ADVERTISEMENT

ಬಾರೊ ಗಿಣಿಯೆ ಮರಳಿ ಮನೆಗೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST
ಬಾರೊ ಗಿಣಿಯೆ ಮರಳಿ ಮನೆಗೆ
ಬಾರೊ ಗಿಣಿಯೆ ಮರಳಿ ಮನೆಗೆ   

ಅಂದಿನ ಸರಿಸುಮಾರು ಎಲ್ಲ ಸಿನಿಮಾಗಳಲ್ಲಿನ ಒಂದು ಪ್ರಮುಖ ಥೀಂ ಅಂದರೆ ಪತಿ, ಪತಿಸೇವೆ. ಒಟ್ಟಾರೆ ಕಣವನೆ ಕಣ್‌ಕಂಡ ದೈವಂ. ಸತಿಶಕ್ತಿ. ಆದರ್ಶ ಸತಿ. `ಪ್ರಭೂ ನನ್ನೆದೆಯೆ ನಿನ್ನಯ ಮಹಾಮಂದಿರ ನಾ ನಿನ್ನ ದಾಸಿಯೋ ದಯಾಸಾಗರ~.

ಥೀಂ ಬಗ್ಗೆ ಇವತ್ತಿಗೂ ನಮ್ಮ ತಕರಾರಿಲ್ಲ. ಜೊತೆಗೆ ಬದುಕುವವರ, ಜೀವನ ಹಂಚಿಕೊಳ್ಳುವವರ, ಬಾಳಸಂಗಾತಿಯ ಕುರಿತ ಕಾಳಜಿ, ಪ್ರೀತಿಯೆಲ್ಲ ಸರಿಯೆ. ಇರಬೇಕಾದ್ದೇ.
 
ಆದರೆ ಅದು ಏಕಪಕ್ಷೀಯವಾಗಿ ಒಂದೇಸಮನೆ ಕಥೆ ಹಾಡು ಸೀನರಿಗಳ ಮೂಲಕ ಬರುತ್ತ ಹೆಣ್ಣು ಮತ್ತು ಗಂಡು ಇಬ್ಬರ ಮಿದುಳನ್ನೂ ತೊಳೆಯಿತು. ಗಂಡನ್ನೂ (ಕಣವನನ್ನೂ) ಒಂದು ಚೌಕಟ್ಟಿಗೆ ತಳ್ಳಿ ಬಂಧಿಸಿಟ್ಟಿತು.

ಪುರುಷನ ಗ್ರಹಿಕೆಗೆ ಹೆಣ್ಣೆಂದರೆ ತನ್ನ ಸೇವೆಗೇ ಮೀಸಲಿರುವಳು ಎಂಬುದು ಮೊಳೆಜಡಿದಂತೆ ಗಟ್ಟಿಯಾಗಿ ಕುಳಿತರೆ, ಮಹಿಳೆ, ಗಂಡು ಅವ ಎಂಥವನೇ ಇರಲಿ, ಹೊಡೆದರೂ ಬಡಿದರೂ ಉಪವಾಸ ಕೆಡವಿದರೂ ಕುಡಿದರೂ ಹಾಳಾದರೂ, ಬಳುವಟೆ ತಿರುಗಿ ಕಾಯಿಲೆ ಹಿಡಿಸಿಕೊಂಡು ಬಂದರೂ ಪ್ರಶ್ನಿಸದೆ ಮೌನವಾಗಿ ಅವನ ಸೇವೆ ಮಾಡುವುದೇ ತನ್ನ ಕರ್ತವ್ಯ, ಅದರಿಂದಲೇ ತನಗೆ ಮುಕ್ತಿ ಎಂದು `ಬಿಡೆ ನಿನ್ನ ಪಾದ~ ಎನ್ನುತ್ತ ಅದರಂತೆಯೇ ನಡೆದುಕೊಳ್ಳುವವಳು.

ಅದು ಮಹಿಳೆಯರು ಇನ್ನೂ ಶಾಲೆ ಮೆಟ್ಟಲು ಹತ್ತಲೋ ಬೇಡವೋ ಎಂಬಂತೆ ಅಲ್ಲೊಬ್ಬ ಇಲ್ಲೊಬ್ಬ ಹುಡುಗಿ ಕಲಿಯಲು ಹೋಗುತ್ತಿದ್ದ, ಆರ್ಥಿಕವಾಗಿಯಂತೂ ಸಂಪೂರ್ಣ ಅವಲಂಬಿತಳೇ ಆಗಿದ್ದ ಕಾಲ. ಇಂಥಲ್ಲಿ ಪತಿ ಸೇವೆಯೇ ಸತಿಗೆ ಗತಿ ನೀಡುವ ಸೌಭಾಗ್ಯ... ಸಾಲುಗಳು ಎಂಥಾ ಗಜಾಲಿ ಹೆಂಗಸನ್ನೂ ಹದಮಾಡಿದವು.
 
ನಮ್ಮ ಕೋ.ಲ.ಕಾರಂತರು ತಮ್ಮ `ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು~ ಪುಸ್ತಕದಲ್ಲಿ `ಕಾಲಿನಲ್ಲಿಡಬೇಕಾದ್ದನ್ನು ಕಾಲಿನಲ್ಲಿಯೇ ಇಡಬೇಕು. ತಲೆಯ ಮೇಲೆ ಹೊತ್ತುಕೊಳ್ಳಬಾರದು. ನೆಸೆ ಕೊಟ್ಟ ನಾಯಿ ನೊಸಲು ನೆಕ್ಕುತ್ತದೆ. ಹೆಂಡತಿಯಾದವಳಿಗೆ ಹೆಚ್ಚು ಸಲಿಗೆ ಕೊಡಬಾರದು~ ಎನುವ ಆ ಕಾಲದ ಮನೋಧರ್ಮವನ್ನು ದಾಖಲಿಸಿದ್ದಾರೆ.
 
ಅದಕ್ಕೆ ಸರಿಯಾಗಿ ಬರುತಿದ್ದ ಇಂಥ ರಮ್ಯ ಸಿನಿಮಾಗಳು. ಪ್ರೇಕ್ಷಕರು ತಲೆಕಾಸಿಕೊಳ್ಳದೆ ಖುಷಿಖುಷಿಯಾಗಿ ನೋಡುತಿದ್ದ ಸಿನಿಮಾಗಳು ಅವೆಲ್ಲ, ವಾಸ್ತವವಾಗಿ ಸರಳ ನೀತಿಕತೆಗಳಂತಿದ್ದವು. ಸಮಸ್ಯೆಯ ಸಂಕೀರ್ಣತೆಯ ಆಳಕ್ಕಿಳಿಯದೆ ಅಲ್ಲಲ್ಲೇ ತೀರ್ಮಾನಿಸಿ, ಕಡೆಗೊಂದು ಭಾವಚಿತ್ರದಲ್ಲಿ `ಶುಭಂ~ ಆದವು.

ಜೀವಂತವಾಗಿ ಕಾಣುವಂತೆ, ನಾವು ಕಾಣಲಾರದುದೆಲ್ಲ ಕಾಣುವಂತೆ, ಕಣ್ಣೆದುರು ಎಂಥೆಂಥ ಗೋಡೆಗಳ ಒಳಗೆ ನಡೆಯುವವೆಲ್ಲ, ಅಂತಃಪುರದೊಳಗೆ, ಮನಸ್ಸಿನೊಳಗೂ ನಡೆವುದೆಲ್ಲ ಬಹಿರಂಗವಾಗಿ ಬಯಲಾಗುತ್ತ ಚಲಿಚಲಿಸುತ್ತ ಕತೆ ಹೇಳುವ ಮಾಧ್ಯಮಗಳಾದವೇ ಹೊರತು ಆ ನಿರ್ದಿಷ್ಟ ನವಮಾಧ್ಯಮದ ಭಾಷಾಶಕ್ತಿಯನ್ನು ಅವಗಣಿಸಿದವು. ಅಥವಾ ಅದನ್ನು ಅಪ-ಯೋಗಿಸಿದವು.

ಮುಗ್ಧತೆಯೇ ಮೈವೆತ್ತು ಬಂದಂಥ ನಟನೆಯಲ್ಲಿ ಹೆಣ್ಣು ಹೇಗಿರಬೇಕೆಂದು ಹೇಳಿದ್ದೆಲ್ಲವನ್ನೂ ನಾವು ಇಷ್ಟಪಟ್ಟು ನೋಡುತ್ತಿದೆವು, ಯಾಕೆಂದರೆ ಅದರ ಸುತ್ತ ಪ್ರೇಮಕತೆಯೊಂದು ಇರುತ್ತಿತ್ತು. ಪ್ರೇಮದ ಬಲು ಸುಂದರ ಹಾಡುಗಳು ಇರುತ್ತಿದ್ದವು. ಸರಳವಾಗಿ ಪ್ರೇಮ ನಿವೇದನೆ ಇರುತಿತ್ತು. ಅಲ್ಲಿ ಕಂಡ ಪ್ರೇಮಿಗಳು ಮದುವೆಯಾದರೂ ಅದುವರೆಗೆ ಅವರು ಖಳರಿಂದ ಪಟ್ಟ ಕಷ್ಟಗಳೆಲ್ಲ ಮನೆಗೆ ಬಂದ ಮೇಲೆಯೂ ನೆನವರಿಕೆಯಾಗುತಿತ್ತು.
 
ಹಳೆಯ ಸಿನಿಮಾಗಳು ಗೆದ್ದಿರುವುದೇ ಪ್ರೇಮ ಮತ್ತು ಭಕ್ತಿ ಕತೆಗಳಿಂದ ಅಲ್ಲವೆ? `ಶ್ರೀನಿವಾಸ ಕಲ್ಯಾಣ~ ಎನ್ನಲಿಕ್ಕಿಲ್ಲ, ನನ್ನ ಪತಿ, ಹೆಸರೂ ಶ್ರೀನಿವಾಸ ಮೂರ್ತಿ, ಶಿವಮೊಗ್ಗದ ವಿನಾಯಕ ಟಾಕೀಸಿನ ನೆನಪಿಗೆ ಹಾರಿದರೆಂದೇ.
 
ಅವರೆನ್ನುವಂತೆ- ಅಂದು ಥಿಯೇಟರಿನ ಎದುರು ವೆಂಕಟೇಶದೇವರ ಮೂರ್ತಿ, ಅದರ ಸುತ್ತ ಕಟಕಟೆ, ಎದುರು ಒಂದು ಕಾಣಿಕೆ ಡಬ್ಬಿ. ಆ ಕಾಣಿಕೆ ಡಬ್ಬಿ ಪ್ರತೀ ದಿನವೂ ತುಂಬುವುದು, ಪ್ರತಿದಿನವೂ ಅದನ್ನು ತೆರೆದು ಖಾಲಿ ಮಾಡುವುದು. ಸಿನಿಮಾಕ್ಕೆ ಜಾತ್ರೆಗೆ ಬಂದಂತೆ ಜನ ಬರುವುದು ಇತ್ಯಾದಿ ಇತ್ಯಾದಿ ನೆನಪುಗಳ ಸರಮಾಲೆ.

ಹಾಸನದ ತನ್ನ ತವರಿನಲ್ಲಿ ಸ್ವಂತ ಥಿಯೇಟರ್- ಪಿಕ್ಚರ್ ಪ್ಯಾಲೇಸ್- ಇದ್ದ ನನ್ನ ಗೆಳತಿಯ ಬಳಿಯಂತೂ ತನ್ನ ತಂದೆ, ಥಿಯೇಟರ್ ಮುಂದೆ ಪ್ರತಿಷ್ಠಾಪಿಸಿದ ಮದರಾಸಿನಿಂದ ಸಿನಿಮಾರಂಗದ ಗೆಳೆಯರೊಬ್ಬರು ಕಳಿಸಿಕೊಟ್ಟ `ಲಾರ್ಡ್ ವೆಂಕಟೇಶ~ನ ದೊಡ್ಡ ಎತ್ತರದ ಮೂರ್ತಿಗೆ ಪೂಜೆಗೆಂದೇ ಒಬ್ಬ ಜೋಯಿಸರನ್ನು ಗೊತ್ತು ಮಾಡಿ, ಸಿನಿಮಾ ಬದಲಾಗುವವರೆಗೂ ಬರುತ್ತಿದ್ದ ಹೇರಳ ದಕ್ಷಿಣೆಯ ಬಲದಿಂದ ಆ ಜೋಯಿಸರ ಆರ್ಥಿಕ ದುರವಸ್ಥೆ ಪರಿಹಾರವಾದ ಒಂದು ದೀರ್ಘ ಸತ್ಯಕತೆಯೇ ಇದೆ.
 
ಅಂದು ಗುಬ್ಬಿ ಕಂಪೆನಿ ನಾಟಕಕ್ಕೆ ಗಾಡಿ ಕಟ್ಟಿಕೊಂಡು ಹೋದ ಜನ ಸಿನಿಮಾಕ್ಕೂ ಗಾಡಿ ಕಟ್ಟಿದರು, ಕಾಣಿಕೆ ಹಾಕಿ ಕೈ ಮುಗಿದರು. ತನ್ಮಯತೆಯಿಂದ ತಣಿದರು.
 
ಸಿನಿಮಾ ಅಂದರೆ ಹೀಗೆ ಚಲಿಸುವ ನಾಟಕವಾಗಿ ವೀರಣ್ಣನವರೂ ಸಿನಿಮಾ ಪ್ರಯೋಗಕ್ಕೆ ತಮ್ಮ `ಸದಾರಮೆ~ ನಾಟಕವನ್ನು ಇಳಿಸಿದರಲ್ಲವೆ! ನಾಟಕ ಕಂಪೆನಿಗಳು ಹೆಚ್ಚೇನು ಭೇಟಿ ನೀಡದ ನಮ್ಮೂರಲ್ಲಿ ಆ ನಾಟಕವನ್ನು ಎಷ್ಟು ಮಂದಿ ನೋಡಿದ್ದರೋ, ಆದರೆ ಅದು ಸಿನಿಮಾ ಆಗಿದ್ದೇ ಸೈ, `ಒಳ್ಳೆ ಸಮಯ ಒಳ್ಳೆ ಸಮಯ ಒಳ್ಳೆ ಸಮಯವೂ...~ ತನ್ನ ಸಂದರ್ಭ ಬಿಟ್ಟುಕೊಟ್ಟು ಪ್ರೇಕ್ಷಕರೆಲ್ಲರ ಮನೆ ಹೊಕ್ಕು `ಸಂದರ್ಭ ಹಲವು~ಗಳಿಗೊಪ್ಪುವ ಹಾಡಾಯಿತು.

ಆದರೆ `ಸಂತ ತುಕಾರಾಂ?~. ಹೆಣ್ಣಿನ ಹಳೆಯ ಮಾದರಿಯನ್ನು ಹೊಡೆದು ಹಾಕಿದ ಭಕ್ತಿ ಸಿನಿಮಾ ಪ್ರಾಯಶಃ ಇದೊಂದೇ ಇರಬೇಕು. ಭಕ್ತ ಪತಿಗೆ ಸಂಸಾರವೆಂದರೆ ಜೀವವೆನ್ನುವ ಎರಡನೆಯ ಹೆಂಡತಿ ಜೀಜಾಬಾಯಿ. ಸಂಸಾರದ ಕೆಸರಿನಲ್ಲಿ ಕಾಲು ಹೂತು ಹೋದರೂ ಎಚ್ಚರಾಗದವಳು. ವಿಷಾದವೆಂದರೆ ಆಕೆಯ ನಿಜಜೀವನದಲ್ಲಿ ಬಿಡಿ, ಸಿನಿಮಾದಲ್ಲಿಯೂ ಪ್ರೇಕ್ಷಕರು ಅವಳನ್ನು ಅರ್ಥ ಮಾಡಿಕೊಳ್ಳದೆ ಗಯ್ಯಾಳಿ ಎಂದೇ ಬಗೆದರು.
 
ಅಂಥಾ ತುಕಾರಾಮನಿಗೆ ಇಂಥಾ ಹೆಂಡತಿಯೇ ಎಂದು ವಿಲಿಗುಟ್ಟಿದರು. ಇಡೀ ದಿನ `ವಿಠ್ಠಲ ವಿಠ್ಠಲ~ ಎನುವ ತುಕಾರಾಮನೆದುರು ನೂರಕ್ಕೆ ನೂರು ಪ್ರಾಪಂಚಿಕಳಾದ ಮಕ್ಕಳ ತಾಯಿ ಆಕೆ. `ಅಷ್ಟು ವಿಠ್ಠಲ ಎನ್ನುವವನಿಗೆ ಮದುವೆ, ಎರಡನೆಯ ಮದುವೆ, ಅದೂ ಸಾಲದೆಂದು ಮಕ್ಕಳಾದರೂ ಯಾಕೆ ಬೇಕಿತ್ತು?~ ಅಂತಲೂ ಆಗಲೇ ಯಾರೋ ಪೂರ ಲೌಕಿಕರು ಕಮೆಂಟು ಹೊಡೆದು, ನಮಗೆ ಅದಷ್ಟು ಅರ್ಥವಾಗದಿದ್ದರೂ ಎಲ್ಲೋ ಒಂಚೂರು ಆದಂತಾಗಿ ಕಿಲಕಿಲ ನಕ್ಕಿದ್ದೆವು.

ಜೀಜಾಬಾಯಿಯನ್ನು ಮರೆಯುವಂತಿದೆಯೇ? ಅದರಲ್ಲಿಯೂ ಕೊನೆಗೆ ತುಕಾರಾಮನನ್ನು ಕರೆದೊಯ್ಯಲು ಪುಷ್ಪಕವಿಮಾನ ಬಂದಾಗ, ಆತ `ನೀನೂ ಬಾ. ಸಂಸಾರ ಮೋಹ ಬಿಡು. ಅದನ್ನು ನೋಡಿಕೊಳ್ಳಲು ವಿಠ್ಠಲನಿರುವ~ ಅಂದಾಗ ಏನಂದಳು ಆಕೆ? `ನೀನು ಹೋಗು, ನಾ ಬರಲಾರೆ. ನಾನೂ ಹೋದರೆ ಈ ಮಕ್ಕಳ ಗತಿಯೇನು?~. 

ಆದರೆ ಇಡೀ ಕತೆ ಹೇಗೆ ಬಿಂಬಿತವಾಗಿತ್ತೆಂದರೆ ತುಕಾರಾಮನ ಭಕ್ತಿಯೆದುರು ಹೆಂಡತಿಯ ಪ್ರಾಪಂಚಿಕ ಆಸ್ಥೆ ನಗೆಪಾಟಲಾಗುವಂತೆ. ಆಕೆಯ ಉತ್ತರ ಕೇಳಿ ಅದೊಂದು ಜೋಕು ಎಂಬಂತೆ ಇಡೀ ಥಿಯೇಟರ್ ಹೋ... ಹಾಗೆ ನುಡಿದ ಅವಳನ್ನು ಭವಕ್ಕೆ ಬಿಟ್ಟು ಆತ ವಿಮಾನದಲ್ಲಿ ಹಾರಿಹೋಗುವಾಗ ಎದ್ದುನಿಂತು ಕೈ ಮುಗಿಯುವಷ್ಟು ಭಾವಪರವಶ ಪ್ರೇಕ್ಷಕರು.

ಆ ಮೇಲಿಂದ ಯಾವುದಾದರೂ ಪಾಪದ ಗಂಡಸಿನ ಹೆಂಡತಿ ಜೋರಿನವಳಾದರೆ ಹೋಲಿಕೆಗೆ ತಾಟಕಿ ಶೂರ್ಪನಖಿ ಜೊತೆಗೆ ತುಕಾರಾಮನ ಹೆಂಡತಿಯೂ ಸೇರಿಹೋದಳು.

***
ಅವತ್ತು ಶಾಲೆಗೆ ಬಂದ ಬಾಬುಲಿ ತನ್ನ ಅಕ್ಕನನ್ನು `ನೋಡಲು~ ಬರುತಿದ್ದ ಸುದ್ದಿ ಹೇಳಿದಳು. ಎಲ್ಲಾ ಮನೆಗಳಲ್ಲಿಯೂ ಗಂಡುಹೆಣ್ಣು ಅಂತ ಸರಿಗಟ್ಟಿ ಮಸ್ತು ಮಕ್ಕಳಿರುವ ಅಂದು ಹೀಗೆ ಅಕ್ಕಂದಿರನ್ನು ನೋಡಲು ಬರುವುದು, ಅದನ್ನು ನಾವು ಪಿಸುಪಿಸುವಾಗಿ ಯಾರಿಗೂ ಹೇಳಬಾರದೆಂದು ಪ್ರಾಮಿಸ್ ಪಡೆದು ಆಪ್ತಗೆಳತಿಯರೊಡನೆ ಹೇಳುವುದೂ ಸಾಮಾನ್ಯವಾಗಿತ್ತು...
 
ಹುಡುಗಿಯನ್ನು ಹುಡುಗನ ಮನೆಗೆ ಕರಕೊಂಡು ಹೋಗಿ ತೋರಿಸುವುದಾಗಲೀ, ನೋಡಲು ಬಂದಾಗ ಹಾಡು ಹೇಳಿಸುವುದಾಗಲೀ ನಮ್ಮಲ್ಲಿ ಇರಲೇ ಇಲ್ಲ. ಹಿಂದೆಲ್ಲ ಇತ್ತು ಅಂತ ಯಾರು ಹೇಳಿದ್ದನ್ನೂ ನಾನು ಕೇಳಿಲ್ಲ. ಹಾಗಾಗಿ ಹಳೆಮೈಸೂರಿನಲ್ಲಿ ುಡುಗಿಯನ್ನೇ ಹುಡುಗನ ಮನೆಗೆ ಒಯ್ಯುವ ಹಾಡುಹೇಳಿಸುವ ಕ್ರಮ ಕೇಳಿ ನಮಗೆ ನಗೆಯಚ್ಚರಿ. `ಭಾಮೆಯ ನೋಡಲು ತಾ ಬಂದ~ ಮುಂತಾದವನ್ನು ನಾವು ಹಾಡಿದರೂ ಅದನ್ನು ಕ್ಲಪ್ತ ಕಾಲಕ್ಕೆ ಬಳಸಿದವರಲ್ಲ. ಇರಲಿ.
 
ಬಾಬುಲಿಯ ಅಕ್ಕನನ್ನು ನೋಡಲು ಬಂದವ ಆಕೆಯನ್ನು ಒಪ್ಪಿದನೆ ಇಲ್ಲವೆ? ಮರುದಿನದ ನಮ್ಮ ಕುತೂಹಲ. ಆತ ಒಪ್ಪಿದ, ಅಕ್ಕನೇ ಒಪ್ಪಲಿಲ್ಲ ಎಂದಳು ಬಾಬುಲಿ. ಯಾಕೆಂದು ಎಷ್ಟು ಕೇಳಿದರೂ ಅಕ್ಕ ಹೇಳಲಿಲ್ಲವಂತೆ. ಕಡೆಗೆ ತನ್ನ ಅಮ್ಮ ಅವಳ ಕವುಳು ತಿಪ್ಪಿ `ಯಾರನ್ನಾದರೂ ಲವ್ ಮಾಡುತ್ತಿದ್ದೀಯ ರಂಡೆ?~ ಎಂದು ಗದರಲು ಬಾಯಿ ಬಿಟ್ಟಳಂತೆ.
 
ಏನಂತ? ಏನಂತ? `ತನ್ನ ಗಂಡ ಆರ್.ಗಣೇಶನ್ ತರಹ ಇರಬೇಕು, ಅಲ್ಲದೆ ಪ್ಯಾಂಟು ಹಾಕುವವನಿರಬೇಕು~ ಅಂತ. ಅದನ್ನು ಕೇಳಿ ತಂದೆ `ಏನು, ಆರ್.ಗಣೇಶನೆ! ಕೊಜೆಮಣ್ಣಿಂದ ತಯಾರು ಮಾಡಲೆ ನಾನು? ಸಿನಿಮಾಕ್ಕೆ ಮಕ್ಕಳನ್ನು ಕಳಿಸಿ ಹಾಳು ಮಾಡಿದೆ.

ಇನ್ನೊಂದು ವರ್ಷ ಯಾರಾದರೂ ಸಿನಿಮಾ ಟಾಕೀಸಿನ ಒಳಗೆ ಕಾಲಿಟ್ಟಿರಾದರೆ ಮೆಟ್ಟಲ್ಲಿ ಬಾರಿಸುತ್ತೇನೆ. ಹ್ಞ!~ ಅಂದರಂತೆ. ಅಕ್ಕನ ದೆಸೆಯಿಂದ ತಾವು ತಂಗಿಯರೆಲ್ಲರಿಗೆ ಸುಖಾಸುಮ್ಮನೆ ಶಿಕ್ಷೆಯಾದ ದುಃಖದಲ್ಲಿದ್ದಳು ಬಾಬುಲಿ.  `ಅಣ್ಣಂದಿರೆಲ್ಲ ಯಾವ ಚಡಿಯಲ್ಲಿದರೂ ನೋಡಿ ಬರುತ್ತಾರೆ. ಕಷ್ಟ ನಮಗಲ್ಲವನ?~ ಎಂದು ಸಂಕಟಪಟ್ಟಳು.

ಅಂತೂ ಯಾರು ಬಂದರೂ ಒಪ್ಪದೆ ಹಟ ಮಾಡಿ ಮಾಡೀ, ಬಹಳ ತಡವಾಗಿ ಆರ್.ಗಣೇಶನನಿಗೆ ಯಾವ ವಿಧದಲ್ಲಿಯೂ ಹೋಲಿಕೆ ಇಲ್ಲದವನೊಂದಿಗೆ, ಆದರೆ ಪ್ಯಾಂಟು ಹಾಕುವವನೊಡನೆ, ಮತ್ತು ಅಲ್ಲೇ ಹತ್ತಿರದ ಊರಿನವನೊಡನೆ ಅವಳ ಅಕ್ಕನ ಮದುವೆಯಾಯಿತು. ಅಥವಾ ರೂಢಿ ಮಾತಿನಂತೆ ಅವಳನ್ನು  ಕೊಟ್ಟರು. ಬಾಬುಲಿ ತೀರಿ ಹೋದರೂ, ವಯಸ್ಸಾದ ಅವಳಕ್ಕ ಈಗಲೂ ಒಮ್ಮಮ್ಮೆ ಸಿಗುವುದಿದೆ.
 
ಆಗ ಹಳೆಯ ದಿನಗಳ ಉಲ್ಲಾಸ ಕೆದರುವುದಿದೆ. ಒಮ್ಮೆ ಹೀಗೇ ಅದೂ ಇದೂ ನಡುವೆ ಮೆಲ್ಲ ಕೇಳಿದೆ. `ನಿಮ್ಮ ಆರ್.ಗಣೇಶನ್ ಏನಾದ ಕಡೆಗೆ?~. ಉಕ್ಕುವ ನಗೆಯಲ್ಲಿ ಅವಳೆಂದಳು- `ಎಷ್ಟು ಚಂದ ಇದ್ದ ಅಲ್ಲನ ಸತ್ಯ ಹೇಳು!... ಆ ಮಿಸ್ ಮೇರಿ, ರಾವೋಯಿ ಚಂದಮಾಮ... ಪಾಪ, ಯಾಕೋ, ಆತ ಬೇಗ ಸತ್ತ.
 
ಸತ್ತರೇನು, ಈಗ ಟೀವಿ ಇದೆ. ಪುಣ್ಯಕ್ಕೆ ಹಳೆಯ ಸಿನಿಮಾಗಳೂ ಬರುತ್ತವೆ. ಆರ್.ಗಣೇಶನ್-ಸಾವಿತ್ರಿ ಜೋಡಿಯ ಚಿತ್ರ ಬಂತೆಂದರೆ ಈಗಲೂ ಕೆಲಸ ಎಲ್ಲ ಅಲ್ಲಲ್ಲೇ ಬಿಟ್ಟು ಯಾರು ಏನೇ ಎನ್ನಲಿ, ನೋಡುತ್ತ ಕೂತು ಬಿಡುತ್ತೇನೆ...~

***
ಸೆಕೆಂಡ್‌ಶೋ ಸಿನಿಮಾಕ್ಕೆ ಹೊರಟಿದ್ದೇವಪ್ಪ ನಾವು. ದೂರದಿಂದ ಬರುವವರ ಜೊತೆಗೆ ಗಂಡಸಿನ ಬಲ ಬೇಕಾದರೂ ರಸ್ತೆ ದಾಟಿದರೆ ಟಾಕೀಸಿರುವ ನಮಗೆ ಬೇಡ. ಹೊರಟ ಮಂದಿಯಷ್ಟೇ ಬೇಗಬೇಗ ಊಟ ಮುಗಿಸಿದ್ದೇವೆ. ರಾತ್ರಿಯಾದರೇನಾಯಿತು? ಹೊರಡುವ ಸಂಸ್ಕಾರಗಳೆಲ್ಲ ಆಗಲೇ ಬೇಕು. ಕನ್ನಡಿ ಮುಂದೆ ತಲೆ ಬಾಚಿ, ಪೌಡರು ಹಾಕಿ, ಹಣೆಗಿಟ್ಟು, ಉಡುಗೆ ಬದಲಿಸಿ ರೆಡಿಯಾಗುತಿದ್ದೇವೆ.ರಾತ್ರಿಯಾದ ಮೇಲೆ ಹೆಣ್ಣುಮಕ್ಕಳು ಕನ್ನಡಿ ನೋಡಬಾರದು ಎನ್ನುತಿದ್ದ ಕಾಲದವರು.
 
ರಾತ್ರಿ ಪ್ರದರ್ಶನ, ಸೆಕೆಂಡ್ ಶೋ ಅಂತೆಲ್ಲ ಕಲ್ಪಿಸಿ ಹೇಗೆ ಕಾಲವೇ ಅಯಾಚಿತವಾಗಿ ಹೆಣ್ಣುಮಕ್ಕಳ ಪರವಾಗಿ ನಿಂತು ಇದಕ್ಕೆಲ್ಲ ಪರ್ಮಿಶನ್ ಕೊಟ್ಟುಬಿಟ್ಟಿತು. `ರಾತ್ರಿಯಲ್ಲಿ ಕನ್ನಡಿ ಕಾಣುವವರು ಯಾರು ಮಕ್ಕಳೆ? ಸೂಳೆಯರು.

ಹೆಣ್ಣುಮಕ್ಕಳು ರಾತ್ರಿಕಟ್ಟಿ ಈ ನಮೂನೆ ಕನ್ನಡಿ ಮುಂದೆ ನಿಲ್ಲುತ್ತೀರಲ್ಲ...~ ಎನುವವರನ್ನೇ ಎಲ್ಲ ಮನೆಗಳಿಂದಲೂ ಗಡಿಬಿಡಿಮಾಡದೆ ಸಾವಧಾನವಾಗಿ ಸೆಕೆಂಡ್‌ಶೋಗೆ ಪ್ರಾಥಮಿಕದಲ್ಲಿ `ಶಿವಶರಣೆ ನಂಬಿಯಕ್ಕ~, `ಸತಿ ಸುಕನ್ಯ~ದಂತಹ ಆಕರ್ಷಣೆಯೊಡ್ಡಿ ಅಂತೂ ಹೊರಡಿಸಿದ ಸಿನಿಮಾ ಯುಗವದು, ಕಾಣಿರೋ. ತಸ್ಮೈ ನಮಃ ಎನದೆ  ಮುಂದರಿಯಲುಂಟೆ?

ಪುರಾಣ ಜಾನಪದ ಕತೆಗಳಷ್ಟೇ ಅಲ್ಲ, ಕಾಳಿದಾಸ, ಶೇಕ್ಸ್‌ಪಿಯರ್ ಮುಂತಾದವರೂ ಮೊದಲಲ್ಲಿ ತೆರೆದುಕೊಂಡದ್ದು ಅದು ಅವರ ಕತೆ ಎಂದು ತಿಳಿಯದಂತೆ ವೇಷಮರೆಸಿದ ಚಿತ್ರರೂಪಾಂತರಗಳ ಓದಿನಿಂದಲೇ. ಜಾಣೆ ಮಂಗಮ್ಮ ನೆಲಮಾಳಿಗೆಯಲ್ಲಿ ತನ್ನನ್ನು ಅಡಗಿಸಿಕೊಂಡು ಐನ್‌ಟೈಮಿನಲ್ಲಿ ಮಗನ ಸಮೇತ ರಾಜನೆದುರು ಪ್ರತ್ಯಕ್ಷಳಾಗುವ `ಮಂಗಮ್ಮ ಶಪದಂ~ (ವಿಂಟರ್ಸ್‌ ಟೇಲ್), `ಅಬ್ಬಾ ಆ ಹುಡುಗಿ~ (ಟೇಮಿಂಗ್ ಆಫ್ ದ ಶ್ರೂ) ಚಿತ್ರದ ಗಂಡುಹುಡುಗಿಯ `ಉಡಾಪು~ಗಳನ್ನು ಮಣಿಸಿ ಅವಳನ್ನು `ಹೆಣ್ಣುಮಾದರಿ~ಗಿಳಿಸುವುದು;
 
ಸೆಜುವಾನ್ ನಗರದ ಸಾಧ್ವಿಯಂಥವರು ಗಂಡಸಿನ ವೇಷ ತೊಟ್ಟು ತನಗೆ ಒಬ್ಬ ಗಂಡಸಿನ ಬಲ ಇದೆ ಎಂದು ತೋರಿಸುವ ಅನಿವಾರ್ಯತೆ ಆಗಿಂದಲೂ ಹೇಗೆ ಇದ್ದುಕೊಂಡೇ ಇದೆ! ಸದಾರಮೆ ತನ್ನ ಗಂಡನನ್ನು ಹುಡುಕಲು ಗಂಡುವೇಷವನ್ನು ತೊಡಬೇಕಾಯ್ತು ಏಕೆ? ಹೆಣ್ಣೆಂದು ತಿಳಿದೊಡನೆ, ಕಣ್ಣು ಹಾಕುವರು, ಮಣ್ಣುಗೂಡಿಸುವರು... `ಜೋನ್ ಆಫ್ ಆರ್ಕ್~ ಓದುವ ಮುಂಚೆ ಎಷ್ಟೆಲ್ಲ ಹೀಗೆ ಮನದ ಪರದೆಯ ಮೇಲೆ ಆಗಲೇ ಉದ್ದೇಶವೊ ಅನುದ್ದೇಶವೊ ಮೂಡಿಬಿಟ್ಟವು.
 
ಹಣ್ಣಿನ ಬುಟ್ಟಿಯಲ್ಲಿ ಕುಳಿತು ಗುಟ್ಟಾಗಿ ಸೆರೆಮನೆಯೊಳಗೆ ಪ್ರವೇಶಿಸಿ ಸೆರೆಸಿಕ್ಕ ತಮ್ಮವರನ್ನು ಉಪಾಯವಾಗಿ ಬಿಡಿಸುವ ಜಾನಪದ ಕತೆಗಳಂತೆ, ಜನಪ್ರಿಯರೂಪದಲ್ಲಿಯೇ ಒಳಬಂದವು ಅವು. ಕಾಲಕಳೆದಂತೆ ಮೆಲ್ಲಗೆ ಬಣ್ಣ ಕಳಚಿ ತಮ್ಮ ಒಳಕತೆಯನ್ನೂ ಹೇಳಹೇಳುತ್ತ ಕದ ತೆರೆದವು. ತಮ್ಮ ಮೇಲಿನ ಆಪಾದನೆಗಳನ್ನು ಹೀಗೆ ನಿವಾರಿಸಿಕೊಂಡವು.

***
ಈಗಲೂ ಅಂಜಲೀದೇವಿ, ಜಮುನಾ (ಅಮರ ಮಧುರ ಪ್ರೇಮ), ತುಂಬುಮುಖದ ಸಾವಿತ್ರಿ, ನಾಗೇಶ್ವರ ರಾವ್ (ಸಾಗಲಿ ತೇಲಿ ತರಂಗದೊಳೂ), `ವೀರಪಾಂಡ್ಯ ಕಟ್ಟಬೊಮ್ಮನ್~ ಶಿವಾಜಿ ಗಣೇಶನ್, ಎನ್.ಎಸ್.ಕೃಷ್ಣನ್ - ಟಿ.ಎ. ಮಧುರಂ ಜೋಡಿ, `ನೀ ಕೊಟ್ಟ ಟೀಯೇ ಮಧುರಂ~ ಎಂದರೆ ಸಾಕು ಆತ ಹೇಳುವ ಧಾಟಿಗೇನೇ ನಗುತ್ತಿದ್ದ ಜನ, `ಸತ್ಯಕ್ಕೆ ಜಯಕ್ಕಾದೆ~ ಎಂದ ಕನ್ನಾಂಬ, ಕೃಷ್ಣಕುಮಾರಿ (ಜಲಲ ಜಲಲ ಜಲಧಾರೆ), ಲಲಿತ ಪದ್ಮಿನಿ ರಾಗಿಣಿ ನೃತ್ಯ, ತನ್ನ ಆರಾಧ್ಯದೇವ ಗಣಪತಿಯ ಮೂರ್ತಿಯೆದುರು ಇದ್ದಕ್ಕಿದ್ದಂತೆ ಪ್ರಾಯ ಕಳಚಿ ಹಣ್ಣುಗೂದಲಿನ ಅವ್ವೈಯಾರ್ ಆಗಿ ಚಿತ್ರದುದ್ದಕ್ಕೂ ಇನ್ನಿಲ್ಲದಂಥ ಮುಕ್ತಧ್ವನಿಯಲ್ಲಿ ಹಾಡಿನ ಮಳೆ ಸುರಿಸಿದ ಸುಂದರಾಂಬಾಳ್, ಮತ್ತೆ ಆ ಖೂಳಖಳ-ನಂಬಿಯಾರ್ ಎಲ್ಲ, ಎಲ್ಲ ಎಲ್ಲಿರುವರು? ಇದ್ದರೂ ಇರದಿದ್ದರೂ ಅವರು ಇರುವರು, ಅಂದಿನ ನಾವು ಇರುವವರೆಗೂ. ನಮ್ಮ ನೆನಪುಗಳು ಸಾಯದವರೆಗೂ.
***
ಹೇಳಹೋದರೆ ಸಾವಿರ ರಾತ್ರಿಗಳಾದರೂ ಸಾಲವು. ಎಂತಲೇ ಸದ್ಯ ಇಲ್ಲಿಗೇ ಮುಗಿಸುವೆ.
ಇಷ್ಟಕ್ಕೂ ನಮ್ಮೂರಿನ ಆ ಪ್ರಥಮ ಟಾಕೀಸು ಮರಳಿ ಮಣ್ಣಿಗೆ ಸೇರಿದೆ. ಎಲ್ಲ ಊರುಗಳಂತೆ ನಮ್ಮೂರೂ ಸುತ್ತಲೂ ಮುತ್ತಲೂ ಬದಲಾಗಿದೆ. ಕಣ್ಮುಚ್ಚಿ ತೆರೆಯುವುದರೊಳಗೆ ನಾವು ಬಡಕ್ಕನೆ ಆಚೆ ದಾಟುತಿದ್ದ ರಸ್ತೆ ಎರಡಾಗಿ ಒಡೆದು, ನಡುವಲ್ಲಿ ವಿಭಾಜಕ ಬಂದಿದೆ. ಸತತ ಕಾರು ಬಸ್ಸು ಬೈಕು ದಾರಿಬಿಡೀ ದಾರಿಬಿಡೀ... ಅಂದು ತಳಿಕಂಡಿಗೆ ಮುಖವಿಟ್ಟು ಟಾಕೀಸಿನೊಳಗಣ ಹಾಡು ಕೇಳುತಿದ್ದ ಕಾಲದ ನಿಶ್ಶಬ್ದತೆಯಾದರೂ ಎಷ್ಟಿತ್ತು ಹಾಗಾದರೆ!

***
ಕಾಳೀ ದೇವಾಲಯದಿಂದ ಹೊರಟ ಕಾಳಿದಾಸ ಕಾಣೆಯಾಗಿದ್ದಾನೆ. `ಬಾರೋ ಗಿಣಿಯೆ ಮರಳಿ ಮನೆಗೆ ಹಾರಲಾರೆ ನಿನ್ನ ಬಳಿಗೆ~ ಹಾಡುತಿದ್ದಾಳೆ ರಾಜಕುಮಾರಿ ಅತೀವ ದುಃಖಾರ್ತಳಾಗಿ. ಅಂದು ಕೇಳಿದ ಆ ಹಾಡು ತನ್ನ ರಾಗ ಸಮೇತ ಯಾಕೆ ಹೃದಯದ ಪಾತಳಿಗೇ ಬಂದು ತಲುಪಿದೆ, ಇಂದಿಗೂ ಮಾರ್ದನಿಗೊಡುತಿಹುದೆ... ಶಾಕುಂತಲೆ ಅವಳದೇ ಇನ್ನೊಂದು ರೂಪವಿರಬಹುದೆ?

ಅಥವಾ
ಆಧುನಿಕ ಜಗತ್ತಿನ, ಅದರಲ್ಲಿಯೂ ನೆಲ ಜಲ ಜನ ವನ ನದ ನದಿ ಚರ ಅಚರ ಪ್ರಾಣಿಸಂಕುಲಗಳ ತುಂಬು ಸಂಪತ್ತಿನ ಇಂಡಿಯಾದಂತಹ ದೇಶಗಳ ಸ್ಥಾಯೀ ತಳಮಳವೆ ಅದು? ಹಾರಿ ಹೋದ ಕಾಳಿದಾಸ ಗಿಣಿ ಬಹುಕಾಲದ ಮೇಲೆ ಹೊಸತೇ ವ್ಯಕ್ತಿತ್ವದಲ್ಲಿ ಹಿಂತಿರುಗಿದಂತೆ, ಕಳೆದುಕೊಂಡ ಎಲ್ಲವೂ ಮತ್ತೆ ಹೊಸದಾಗಿ ಹಿಂತಿರುಗುವವೆ?

`ಇಲ್ಲ, ಅದು ಸಲ್ಲ. ಪ್ರತಿಪ್ರಸವ ಪ್ರಕೃತಿಯ ನಿಯಮವಲ್ಲ -ಮಗೂ~
`ಇಲ್ಲವೆನ್ನದಿರಿ. ಸಲ್ಲದೆನ್ನದಿರಿ. ಬಿಟ್ಟಿತೆನ್ನಿ. ಬರಲಿ ಮತ್ತೆಲ್ಲವೂ ಹೊಸ ಚೈತನ್ಯ ಕೂಡಿ, ಬರಲಿ ಮರಳಿ ಮತ್ತೆ, ಹೊಸ ಮರುಳಿನಲ್ಲಿ~.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.