ADVERTISEMENT

Covid-19 World Update: 1.23 ಕೋಟಿ ಸೋಂಕಿತರು, ಲಸಿಕೆಯ ಭರವಸೆ, ಹೊಸ ತಳಿಯ ಆತಂಕ

ಏಜೆನ್ಸೀಸ್
Published 19 ಆಗಸ್ಟ್ 2020, 4:04 IST
Last Updated 19 ಆಗಸ್ಟ್ 2020, 4:04 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಾಷಿಂಗ್ಟನ್: ಕೊರೊನಾ ವೈರಸ್‌ ಲಸಿಕೆಯ ಭರವಸೆಯ ಬೆನ್ನಲೇ ಜಗತ್ತಿನಾದ್ಯಂತ ಸುಮಾರು 1.50 ಕೋಟಿ ಸೋಂಕಿತರು ಗುಣಮುಖರಾಗಿದ್ದು ವೈರಸ್‌ನ ಹೊಸ ತಳಿಯ ಆತಂಕ ಎದುರಾಗಿದೆ.

ಭಾರತದಲ್ಲಿ ಮೂರು ಲಸಿಕೆ, ಚೀನಾದಲ್ಲಿ ಎರಡು, ಅಮೆರಿಕದಲ್ಲಿ ಎರಡು, ಜರ್ಮನಿಯಲ್ಲಿ ಒಂದು ಲಸಿಕೆಯ ಮಾನವನ ಮೇಲಿನ ಪ್ರಯೋಗಗಳು ನಡೆಯುತ್ತಿದ್ದು ಸೋಂಕಿತರಲ್ಲಿ ಹೊಸ ಭರವಸೆ ಮೂಡಿರುವುದರಿಂದ ಗುಣಮುಖ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಈಗಾಗಲೇ ರಷ್ಯಾ ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕರಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದೆ. ಚೀನಾ ಕೂಡ ಡಿಸೆಂಬರ್‌ನಲ್ಲಿ ಲಸಿಕೆ ನೀಡುವ ಘೋಷಣೆ ಮಾಡಿದೆ. ಅಮೆರಿಕ 2021ರ ಜನವರಿಗೆ ಲಸಿಕೆ ನೀಡುವ ಸುಳಿವು ಕೊಟ್ಟಿದೆ. ಭಾರತದಲ್ಲಿ ಎರಡು ಅಥವಾ ಮೂರು ತಿಂಗಳಲ್ಲಿ ಲಸಿಕೆ ಲಭ್ಯವಾಗಲಿದೆ ಎಂಬ ವರದಿಗಳ ಬೆನ್ನಲ್ಲೆ ಜಾಗತಿಕವಾಗಿ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ADVERTISEMENT

ಆಸ್ಟ್ರೇಲಿಯಾ ಸರ್ಕಾರ ಬ್ರಿಟನ್‌ ಸಹಭಾಗಿತ್ವದಲ್ಲಿ ಸ್ಥಳೀಯವಾಗಿ ಲಸಿಕೆ ತಯಾರಿಸುವ ಸಿದ್ಧತೆ ಮಾಡಿಕೊಂಡಿದ್ದು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದಾಗಿ ತಿಳಿಸಿದೆ.

ಮಲೇಷಿಯಾದಲ್ಲಿ ಕೊರೊನಾ ವೈರಸ್‌ನ ಹೊಸ ತಳಿ ಪತ್ತೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದು ಈಗಿನ ವೈರಸ್‌ಗಿಂತ ತುಂಬಾ ಅಪಾಯಕಾರಿಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ನಡುವೆ ಜಗತ್ತಿನಲ್ಲಿ ಹರ್ಡ್‌ ಇಮ್ಯೂನಿಟಿ ಸೃಷ್ಟಿಯಾದಾಗ ಮಾತ್ರ ಸೋಂಕು ಹತೋಟಿಗೆ ಬರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ವರ್ಲ್ಡೊಮೀಟರ್ ಅಂಕಿ ಅಂಶ ಪ್ರಕಾರ ಆಗಸ್ಟ್‌ 19ರ ಬೆಳಗ್ಗೆ 9 ಗಂಟೆ ವೇಳೆಗೆ ಜಾಗತಿಕವಾಗಿ 2,23,06,538 ಪ್ರಕರಣಗಳು ದೃಢಪಟ್ಟಿದ್ದು 7,84,353 ಸೋಂಕಿತರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೂ 1, 50,47,779 ಜನರು ಗುಣಮುಖರಾಗಿದ್ದಾರೆ. ಒಟ್ಟು 64,74,406 ಪ್ರಕರಣಗಳು ಸಕ್ರಿಯವಾಗಿವೆ.

ಅಮೆರಿಕ 56,55,974 ಸೋಂಕಿತರೊಂದಿಗೆ ಕೋವಿಡ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಸದ್ಯ ಅಮೆರಿಕದಲ್ಲಿ 17,5,074 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. 30,11,098 ಜನರು ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿರುವ ಬ್ರೆಜಿಲ್‌‌ನಲ್ಲಿ 34,11,872 ಪ್ರಕರಣಗಳು ಪತ್ತೆಯಾಗಿವೆ. 25,54,179 ಸೋಂಕಿತರು ಗುಣಮುಖರಾಗಿದ್ದು, 1,10,019 ಜನರು ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿತರ ಪೈಕಿ ಮೂರನೇ ಸ್ಥಾನಕ್ಕೇರಿರುವ ಭಾರತದಲ್ಲಿ 27,66,626 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, 20,36,703 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ 53,014 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ರಷ್ಯಾದಲ್ಲಿ 9,32,493 , ದಕ್ಷಿಣ ಆಫ್ರಿಕಾದಲ್ಲಿ 5,92,144, ಪೆರುವಿನಲ್ಲಿ 5,49,321, ಚಿಲಿಯಲ್ಲಿ 3,88,855 ಇರಾನ್‌ನಲ್ಲಿ 3,47,835 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.