ADVERTISEMENT

ಬೌದ್ಧದರ್ಶನದ ಮೂಲತತ್ತ್ವಗಳು

ಪಶ್ಚಿಮದ ಅರಿವು /ಹಾರಿತಾನಂದ
Published 13 ಏಪ್ರಿಲ್ 2018, 19:40 IST
Last Updated 13 ಏಪ್ರಿಲ್ 2018, 19:40 IST

ಇಂದು ಬುದ್ಧದರ್ಶನ ಅಥವಾ ಬೌದ್ಧಧರ್ಮ ಎಂದರೆ ಒಂದೇ ಆಕಾರದಲ್ಲಿ ಭಾವಿಸಿಕೊಳ್ಳುತ್ತೇವೆ. ಆದರೆ ಬೌದ್ಧದರ್ಶನವೂ ಐತಿಹಾಸಿಕವಾಗಿ ಹಲವು ಸ್ತರಗಳಲ್ಲಿ ವಿಕಾಸವಾಗುತ್ತಲೇ ಬಂದಿದೆ. ಪ್ರೊ. ಎಂ. ಹಿರಿಯಣ್ಣ ‘ಪ್ರಾಚೀನ ಬೌದ್ಧಧರ್ಮಕ್ಕೂ ಅನಂತರದ ಬೌದ್ಧದರ್ಶನಕ್ಕೂ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸಬೇಕು. ಬುದ್ಧನು ಬೋಧಿಸಿದ ಬಹುಕಾಲದ ಅನಂತರ ಬ್ರಾಹ್ಮಣದರ್ಶನಗಳೊಂದಿಗೇ ಬೆಳೆದದ್ದು ಅನಂತರದ ಬೌದ್ಧಧರ್ಮ’ ಎಂದಿರುವುದನ್ನು ಗಮನಿಸಬೇಕು (Outlines of Indian Philosophy).  ‘ಐತಿಹಾಸಿಕ’ ಬುದ್ಧನು ಉಪದೇಶಿಸಿದ ಕಾಣ್ಕೆಯೊಂದಿಗೆ ಮುಂದಿನ ಹಲವರು ದಾರ್ಶನಿಕರೂ ತಮ್ಮ ಕಾಣ್ಕೆಯನ್ನೂ ಸೇರಿಸಿ ಈ ದರ್ಶನವನ್ನು ಮುಂದುವರಿಸಿದ್ದಾರೆ. ಇಲ್ಲೊಂದು ಮುಖ್ಯವಾದ ಸಂಗತಿಯನ್ನು ಮರೆಯುವಂತಿಲ್ಲ; ಅದೆಂದರೆ ಬುದ್ಧ ಭಗವಂತನೇ ಸ್ವತಃ ಯಾವ ಗ್ರಂಥವನ್ನೂ ರಚಿಸಲಿಲ್ಲ. ‘ಬುದ್ಧನು ಯಾವ ಗ್ರಂಥವನ್ನೂ ರಚಿಸಲಿಲ್ಲ... ಅವನ ನಿರ್ವಾಣದ ಬಹುಕಾಲಾನಂತರ ಸಂಕಲನ ಮಾಡಿದ ಗ್ರಂಥಗಳಿಂದ ಅವನ ಉಪದೇಶವನ್ನು ಸಂಗ್ರಹಿಸಬೇಕಾಗಿದೆ. ಆದ್ದರಿಂದ ಅವನ ಉಪದೇಶವು ಅವನು ಬೋಧಿಸಿದಂತೆಯೇ ಅಲ್ಲಿ ಸಿಕ್ಕುತ್ತದೆ ಎನ್ನುವಂತಿಲ್ಲ. ಈ ಕೃತಿಗಳಲ್ಲಿ ದೊರೆಯುವ ನಿರೂಪಣೆಯು ಸಂಪೂರ್ಣವಾಗಿ ಪ್ರಮಾಣಭೂತವಲ್ಲ...’ ಎಂದಿದ್ದಾರೆ, ಹಿರಿಯಣ್ಣ.

ಹಾಗಾದರೆ ಬೌದ್ಧದರ್ಶನ ಎಂದರೆ ಇದೇ – ಎಂದು ನಿರ್ಣಯಕ್ಕೆ ಬರುವುದು ಹೇಗೆ?

ಬೌದ್ಧದರ್ಶನದ ಪ್ರಾಚೀನ ಗ್ರಂಥಗಳಲ್ಲಿರುವ ಸಮಾನ ನಿಲುವುಗಳ ಅಧ್ಯಯನದಿಂದ ಆ ದರ್ಶನದ ಮೂಲತತ್ತ್ವಗಳನ್ನು ಕಂಡುಕೊಳ್ಳಲಾದೀತು. ಹಿರಿಯಣ್ಣನವರು ಈ ತತ್ತ್ವಗಳನ್ನು ಮೂರು ಎಂದು ಒಕ್ಕಣಿಸಿದ್ದಾರೆ:

ADVERTISEMENT

1.  ಅದು ನಿರಾಶಾವಾದಿ.

2. ಅದು ವಾಸ್ತವವಾದಿ.

3. ಅದರ ದೃಷ್ಟಿ ವ್ಯಾವಹಾರಿಕ.

ಈ ಅಂಶಗಳು ದಿಟವಾಗಿಯೂ ಬುದ್ಧದರ್ಶನದ ಮೂಲತತ್ತ್ವಗಳು ಹೌದೇ, ಅಲ್ಲವೇ – ಎನ್ನುವುದನ್ನು ಮುಂದಿನ ದಿನಗಳಲ್ಲಿ ನೋಡೋಣವಾಗುತ್ತದೆ.

ಬೌದ್ಧದರ್ಶನ ನಿರಾಶಾವಾದಿತನದ ಬಗ್ಗೆ ಹಿರಿಯಣ್ಣನವರ ಒಂದೆರಡು ಮಾತುಗಳನ್ನು ಇಲ್ಲಿ ನೋಡಬಹುದು:

ಎಲ್ಲವೂ ದುಃಖಮಯ – ಎಂಬ ಮಾತು ಈ ತತ್ತ್ವದ ಹಿಂದಿರುವ ಸೂತ್ರ. ಹೀಗೆಂದು ‘ಅದು ಹತಾಶೆಯ ಪಂಥ ಎಂದು ಭಾವಿಸಬಾರದು. ಇತರ ಕೆಲವು ಸಿದ್ಧಾಂತಗಳಂತೆ ಅದು ಇಹಲೋಕದಲ್ಲಾಗಲಿ, ಪರಲೋಕದಲ್ಲಾಗಲಿ ಸುಖವು ದೊರೆಯುತ್ತದೆ ಎಂಬ ಭರವಸೆಯನ್ನು ನೀಡುವುದಿಲ್ಲ, ನಿಜ. ಬದಲಿಗೆ ಮಾನವನು ದುಃಖಕ್ಕೆ ಬಲಿಯಾಗದೆ ಅದನ್ನು ಗೆದ್ದು, ಶಾಂತಿಯನ್ನು ಇಲ್ಲಿಯೇ ಪಡೆಯಬಹುದು ಎನ್ನುತ್ತದೆ. ಬುದ್ಧನು ಪ್ರಪಂಚದಲ್ಲಿರುವ ಕೆಡುಕಿನ ವಾಸ್ತವಗಳನ್ನು ಕುರಿತು ಹೇಳುತ್ತ, ಅವುಗಳ ನಿವಾರಣೆಯ ಮಾರ್ಗವನ್ನೂ ಬೋಧಿಸಿದ್ದಾನೆ.

* ನಿಮ್ಮ ಅನಿಸಿಕೆಗಳನ್ನು ನಮಗೆ ಕಳುಹಿಸಿ. ವಿಳಾಸ: ಸಂಪಾದಕರು, ಪ್ರಜಾವಾಣಿ, ಅರಿವು ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001

email: arivu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.