ್ವರ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಡಿದ ತಪ್ಪುಗಳನ್ನೇ ಜಾಗತಿಕ ಸಮುದಾಯವು ಮತ್ತೆ ಮಾಡುತ್ತಿದ್ದು, ಬಿಕ್ಕಟ್ಟನ್ನು ಎದುರಿಸುವಲ್ಲಿ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.

ಲಸಿಕೆ ಹಂಚಿಕೆಗೆ ವಿಶ್ವಸಂಸ್ಥೆ ಬೆಂಬಲದಲ್ಲಿ ಸ್ಥಾಪನೆಯಾಗಿರುವ ‘ಕೊವ್ಯಾಕ್ಸ್‌’ಗೆ ಇನ್ನೂ ಅನೇಕ ಡೋಸ್ ಲಸಿಕೆಗಳು ದೊರೆತಿಲ್ಲ. ಈ ವರ್ಷದ ಅಂತ್ಯದ ವರೆಗೂ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ದೊರೆಯುವ ಭರವಸೆಯಿಲ್ಲ ಎನ್ನಲಾಗಿದೆ.

ಅಮೆರಿಕ, ಬ್ರಿಟನ್‌ ಸೇರಿದಂತೆ ಹಲವು ರಾಷ್ಟ್ರಗಳು ನೀಡಿರುವ ಭರವಸೆಯಂತೆ ಲಭ್ಯವಾಗಬೇಕಿರುವ ಲಸಿಕೆಗಳು ಸದ್ಯಕ್ಕೆ ದೊರೆಯುವ ಲಕ್ಷಣಗಳಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.