ADVERTISEMENT

ಬ್ರಿಟನ್‌ಗೆ ಒಳಿತಾದರಷ್ಟೇ ಭಾರತ ಜೊತೆಗಿನ ಎಫ್‌ಟಿಎಗೆ ಸಮ್ಮತಿ: ರಿಷಿ ಸುನಕ್‌

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 13:40 IST
Last Updated 6 ಸೆಪ್ಟೆಂಬರ್ 2023, 13:40 IST
ರಿಷಿ ಸುನಕ್
ರಿಷಿ ಸುನಕ್   

ಲಂಡನ್‌: ‘ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕುರಿತಂತೆ ಭಾರತದ ಜೊತೆಗೆ ಮಾತುಕತೆ ‘ಪ್ರಗತಿಯಲ್ಲಿದೆ’. ಬ್ರಿಟನ್‌ಗೆ ಒಳಿತಾಗುವ ಅಂಶಗಳಿದ್ದರಷ್ಟೇ ಸಮ್ಮತಿ ನೀಡಲಾಗುವುದು’ ಎಂದು ಪ್ರಧಾನಿ ರಿಷಿ ಸುನಕ್‌ ತಮ್ಮ ಸಚಿವರಿಗೆ ಭರವಸೆ ನೀಡಿದ್ದಾರೆ.

ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಭೇಟಿ ನೀಡಲಿರುವ ಸುನಕ್‌, ಪೂರ್ವಭಾವಿಯಾಗಿ ಎಫ್‌ಟಿಎ ಕುರಿತ ಚರ್ಚೆಯ ಪ್ರಗತಿಯ ವಿವರಗಳನ್ನು ಸಂಪುಟ ಸಹೋದ್ಯೋಗಿಗಳಿಗೆ ನೀಡಿದರು. ಒಟ್ಟು 12 ಸುತ್ತಿನ ಮಾತುಕತೆ ನಡೆದಿದೆ ಎಂದು ತಿಳಿಸಿದರು.

ಆರ್ಥಿಕತೆ ಹಾಗೂ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳು ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ’ಭಾರತವು ಬಿಡಲಾಗದಂತಹ ಪಾಲುದಾರ’ ಎಂದು ಬಣ್ಣಿಸಿದ ಬ್ರಿಟನ್‌ ಪ್ರಧಾನಿ, ಉಭಯ ದೇಶಗಳ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಬೇಕಾಗಿದೆ ಎಂದರು.

ADVERTISEMENT

ಬ್ರಿಟನ್‌ನ ಉದ್ಯಮ ಮತ್ತು ವಾಣಿಜ್ಯ ಕಾರ್ಯದರ್ಶಿ ಕೆಮಿ ಬಡೆನೊಚ್ ಅವರು ಎಫ್‌ಟಿಎ ಕುರಿತ ಚರ್ಚೆಯ ಪ್ರಗತಿ ವಿವರಿಸಿದರು. ಇವರು ಕಳೆದ ತಿಂಗಳು ಭಾರತಕ್ಕೆ ಭೇಟಿ ನೀಡಿದ್ದು ವಾಣಿಜ್ಯ ಸಚಿವ ಪೀಯೂಶ್‌ ಗೋಯಲ್‌ ಜೊತೆಗೆ ಚರ್ಚಿಸಿದ್ದರು.

ಭಾರತ ಈಗಾಗಲೇ ಬ್ರಿಟನ್‌ ಅತಿದೊಡ್ಡ ವ್ಯಾಪಾರ ವಹಿವಾಟು ಪಾಲುದಾರ ರಾಷ್ಟ್ರವಾಗಿದೆ. ಉಭಯ ದೇಶಗಳ ನಡುವೆ ವಾರ್ಷಿಕ ವಹಿವಾಟು ಮೊತ್ತ ₹ 3.76 ಲಕ್ಷ ಕೋಟಿ (ಜಿಬಿಪಿ 36 ಬಿಲಿಯನ್) ಆಗಿದೆ ಎಂದು ತಿಳಿಸಿದರು.

ರಿಷಿ ಸುನಕ್ ಅವರು ಭಾರತ ಭೇಟಿ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ರಿಷಿ ಸುನಕ್ ಅವರ ಪ್ರವಾಸದ ವಿವರಗಳನ್ನು ಡೌನಿಂಗ್‌ ಸ್ಟ್ರೀಟ್ ಇನ್ನಷ್ಟೇ ಪ್ರಕಟಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.