ADVERTISEMENT

ದುಬೈನಲ್ಲಿ ವಿಶ್ವದ ಬೃಹತ್ ‘ವೀಕ್ಷಣಾ ಚಕ್ರ‘: ಲಂಡನ್‌ ಐಗಿಂತ ಎರಡು ಪಟ್ಟು ಎತ್ತರ

250 ಮೀಟರ್ ಎತ್ತರದಿಂದ ವೀಕ್ಷಿಸುವ ಅವಕಾಶ, ಅ.21ರಂದು ಪ್ರವಾಸಿಗರಿಗೆ ಮುಕ್ತ

ಪಿಟಿಐ
Published 25 ಆಗಸ್ಟ್ 2021, 7:49 IST
Last Updated 25 ಆಗಸ್ಟ್ 2021, 7:49 IST
ದುಬೈನ ಬ್ಲ್ಯೂವಾಟರ್ಸ್‌ ದ್ವೀಪದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದಲ್ಲೇ ದೊಡ್ಡದಾದ ಹಾಗೂ ಅತಿ ಎತ್ತರದ ‘ವೀಕ್ಷಣಾ ಚಕ್ರ‘ದ ವಿಹಂಗಮ ನೋಟ  –ಎಎಫ್‌ಪಿ ಚಿತ್ರ
ದುಬೈನ ಬ್ಲ್ಯೂವಾಟರ್ಸ್‌ ದ್ವೀಪದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದಲ್ಲೇ ದೊಡ್ಡದಾದ ಹಾಗೂ ಅತಿ ಎತ್ತರದ ‘ವೀಕ್ಷಣಾ ಚಕ್ರ‘ದ ವಿಹಂಗಮ ನೋಟ  –ಎಎಫ್‌ಪಿ ಚಿತ್ರ   

ದುಬೈ: ದುಬೈನಲ್ಲಿ ನಿರ್ಮಾಣವಾಗುತ್ತಿರುವ 'ಐನ್ ದುಬೈ' ಹೆಸರಿನ ವಿಶ್ವದ ಅತಿ ದೊಡ್ಡದಾದ ಮತ್ತು ಅತಿ ಎತ್ತರದ ‘ವೀಕ್ಷಣಾ ಚಕ್ರ‘ ಅಕ್ಟೋಬರ್ 21 ರಂದು ಪ್ರವಾಸಿಗರ ಸೇವೆಗೆ ಲಭ್ಯವಾಗಲಿದೆ.

ಈಗಾಗಲೇ ದುಬೈಯಲ್ಲಿನಲ್ಲಿರುವ ಹಲವು ಆಕರ್ಷಣೆಗಳ ಪಟ್ಟಿಗೆ ದುಬೈ ಕಣ್ಣು ಎಂಬ ಅರ್ಥವಿರುವ ಈ ಐನ್‌ ದುಬೈ ವೀಕ್ಷಣಾ ಚಕ್ರ ಹೊಸ ಸೇರ್ಪಡೆಯಾಗಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

‘ಲಂಡನ್ ಐ‘ ಗಿಂತ ಸುಮಾರು ಎರಡು ಪಟ್ಟು ಎತ್ತರವಿರುವ ಈ ವೀಕ್ಷಣಾ ಚಕ್ರ, ಪ್ರವಾಸಿಗರನ್ನು 250 ಮೀಟರ್ ಎತ್ತರಕ್ಕೆ ಕರೆದೊಯ್ಯಲಿದ್ದು, ದುಬೈ ನಗರದ ಭವ್ಯವಾದ ನೋಟವನ್ನು ಪರಿಚಯಿಸಲಿದೆ. ಪ್ರವಾಸಿಗರು ಅಂದದ ಕ್ಯಾಬಿನ್‌ನಲ್ಲಿ ಕುಳಿತು ನಿಧಾನವಾಗಿ ಸಾಗುತ್ತಾ, ಬಾನೆತ್ತರಕ್ಕೆ ತಲುಪಿ ಅಲ್ಲಿಂದದುಬೈ ನಗರದ ಗಗನಚುಂಬಿ ಕಟ್ಟಡಗಳು, ಸಮುದ್ರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ADVERTISEMENT

ಬ್ಲೂವಾಟರ್ಸ್ ದ್ವೀಪದಲ್ಲಿ ನಿರ್ಮಾಣವಾಗುತ್ತಿರುವ ಈ ಬೃಹತ್‌ ವೀಕ್ಷಣಾ ಚಕ್ರ, ದುಬೈನ ಪ್ರವಾಸೋದ್ಯಮದ ಹೆಗ್ಗುರುತಾಗಲಿದೆ. ಇದರಲ್ಲಿ ಕುಳಿತು ವಿಹರಿಸುತ್ತಿದ್ದರೆ, ಆಕಾಶದಲ್ಲಿ ಹಾರಾಡಿದ ಅನುಭವವಾಗಲಿದೆ.

ನೀಲಾಕಾಶದ ಹಿನ್ನೆಲೆಯಲ್ಲಿ ವೀಕ್ಷಣಾ ಚಕ್ರದಲ್ಲಿ ‌ಕುಳಿತು ಭೋಜನ ಕೂಟ ನಡೆಸುವುದು ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗುವಂತಹಪ್ಯಾಕೇಜ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಮೂಲಕ ಪ್ರವಾಸಿಗರಿಗೆ 250 ಮೀಟರ್ ಎತ್ತರದಲ್ಲಿ ಕುಳಿತು, ನೀಲಾಕಾಶದ ಹಿನ್ನೆಲೆಯಲ್ಲಿ ಭೋಜನ ಸವಿಯುವಂತಹ ಅವಕಾಶ ಕಲ್ಪಿಸಲಾಗಿದೆ.ಜನ್ಮದಿನ, ನಿಶ್ಚಿತಾರ್ಥ, ಮದುವೆ ಮತ್ತು ವ್ಯಾಪಾರ–ವ್ಯವಹಾರಗಳ ಸಂಬಂಧಿತ ವಿಶೇಷ ಕಾರ್ಯಕ್ರಮಗಳಿಗಾಗಿ ‘ವಿಶೇಷ ಪ್ಯಾಕೇಜ್‌‘ಗಳು ಲಭ್ಯವಿರುತ್ತವೆ.

ಆರಂಭದಲ್ಲಿ ಅಂದಾಜು 38 ನಿಮಿಷಗಳಲ್ಲಿ ಒಂದು ಸುತ್ತು ಸುತ್ತಿಸಲಾಗುತ್ತದೆ. ನಂತರ ಅದನ್ನು 76 ನಿಮಿಷಗಳ ಎರಡು ಸುತ್ತುಗಳವರೆಗೆ ವಿಸ್ತರಿಸಲಾಗುತ್ತದೆ. ಈ ಚಕ್ರದಲ್ಲಿ ಖಾಸಗಿ ಕ್ಯಾಬಿನ್‌ಗಳಿದ್ದು, ಪ್ರವಾಸಿಗರು ಅವುಗಳನ್ನು ಬಳಸಿಕೊಳ್ಳಬಹುದು. ವಿಶೇಷ ಸಾಂಸ್ಕೃತಿ ಕಾರ್ಯಕ್ರಮಗಳು ಹಾಗೂ ಆಚರಣೆಗಳ ಸಂದರ್ಭದಲ್ಲಿ ಗಣ್ಯ ವ್ಯಕ್ತಿಗಳಿಗೆ ವಿಶೇಷ ಆತಿಥ್ಯ ನೀಡುವುದಕ್ಕೆ ಅನುಕೂಲವಾಗುವಂತೆ ಖಾಸಗಿ ಕ್ಯಾಬಿನ್‌ಗಳನ್ನು ಕಸ್ಟಮೈಸ್ ಮಾಡಿಕೊಡುವ ವ್ಯವಸ್ಥೆಯೂ ಇದೆ.

‘ಯುಎಇ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ಜನರಿಗೆ ನೀಡುತ್ತಿರುವ ಉತ್ತಮ ಕೊಡುಗೆ ಇದು ಎಂದು ನಾವು ಭಾವಿಸಿದ್ದೇನೆ‌’ ಎಂದು ದುಬೈ ಹೋಲ್ಡಿಂಗ್ ಎಂಟರ್‌ಟೈನ್‌ಮೆಂಟ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೊಹಮ್ಮದ್ ಶರಾಫ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.