ADVERTISEMENT

ಪ್ರತಿದಾಳಿಗೆ ಹೆಚ್ಚು ಸಮಯ ಬೇಕು: ವೊಲೊಡಿಮಿರ್‌ ಝೆಲೆನ್‌ಸ್ಕಿ 

ಎಪಿ
Published 11 ಮೇ 2023, 19:33 IST
Last Updated 11 ಮೇ 2023, 19:33 IST
ವೊಲೊಡಿಮಿರ್‌ ಝೆಲೆನ್‌ಸ್ಕಿ 
ವೊಲೊಡಿಮಿರ್‌ ಝೆಲೆನ್‌ಸ್ಕಿ    

ಕೀವ್‌: ರಷ್ಯಾದ ಆಕ್ರಮಣಕಾರರನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಪ್ರತಿದಾಳಿ ನಡೆಸಲು ಸೇನೆಗೆ ಹೆಚ್ಚಿನ ಸಮಯಾವಕಾಶ ಬೇಕು ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಝೆಲೆನ್‌ಸ್ಕಿ ಅವರು, ‘ಈಗ ನಾವು ಪ್ರತಿ ದಾಳಿ ಆರಂಭಿಸಿದರೆ ಬಹಳಷ್ಟು ಜೀವ ಹಾನಿಯಾಗಲಿದೆ. ಇದಕ್ಕೆ ನಾವು ಸಿದ್ಧರಿಲ್ಲ’ ಎಂದು ಹೇಳಿದ್ದಾರೆ. ಉಕ್ರೇನ್‌ ಅಧ್ಯಕ್ಷರ ಸಂದರ್ಶನವನ್ನು ಬಿಬಿಸಿ ಗುರುವಾರ ಪ್ರಸಾರ ಮಾಡಿದೆ.

‘ನಾವು ಮುನ್ನುಗ್ಗಬಹುದು ಮತ್ತು ಇದರಲ್ಲಿ ಯಶಸ್ವಿಯೂ ಆಗಬಹುದು. ಆದರೆ, ನಾವು ಈಗಾಗಲೇ ಬಹಳಷ್ಟು ಜನರನ್ನು ಕಳೆದುಕೊಂಡಿದ್ದೇವೆ. ಹಾಗಾಗಿ ನಾವು ಕಾಯಬೇಕು. ಪ್ರತಿದಾಳಿ ನಡೆಸಲು ಇನ್ನೂ ಸಮಯ ಬೇಕು’ ಎಂದು ಝೆಲೆನ್‌ಸ್ಕಿ ಸಂದರ್ಶನದಲ್ಲಿ ತಿಳಿಸಿರುವುದಾಗಿ ಬಿಬಿಸಿ ಹೇಳಿದೆ.

ADVERTISEMENT

14 ತಿಂಗಳಿಗೂ ಹೆಚ್ಚು ಸಮಯದಿಂದ ರಷ್ಯಾ ನಡೆಸುತ್ತಿರುವ ಆಕ್ರಮಣದ ವಿರುದ್ಧ ಉಕ್ರೇನ್‌ ಪ್ರತಿ ಹೋರಾಟ ನಡೆಸುತ್ತಿದೆ. ಉಕ್ರೇನ್‌ಗೆ ಯುದ್ಧ ಟ್ಯಾಂಕ್‌ಗಳು, ಇತರ ಶಸ್ತ್ರಸಜ್ಜಿತ ವಾಹನಗಳು ಸೇರಿ ಪಾಶ್ಚಾತ್ಯ ಸುಧಾರಿತ ಶಸ್ತ್ರಾಸ್ತ್ರಗಳು ಪೂರೈಕೆಯಾಗಿವೆ. ಅಲ್ಲದೆ, ಉಕ್ರೇನ್‌ ಪಡೆಗಳಿಗೆ ಪಶ್ಚಿಮದ ಯುದ್ಧ ನಿಪುಣ ಸೈನಿಕರಿಂದ ತರಬೇತಿ ನೀಡಲಾಗುತ್ತಿದೆ.

ರಷ್ಯಾ ಪಡೆಗಳು ಉಕ್ರೇನ್‌ನ ಪೂರ್ವ ಪ್ರದೇಶಗಳಲ್ಲಿ ಈಗಾಗಲೇ ಆಳವಾಗಿ ಬೇರೂರಿವೆ. ಸುಮಾರು 20 ಕಿ.ಮೀ. ದೂರದವರೆಗೂ  ರಕ್ಷಣಾತ್ಮಕ ರೇಖೆಗಳನ್ನು ಎಳೆದಿವೆ. ಪ್ರತಿ ದಾಳಿಗೆ ಉಕ್ರೇನ್‌ ಪಡೆ ಇಳಿದರೆ, ನೆಲ ಬಾಂಬುಗಳು, ಯುದ್ಧ ಟ್ಯಾಂಕ್‌ ವಿರೋಧಿ ತಡೆಗಳ ಸವಾಲನ್ನು ಬಹುಶಃ ಎದುರಿಸಬೇಕಾಗಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.