ADVERTISEMENT

ಹವಾಮಾನ ವೈಪರೀತ್ಯ: ವಿಶ್ವಸಂಸ್ಥೆಯ ಯುವ ಸಲಹಾ ಸಮಿತಿಗೆ ಭಾರತದ ಅರ್ಚನಾ ನೇಮಕ

ಪಿಟಿಐ
Published 28 ಜುಲೈ 2020, 11:59 IST
Last Updated 28 ಜುಲೈ 2020, 11:59 IST
ಅರ್ಚನಾ ಸೋರೆಂಗ್ (ಟ್ವಿಟರ್ ಖಾತೆ ಚಿತ್ರ)
ಅರ್ಚನಾ ಸೋರೆಂಗ್ (ಟ್ವಿಟರ್ ಖಾತೆ ಚಿತ್ರ)   

ವಿಶ್ವಸಂಸ್ಥೆ: ಹವಾಮಾನ ವೈಪರೀತ್ಯದ ವಿರುದ್ಧದ ಹೋರಾಟಕ್ಕಾಗಿ ವಿಶ್ವಸಂಸ್ಥೆ ಹೊಸದಾಗಿ ರಚಿಸಿರುವ ಯುವ ಸಲಹಾ ಗುಂಪಿಗೆ ಭಾರತದ ಯುವ ಪರಿಸರ ಹೋರಾಟಗಾರ್ತಿ ಅರ್ಚನಾ ಸೋರೆಂಗ್ ಅವರನ್ನು ನೇಮಿಸಲಾಗಿದೆ.

ಆರು ಯುವ ಪರಿಸರ ಹೋರಾಟಗಾರರನ್ನು ಒಳಗೊಂಡ ಯುವ ಸಲಹಾ ಗುಂಪಿಗೆ ಅರ್ಚನಾ ಅವರನ್ನು ನೇಮಿಸಿರುವುದಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯಾ ಗುಟೆರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಡಿಶಾ ಮೂಲದ ಅರ್ಚನಾ ಸೋರೆಂಗ್‌, ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್ ಸೋಷಿಯಲ್‌ ಸೈನ್ಸ್ (ಟಿಐಎಸ್ಎಸ್‌)ನಲ್ಲಿ ಆಡಳಿತ ನಿಯಂತ್ರಣ ವಿಷಯದಲ್ಲಿ ಅಧ್ಯಯನ ಮಾಡಿದ್ದಾರೆ. ಇವರು ಸ್ಥಳೀಯ ಸಮುದಾಯಗಳ ಪಾರಂಪರಿಕ ಜ್ಞಾನ ಮತ್ತು ಆಚರಣೆಗಳ ಅಧ್ಯಯನ, ಸಂಶೋಧನೆ ಮತ್ತು ದಾಖಲಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ಪಾರಂಪರಿಕ ಜ್ಞಾನ ಮತ್ತು ಆಚರಣೆಯ ಸಂರಕ್ಷಣೆಯಲ್ಲೂ ತೊಡಗಿದ್ದಾರೆ.

ADVERTISEMENT

’ನಮ್ಮ ಪೂರ್ವಿಕರು ನೂರಾರು ವರ್ಷಗಳಿಂದ ಪಾರಂಪರಿಕ ಜ್ಞಾನ ಮತ್ತು ಆಚರಣೆಗಳ ಮೂಲಕ ಅರಣ್ಯ ಮತ್ತು ಪರಿಸರವನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ನಾವು ಆ ಜ್ಞಾನವನ್ನು ಸಂರಕ್ಷಿಸುತ್ತಾ, ಹವಾಮಾನ ಬಿಕ್ಕಟ್ಟು ಪರಿಹರಿಸಲು ಹೋರಾಟ ನಡೆಸಬೇಕಿದೆ’ ಎನ್ನುತ್ತಾರೆ ಅರ್ಚನಾ.

ಯವ ಸಲಹಾ ಗುಂಪಿನಲ್ಲಿ 18 ರಿಂದ 28 ವರ್ಷಗಳ ವಯೋಮಾನದ ಹೋರಾಟಗಾರರಿದ್ದಾರೆ. ಫ್ರಾನ್ಸ್‌, ಬ್ರೆಜಿಲ್‌, ಸುಡಾನ್‌, ಫಿಜಿ, ಅಮೆರಿಕದ ಪ್ರತಿನಿಧಿಗಳಿದ್ದಾರೆ. ಈಗ ಭಾರತದ ಪ್ರತಿನಿಧಿಯಾಗಿ ಅರ್ಚನಾ ಸೇರ್ಪಡೆಗೊಂಡಿದ್ದಾರೆ. ಇವರೆಲ್ಲರೂ ಜಾಗತಿಕಮಟ್ಟದಲ್ಲಿ ಹವಾಮಾನ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಕೈಗೊಳ್ಳುವ ಕ್ರಮಗಳಿಗೆ ಸಲಹೆಗಳನ್ನು ನೀಡುತ್ತಾರೆ.

ವಿಶ್ವದ ಹಲವು ರಾಷ್ಟ್ರಗಳಲ್ಲಿ ಅನೇಕ ಯುವಕ ಯುವತಿಯರು ಹವಾಮಾನ ವೈಪರೀತ್ಯ, ಪರಿಸರ ಸಂರಕ್ಷಣೆ, ಸಾಂಪ್ರದಾಯಿಕ ಜ್ಞಾನ ದಾಖಲಾತಿಯಂತಹ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಸರ ಸಂರಕ್ಷಣೆಗೆ ವಕಾಲತ್ತು ವಹಿಸುತ್ತಾರೆ. ವೈಜ್ಞಾನಿಕವಾಗಿ ಅಧ್ಯಯನ ನಡೆಸುತ್ತಿದ್ದಾರೆ. ಸಂಶೋಧನೆ ಜತೆಗೆ, ವೈಜ್ಞಾನಿಕ ಸಲಹೆ ನೀಡುವಲ್ಲೂ ಮುಂಚೂಣಿಯಲ್ಲಿದ್ದಾರೆ. ಇಂಥ ಯುವ ಹೋರಾಟಗಾರರಿಂದ ಸಲಹೆಗಳನ್ನು ಪಡೆದು ಹವಾಮಾನ ಬಿಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಯುವ ಹೋರಾಟಗಾರರ ಸಲಹಾ ಸಮಿತಿಯನ್ನು ರಚಿಸಿದೆ ಎಂದು ಗುಟೆರಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.