ADVERTISEMENT

ವಿದೇಶಿ ಶಕ್ತಿಗಳ ಬೆದರಿಕೆಗೆ ಮಣಿಯುವುದಿಲ್ಲ: ಚೀನಾ ಅಧ್ಯಕ್ಷ ಷಿ ಜಿಂಗ್‌ಪಿನ್‌

ಪಿಟಿಐ
Published 1 ಜುಲೈ 2021, 12:46 IST
Last Updated 1 ಜುಲೈ 2021, 12:46 IST
ಚೀನಾ ಅಧ್ಯಕ್ಷ ಷಿ ಜಿಂಗ್‌ಪಿನ್‌
ಚೀನಾ ಅಧ್ಯಕ್ಷ ಷಿ ಜಿಂಗ್‌ಪಿನ್‌   

ಬೀಜಿಂಗ್‌: ‘ದೇಶವನ್ನು ಪೀಡಿಸಲು ಅಥವಾ ದಬ್ಬಾಳಿಕೆ ನಡೆಸಲು ಯಾವುದೇ ವಿದೇಶಿ ಶಕ್ತಿಗಳಿಗೆ ಚೀನಾ ಜನತೆ ಅವಕಾಶ ನೀಡುವುದಿಲ್ಲ. ದೇಶದ ಸಾರ್ವಭೌಮತೆಯನ್ನು ಸೇನೆ ಕಾಪಾಡಲಿದೆ’ ಎಂದು ಅಧ್ಯಕ್ಷ ಷಿ ಜಿಂಗ್‌ಪಿನ್‌ ಗುಡುಗಿದ್ದಾರೆ.

ಯಾನನ್ಮೆನ್ ಸ್ಕ್ವೇರ್‌ನಲ್ಲಿ ಗುರುವಾರ ನಡೆದ ಚೀನಾದ ಕಮ್ಯುನಿಸ್ಟ್‌ ಪಕ್ಷದ ಶತಮಾನೋತ್ಸವದ ವರ್ಣರಂಜಿತ ಕಾರ್ಯಕ್ರಮದಲ್ಲಿ ಅವರು ರಾಷ್ಟ್ರದ ಜನತೆ ಉದ್ದೇಶಿಸಿ ಮಾತನಾಡಿದರು.

‘ದಬ್ಬಾಳಿಕೆ ನಡೆಸಲು ಯಾರಾದರೂ ಪ್ರಯತ್ನಿಸಿದರೆ 140 ಕೋಟಿಗಿಂತಲೂ ಹೆಚ್ಚಿರುವ, ದೊಡ್ಡ ಉಕ್ಕಿನ ಗೋಡೆಯಂತಿರುವ ಚೀನಾದ ಜನರ ನಡುವೆ ಸಿಕ್ಕಿ ಅವರು ನುಜ್ಜುಗುಜ್ಜಾಗಲಿದ್ದಾರೆ ಎಂದು ಷಿ ಹೇಳಿದರು.

ADVERTISEMENT

ಯಾವುದೇ ವಿದೇಶಿ ಪಡೆಗೆ ಚೀನಾವನ್ನು ಪೀಡಿಸಲು ಅನುಮತಿ ನೀಡುವುದಿಲ್ಲ ಎಂದು ಷಿ ಎಚ್ಚರಿಕೆ ನೀಡಿರುವುದು ಅಮೆರಿಕವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಲಾಗಿದೆ ಎಂದು ವಿಶ್ಲೇಷಿಸಲಾಗಿದೆ..

ಚೀನಾದ ವುಹಾನ್‌ ನಗರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೋವಿಡ್ 19 ಸಾಂಕ್ರಾಮಿಕದ ಮೂಲ, ವ್ಯಾಪಾರ, ಮಾನವ ಹಕ್ಕುಗಳು ಮತ್ತು ಸೇರಿದಂತೆ ಹಲವು ವಿಷಯಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಈಗಿನ ಅಧ್ಯಕ್ಷ ಜೋ ಬಿಡನ್ ಇಬ್ಬರೂ ಚೀನಾ ಕಡೆಗೆ ಕಠಿಣ ನೀತಿ ಅನುಸರಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 70 ಸಾವಿರ ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಮತ್ತು ಶಾಲಾ ಮಕ್ಕಳ ಸಮ್ಮುಖದಲ್ಲಿ ಕ್ಸಿ ಒಂದು ತಾಸು ಭಾಷಣ ಮಾಡಿದರು.

ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಸಂಸ್ಥಾಪಕ ಅಧ್ಯಕ್ಷ ಮಾವೋ ಜೆಡಾಂಗ್ ಅವರ ಬೃಹತ್‌ ಗಾತ್ರದ ಭಾವಚಿತ್ರವನ್ನು ಟಿಯಾನನ್ಮೆನ್ ಗೇಟ್‌ನ ಬಾಲ್ಕನಿಯಲ್ಲಿ ಅಲಂಕರಿಸಿ ಇಡಲಾಗಿತ್ತು.

ಪಕ್ಷದ ಕಾರ್ಯಕರ್ತರು ಮತ್ತು ಶಾಲಾ ಮಕ್ಕಳು, ಕಮ್ಯುನಿಸ್ಟ್‌ ಪಕ್ಷ ಮತ್ತು ದೇಶವನ್ನು ಬಣ್ಣಿಸುವ ಗೀತೆಗಳನ್ನು ಹಾಡಿ, ಗೌರವ ಸಲ್ಲಿಸಿದರು.

ಈ ಸಂಭ್ರಮಾಚರಣೆಯಲ್ಲಿ ಸೇನಾ ಪಥಸಂಚಲನ ಇಲ್ಲದಿದ್ದರೂ, ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸಿಬ್ಬಂದಿ ಲಘು ಪಥಸಂಚಲನ ನಡೆಸಿ, ಗೌರವ ವಂದನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.