ADVERTISEMENT

1999ರಲ್ಲಿ ಏರ್‌ ಇಂಡಿಯಾ ವಿಮಾನ ಹೈಜಾಕ್‌ ಮಾಡಿದ್ದ ಉಗ್ರ ಪಾಕಿಸ್ತಾನದಲ್ಲಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮಾರ್ಚ್ 2022, 6:05 IST
Last Updated 8 ಮಾರ್ಚ್ 2022, 6:05 IST
1999ರಲ್ಲಿ ಹೈಜಾಕ್‌ ಆಗಿದ್ದ ಏರ್‌ ಇಂಡಿಯಾ ವಿಮಾನ
1999ರಲ್ಲಿ ಹೈಜಾಕ್‌ ಆಗಿದ್ದ ಏರ್‌ ಇಂಡಿಯಾ ವಿಮಾನ   

ನವದೆಹಲಿ: 1999ರಲ್ಲಿ ಏರ್‌ ಇಂಡಿಯಾದ ಐಸಿ–814 ವಿಮಾನವನ್ನು ಹೈಜಾಕ್‌ ಮಾಡಿದ್ದ ಉಗ್ರರಲ್ಲಿ ಒಬ್ಬನಾದ ಝಹೂರ್‌ ಮಿಸ್ತ್ರಿ ಅಲಿಯಾಸ್‌ ಝಾಹಿದ್‌ ಅಖುಂದ್‌ ಪಾಕಿಸ್ತಾನದಲ್ಲಿ ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ಮಾರ್ಚ್‌ 1ರಂದು ಕರಾಚಿಯಲ್ಲಿರುವ ಆತನ ಮನೆಯಲ್ಲಿ ಇಬ್ಬರು ದಾಳಿಕೋರರು ಗುಂಡು ಹಾರಿಸಿರುವುದಾಗಿ ತಿಳಿದು ಬಂದಿದೆ.

ಮುಸುಕು ಧರಿಸಿದ್ದ ದಾಳಿಕೋರರು ಬೈಕ್‌ನಲ್ಲಿ ಸಾಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆದರೆ, ಅವರ ಗುರುತು ಪತ್ತೆಯಾಗಿಲ್ಲ.

ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಝಹೂರ್‌, ತಾನೊಬ್ಬ ಉದ್ಯಮಿ ಎಂದು ತನ್ನ ಹಿನ್ನೆಲೆ ಮರೆಮಾಚಿಕೊಂಡು ಅಡಗಿಕೊಂಡಿದ್ದ ಎಂದು ತಿಳಿದು ಬಂದಿದೆ.

ADVERTISEMENT

ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆ ಮುಖಸ್ಥ ಮೌಲಾನಾ ಮಸೂದ್‌ ಅಜರ್‌, ಉಗ್ರರ ಸಂಘಟನೆಗಳ ಅಲ್ ಉಮರ್‌ ಮುಜಾಹಿದೀನ್‌, ಮುಷ್ತಕ್‌ ಅಹಮದ್‌ ಝರ್ಗರ್‌, ಬ್ರಿಟನ್‌ ಮೂಲದ ಅಲ್‌–ಖೈದಾ ಅಹಮದ್‌ ಓಮರ್‌ ಸಯೀದ್‌ ಶೇಖ್‌ ಅವರನ್ನು ಭಾರತದ ಜೈಲುಗಳಿಂದ ಬಿಡಿಸಿಕೊಳ್ಳಲು ಉಗ್ರರು 1999ರಲ್ಲಿ ಭಾರತದ ಏರ್‌ ಇಂಡಿಯಾ ವಿಮಾನವನ್ನು ವಶಕ್ಕೆ ಪಡೆದಿದ್ದರು.

ವಿಮಾನದಲ್ಲಿದ್ದ 176 ಪ್ರಯಾಣಿಕರನ್ನು ಉಗ್ರರು ಏಳು ದಿನಗಳವರೆಗೂ ಒತ್ತೆಯಾಗಿಟ್ಟುಕೊಂಡಿದ್ದರು. ನೇಪಾಳದ ಕಾಠ್ಮಂಡುವಿನಿಂದ ಹಾರಾಟ ಆರಂಭಿಸಿದ್ದ ವಿಮಾನವು ದೆಹಲಿ ತಲುಪಬೇಕಿತ್ತು. ಆದರೆ, ಉಗ್ರರು ವಿಮಾನವನ್ನು ಆಫ್ಗಾನಿಸ್ತಾನದ ಕಂದಹಾರ್‌ಗೆ ತೆಗೆದುಕೊಂಡು ಹೋಗಿದ್ದರು. ಪಾಕಿಸ್ತಾನ ಸೇನೆಯ ಗುಪ್ತಚರ ಇಲಾಖೆ ಐಎಸ್‌ಐ ಆ ಕಾರ್ಯಾಚರಣೆಯ ಬೆನ್ನೆಲುಬಾಗಿತ್ತು ಎಂದು ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.