ADVERTISEMENT

ಪಾಕಿಸ್ತಾನದಲ್ಲಿ ಮತ್ತೆ ಲಾಕ್‌ಡೌನ್ ಹೇರಲು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು

ಏಜೆನ್ಸೀಸ್
Published 11 ಜೂನ್ 2020, 5:44 IST
Last Updated 11 ಜೂನ್ 2020, 5:44 IST
ಸಾಂದರ್ಭಿಕ ಚಿತ್ರ- ಲಾಕ್‌ಡೌನ್‌ ಸಂದರ್ಭದಲ್ಲಿ ಪಾಕಿಸ್ತಾನದ ನಗರವೊಂದರ ದೃಶ್ಯ
ಸಾಂದರ್ಭಿಕ ಚಿತ್ರ- ಲಾಕ್‌ಡೌನ್‌ ಸಂದರ್ಭದಲ್ಲಿ ಪಾಕಿಸ್ತಾನದ ನಗರವೊಂದರ ದೃಶ್ಯ   

ಜಿನೀವಾ(ವಿಶ್ವ ಆರೋಗ್ಯ ಸಂಸ್ಥೆ): ಕಳೆದ ತಿಂಗಳು ಲಾಕ್‌ಡೌನ್‌ ಅನ್ನು ತೆರವುಗೊಳಿಸಿದಾಗಿನಿಂದ ಪಾಕಿಸ್ತಾನದಲ್ಲಿ ಕೋವಿಡ್‌-19 ಪ್ರಕರಣ ಸಂಖ್ಯೆಯಲ್ಲಿತೀವ್ರ ಏರಿಕೆ ಕಂಡುಬಂದಿದೆ. ಆ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಅಧಿಕಾರಿಗಳು ಕಟ್ಟುನಿಟ್ಟಿನ ಲಾಕ್‌ಡೌನ್ ಮತ್ತೆ ಹೇರಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ.

ಲಾಕ್‌ಡೌನ್‌ ಅನ್ನು ತೆರವುಗೊಳಿಸಲು ಸಂಸ್ಥೆಯ ಆರು ತಾಂತ್ರಿಕ ಮಾನದಂಡಗಳಲ್ಲಿ ಯಾವುದನ್ನೂ ಸಹ ಪಾಕಿಸ್ತಾನ ಪೂರೈಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪಾಕಿಸ್ತಾನ ಮುಖ್ಯಸ್ಥ ಪಲಿತಾ ಮಹಿಪಾಲ ಅವರು ಭಾನುವಾರ ಸರ್ಕಾರಕ್ಕೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರವು ವಿವಿಧ ಪ್ರಾಂತ್ಯಗಳಲ್ಲಿ ಈ ಮೊದಲು ಕಟ್ಟುನಿಟ್ಟಿನ ಲಾಕ್‌ಡೌನ್ ವಿಧಿಸಿತ್ತು. ಆದರೆ, ಈದ್ ಹಬ್ಬದ ಮುನ್ನ, ಮೇ ತಿಂಗಳ ಕೊನೆಯಲ್ಲಿ ಹೆಚ್ಚಿನ ನಿರ್ಬಂಧಗಳನ್ನು ತೆಗೆದುಹಾಕಿತು.

ADVERTISEMENT

ಪಾಕಿಸ್ತಾನದಲ್ಲಿ ನಿರ್ಬಂಧ ತೆರವುಗೊಳಿಸಿದ ನಂತರ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಆಗಿದ್ದು, ದಿನವೊಂದಕ್ಕೆ 5 ರಿಂದ 6 ಸಾವಿರ ಪ್ರಕರಣಗಳು ದೃಢಪಟ್ಟಿವೆ.ಲಾಕ್‌ಡೌನ್‌ ವಿಧಿಸಿದ್ದ ಸಮಯದಲ್ಲಿ ದೇಶದಾದ್ಯಂತ ದಿನವೊಂದಕ್ಕೆ ಸಾವಿರದಿಂದ ಎರಡು ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದವು.

ಪಾಕಿಸ್ತಾನದಲ್ಲಿ ಪ್ರಸ್ತುತ 1,13,702 ಕೋವಿಡ್-19 ಪ್ರಕರಣಗಳು ಬೆಳಕಿಗೆ ಬಂದಿದ್ದು, ಈವರೆಗೆ 2,312 ಜನರು ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಸರ್ಕಾರ ವರದಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.