ಕೀವ್: ದೂರಗಾಮಿ ಶಸ್ತಾಸ್ತ್ರಗಳನ್ನು ಅಮೆರಿಕದಿಂದ ಪಡೆದುಕೊಳ್ಳುವ ಸಂಭವನೀಯತೆ ಕುರಿತ ಮಾತುಕತೆಗಾಗಿ ಈ ವಾರ ವಾಷಿಂಗ್ಟನ್ ಪ್ರವಾಸ ಕೈಗೊಳ್ಳುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಸೋಮವಾರ ಹೇಳಿದ್ದಾರೆ.
ಯುದ್ಧವನ್ನು ನಿಲ್ಲಿಸದಿದ್ದರೆ ಉಕ್ರೇನ್‌ಗೆ ಟೊಮಹಾಕ್ ದೂರಗಾಮಿ ಕ್ಷಿಪಣಿಯನ್ನು ಕಳುಹಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ರಷ್ಯಾಗೆ ಎಚ್ಚರಿಕೆ ನೀಡಿದ್ದರು.
ಶುಕ್ರವಾರಕ್ಕೆ ಮೊದಲು ಟ್ರಂಪ್ ಜೊತೆಗೆ ಸಭೆ ನಡೆಯಬಹುದು ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ. ಭದ್ರತಾ ಮತ್ತು ಇಂಧನ ಕಂಪನಿಗಳನ್ನು ಹಾಗೂ ಅಮೆರಿಕದ ಸಂಸದರನ್ನೂ ಈ ಸಂದರ್ಭದಲ್ಲಿ ಭೇಟಿ ಮಾಡುವುದಾಗಿ ಅವರು ತಿಳಿಸಿದ್ದಾರೆ.
‘ರಷ್ಯಾದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ವಾಯುರಕ್ಷಣೆ ಮತ್ತು ನಮ್ಮ ದೂರಗಾಮಿ ಸಾಮರ್ಥ್ಯದ ಶಸ್ತ್ರಾಸ್ತ್ರಗಳೇ ಸಭೆಯ ಮುಖ್ಯ ವಿಚಾರವಾಗಿರಲಿವೆ’ ಎಂದು ಅವರು ಹೇಳಿದ್ದಾರೆ.
ಮತ್ತೊಮ್ಮೆ ಡ್ರೋನ್ ದಾಳಿ: ಝೆಲೆನ್‌ಸ್ಕಿ ಅವರು ಅಮೆರಿಕ ಭೇಟಿಯ ವಿಷಯ ಪ್ರಸ್ತಾಪಿಸಿದ ಸಂದರ್ಭದಲ್ಲೇ ರಷ್ಯಾದಿಂದ ಕೀವ್ ನಗರದ ಪ್ರಮುಖ ಸ್ಥಳಗಳ ಮೇಲೆ ಡ್ರೋನ್ ಹಾಗೂ ಜಾರು ಬಾಂಬ್‌ಗಳ ದಾಳಿ ನಡೆದಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.