ADVERTISEMENT

ನಿಜವಾದ ಪ್ರೀತಿಯ ಲಕ್ಷಣ

ಡಾ. ಗುರುರಾಜ ಕರಜಗಿ
Published 12 ಸೆಪ್ಟೆಂಬರ್ 2011, 19:05 IST
Last Updated 12 ಸೆಪ್ಟೆಂಬರ್ 2011, 19:05 IST

ನನಗೆ ಚೆನ್ನಾಗಿ ನೆನಪಿದೆ. ನಾನು ಬಾಲಕನಾಗಿದ್ದಾಗ ಧಾರವಾಡ ಇನ್ನೂ ಹೆಚ್ಚು ಹಸಿರಾಗಿತ್ತು. ಮಾಳಮಡ್ಡಿಯಲ್ಲಿ ನಾವಿದ್ದ ವಿಶಾಲವಾದ ಕಾಂಪೌಂಡಿನಲ್ಲಿ ಅನೇಕ ಗಿಡಮರಗಳಿದ್ದವು. ಕಾಲಕಾಲಕ್ಕೆ ಫಲಗಳನ್ನು ನೀಡುತ್ತ ನಾವು ಹುಡುಗರು ಮರಗಳ ಮೇಲೆಯೇ ಇರುವಂತೆ ಅವು ನೋಡಿಕೊಳ್ಳುತ್ತಿದ್ದವು.

ನಮ್ಮ ಮನೆಯ ಸುತ್ತಮುತ್ತಲಿದ್ದ ಪ್ರಾಣಿಗಳೂ ನಮ್ಮ ಜೀವನದ ಅವಿಭಾಜ್ಯ ಅಂಗಗಳೇ ಆಗಿದ್ದವು. ಅದರಲ್ಲೂ ನಮ್ಮ ಪಕ್ಕದವರ ಮನೆಯಲ್ಲಿದ್ದ ನಾಯಿ  ಜಿಮ್ಮಿ  ನಮಗೆಲ್ಲ ತುಂಬ ಅಚ್ಚುಮೆಚ್ಚಾಗಿತ್ತು.

ಒಂದು ದಿನ ಪಕ್ಕದ ಮನೆಯ ಹುಡುಗ ಓಡುತ್ತಾ, ತೇಕುತ್ತ ಬಂದು ಹೇಳಿದ,  ಮನೆಗೆ ಬೇಗನೇ ಬಾ, ಭಾರೀ ಮಜಾ ಇದೆ . ನಾನೂ ಕುತೂಹಲದಿಂದ ಅವನ ಹಿಂದೆಯೇ ಓಡಿದೆ. ಆತ ತಮ್ಮ ಮನೆಯ ಮುಂದೆ ಇಟ್ಟಿದ್ದ ದೊಡ್ಡ ಹಲಗೆಯ ಮರೆಯ ಮುಂದೆ ನಿಂತ. ಅವನ ಕಣ್ಣುಗಳು ಅರಳಿದ್ದವು.

ನಾನೂ ಹೋಗಿ ಹಲಗೆಯ ಹಿಂದಿರುವುದನ್ನು ನೋಡಿದೆ. ಜಿಮ್ಮಿ ಮರಿ ಹಾಕಿದೆ! ಒಂದಲ್ಲ, ಎರಡಲ್ಲ, ನಾಲ್ಕು! ನಡೆದಾಡುವ ದೊಡ್ಡ ದೊಡ್ಡ ಬೆಣ್ಣೆಯ ಮುದ್ದೆಗಳಂತೆ ಕಾಣುತ್ತಿವೆ! ಮುಟ್ಟಿದರೆ ಎಲ್ಲಿ ಕರಗಿಬಿಡುತ್ತಾವೋ ಎನ್ನುವಷ್ಟು ಮೃದುವಾಗಿವೆ. ಜಿಮ್ಮಿಗೆ ನಮ್ಮ ಪರಿಚಯವಿದ್ದುದರಿಂದ ನಾವು ಮರಿಗಳನ್ನು ಮುಟ್ಟಿದರೂ ಸುಮ್ಮನಿದ್ದಿತು.

ಆ ನಾಲ್ಕರಲ್ಲೊಂದು ಅಚ್ಚ ಬಿಳಿ ಬಣ್ಣದ ಮರಿ ನನ್ನನ್ನು ಸೆಳೆದುಬಿಟ್ಟಿತು. ಮರುದಿನ ಹೋಗಿ ಅದನ್ನೆತ್ತಿಕೊಂಡು ಮನೆಗೆ ಬಂದೆ. ಅದನ್ನು ಬಿಟ್ಟು ಒಂದು ಕ್ಷಣವೂ ಇರಲು ಆಗುತ್ತಿರಲಿಲ್ಲ. ಯಾವಾಗಲೂ ಅದನ್ನು ಹಿಡಿದುಕೊಂಡೇ ಓಡಾಡುತ್ತಿದ್ದೆ. ಆಗ ನನ್ನಜ್ಜ ಹೇಳಿದರು,  ಛೇ, ಅದನ್ನು ಹಾಗೆ ಹಿಡಿದುಕೊಂಡೇ ಇರಬೇಡವೋ, ಕೆಳಗೆ ಬಿಡು ಅದನ್ನು ಓಡಾಡಲಿ .

 ಇಲ್ಲಜ್ಜ, ಇದು ಎಷ್ಟು ಚೆನ್ನಾಗಿದೆ ನೋಡು, ಅದನ್ನು ಕಂಡರೆ ನನಗೆ ಬಹಳ ಪ್ರೀತಿ  ಎಂದೆ. ಮತ್ತೆ ಅದನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದುಕೊಂಡು ಕೆನ್ನೆಗೆ ಒತ್ತಿಕೊಂಡೆ. ಮುಖಕ್ಕೆ ಬೆಣ್ಣೆ ಮೆತ್ತಿಕೊಂಡಷ್ಟು ಮೃದು ಈ ಜಿಮ್ಮಿಯ ಕಂದ. ನಾನು ಬಿಗಿಯಾಗಿ ಹಿಡಿದದ್ದು ಕೊಂಚ ಹೆಚ್ಚೇ ಆಯಿತೆಂದು ತೋರುತ್ತದೆ, ಮರಿ ಕುಂಯ್, ಕುಂಯ್ ಎಂದು ಒರಲತೊಡಗಿತು.

ನನ್ನಜ್ಜ ಹತ್ತಿರ ಬಂದು ನನ್ನ ಹೆಗಲ ಮೇಲೆ ಕೈ ಹಾಕಿ  ನೀನು ನಿಜವಾಗಿಯೂ ಈ ಮರಿಯನ್ನು ತುಂಬ ಪ್ರೀತಿ ಮಾಡುತ್ತೀಯಾ? ಹಾಗಾದರೆ ಅದನ್ನು ಕೈಯಲ್ಲಿ ಹಿಡಿದುಕೊಳ್ಳದೇ ಕೆಳಗೆ ಬಿಡು. ಹೀಗೆ ಬಿಡುವುದು ನಿಜವಾದ ಪ್ರೀತಿಯ ಲಕ್ಷಣ.

ಇಲ್ಲದಿದ್ದರೆ ಈ ಅತೀವ ಪ್ರೀತಿ ಬಂಧನವಾಗಿ ಬಿಡುತ್ತದೆ . ಆತನ ಮಾತಿನ ಅರ್ಥ ನನಗೆ ಆಗ ಆಗಿರದಿದ್ದರೂ ಅದರಲ್ಲಿ ಸತ್ಯವಿದೆಯೆಂದು ಎನ್ನಿಸಿ ಮರಿಯನ್ನು ಕೆಳಗೆ ಇಳಿಸಿ ಬಿಟ್ಟೆ. ದೂರದಿಂದಲೇ ಅದನ್ನು ಆಡಿಸಿ ಸಂತೋಷಪಡುತ್ತಿದ್ದೆ.

ನಾನು ಬೆಳೆದಂತೆ ಅಜ್ಜನ ಮಾತಿನ ಅರ್ಥ ಹೆಚ್ಚು ಸ್ಪಷ್ಟವಾಗಿ ಗೋಚರಿಸಲಾರಂಭಿಸಿತು. ನೀವು ಹೆಂಡತಿಯನ್ನು ಅತಿಯಾಗಿ ಪ್ರೀತಿಸುತ್ತೀರೋ? ಹಾಗಾದರೆ ಆಕೆ ತನಗೇ ಮೀಸಲಾದ ವಸ್ತುವಿನಂತೆ ಕಾಯುವುದನ್ನು ತಪ್ಪಿಸಿ. ನಿಮ್ಮ ಗಂಡನ ಬಗ್ಗೆ ತುಂಬ ಪ್ರೀತಿಯೇ? ಹಾಗಾದರೆ ಅವನ ಬಗ್ಗೆ ಸಂಶಯ ಬೇಡ, ಸಂಪೂರ್ಣ ನಂಬಿಕೆ ಇರಲಿ.

ಕೆಲವರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಏನಾದೀತೋ ಎಂಬ ಭಯದಿಂದ ಏನನ್ನೂ ಮಾಡಲೂ ಬಿಡುವುದಿಲ್ಲ. ಮಕ್ಕಳ ರೆಕ್ಕೆಯನ್ನು ಬೆಳೆಸುವುದು ಏಕೆ? ಹಾರಲು ತಾನೇ? ರೆಕ್ಕೆ ಬಲಿಸಿಬಿಟ್ಟು ಹಾರಗೊಡದಿದ್ದರೆ ಹೇಗೆ?
ನಿಜವಾದ ಪ್ರೀತಿ ಬಂಧಿಸುವುದಲ್ಲ, ಮುಕ್ತಗೊಳಿಸುತ್ತದೆ, ಭಗವಂತ ನಮ್ಮನ್ನು ಅತಿಯಾಗಿ ಪ್ರೀತಿಸುವುದರಿಂದಲೇ ನಮ್ಮನ್ನು ಸ್ವತಂತ್ರರನ್ನಾಗಿ ಬಿಟ್ಟಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.