
ಮುಂಬೈ: ಪುಣೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟಿದ್ದಾರೆ. ಇದೀಗ ಅವರಿದ್ದ ವಿಮಾನ ಪತನಗೊಂಡ ಭೀಕರ ದೃಶ್ಯಗಳು ಹೆದ್ದಾರಿ ಬಳಿಯಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಬಾರಾಮತಿಯ ವಿಮಾನ ನಿಲ್ದಾಣದ ಸಮೀಪದ ಹೆದ್ದಾರಿ ಪಕ್ಕದಲ್ಲಿಯೇ ವಿಮಾನ ಪತನಗೊಂಡಿದೆ. ನಿಯಂತ್ರಣ ಕಳೆದುಕೊಂಡ ವಿಮಾನ ವೇಗವಾಗಿ ಭೂಮಿಗೆ ಅಪ್ಪಳಿಸುವುದು, ನಂತರದ ಕ್ಷಣದಲ್ಲೇ ಭಾರಿ ಸ್ಫೋಟದೊಂದಿಗೆ ದಟ್ಟವಾದ ಹೊಗೆ ಆವರಿಸಿರುವುದು ವಿಡಿಯೊಗಳಲ್ಲಿ ಸೆರೆಯಾಗಿದೆ.
ಲ್ಯಾಂಡಿಂಗ್ ವೇಳೆ ವಿಮಾನ ಪತನವಾಗಿದೆ. ಆ ದೃಶ್ಯವನ್ನು ನಾನು ಕಣ್ಣಾರೆ ನೋಡಿದೆ. ನಾಲ್ಕೈದು ಬಾರಿ ಸ್ಫೋಟದ ಸದ್ದು ಕೇಳಿಸಿತು. ಕ್ಷಣಾರ್ಧದಲ್ಲಿ ಭಾರಿ ಪ್ರಮಾಣದ ಬೆಂಕಿ ಆವರಿಸಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿ, ವಿಮಾನದಿಂದ ಜನರನ್ನು ಹೊರತರಲು ಯತ್ನಿಸಿದರು. ಆದರೆ ಬೆಂಕಿ ಜ್ವಾಲೆ ಹೆಚ್ಚಾಗಿದ್ದರಿಂದ ಏನೂ ಮಾಡಲು ಆಗಲಿಲ್ಲ. ಇದು ನಿಜಕ್ಕೂ ದುಖಃಕರ ಸಂಗತಿ ಎಂದಿದ್ದಾರೆ.
ಲ್ಯಾಂಡಿಂಗ್ ಯತ್ನದ ವೇಳೆ ವಿಮಾನ ರನ್ವೇಯಿಂದ ಜಾರಿ ಪಕ್ಕಕ್ಕೆ ಸರಿದಿದೆ. ಈ ಸಂದರ್ಭ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಅಜಿತ್ ಪವಾರ್ ಜೊತೆಗೆ ಆಪ್ತ ಕಾರ್ಯದರ್ಶಿ, ವಿಮಾನದ ಸಿಬ್ಬಂದಿ ಸೇರಿ ಐದು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.