ADVERTISEMENT

ಬಾವ್ಲಿ ಅಂದ್ರೆ ಯಾವ್ ಹುಲಿ?

ಪ್ರೀತಿ ನಾಗರಾಜ
Published 20 ಜನವರಿ 2016, 19:42 IST
Last Updated 20 ಜನವರಿ 2016, 19:42 IST

ಇದನ್ನು ಕಾಕತಾಳೀಯ ಎನ್ನಬಹುದು ಅಥವಾ ಕರ್ಮ ವೃತ್ತ ಎಂದಾದರೂ ಕರೆಯಬಹುದು. ಜಗತ್ತಿನಲ್ಲಿ ಒಂದೇ ಬಗೆಯ ವ್ಯಕ್ತಿಗಳು ಏಳು ಜನ ಇರುತ್ತಾರಂತೆ. ಅದಕ್ಕೇ ಏನೋ, ದೂರದ ನಾಡಿನಲ್ಲಿ ಭೇಟಿಯಾದ ಯಾರೋ ಒಬ್ಬರು ನಮಗೆ ಬಹಳ ಆತ್ಮೀಯ ಎನ್ನಿಸಿಬಿಡುತ್ತಾರೆ.

ಆದರೆ, ನಮ್ಮ ಹುಡುಗಿಯರ ವಿಷಯದಲ್ಲಿ ಅಡುಗೆ ಕಂಟ್ರಾಕ್ಟರ್ ಮನೋಹರನಿಗೆ ದೇವರಲ್ಲಿ ಇದ್ದ ಒಂದೇ ಕೋರಿಕೆ: ಇವರನ್ನೆಲ್ಲಾ ಒಂದೊಂದೇ ಮಾಡೆಲ್ ಮಾಡಿರುವುದು ಸಾಕು. ಈ ಥರದ ಇನ್ನೂ ಏಳೇಳು ಜನ ಇದ್ದರೆ ಜಗತ್ತಿನ ಭವಿಷ್ಯ ಅಂಧಕಾರದಲ್ಲಿ ಮುಳುಗಿದಂತೆಯೇ ಸರಿ. ಇವರಲ್ಲಿ ಒಳ್ಳೆಯತನ ಎಂದರೆ ಕಳ್ಳಿ ಗಿಡದಲ್ಲಿನ ಹಾಲು ಎನ್ನುವುದು ಅವನ ಗಾಢ ನಂಬಿಕೆ.

‘ಅದ್ಯಾಕೆ ಮನೋಹರ್? ಕಳ್ಳಿ ಗಿಡದ ಹಾಲು ಸಿಹಿ ಇರುತ್ತಾ?’ ವಿಜಿಯ ಪ್ರಶ್ನೆ.

‘ಯಾವ್ ನನ್ ಮಗನಿಗೆ ಗಟ್ಸ್ ಇದೇರೀ ಅದರ ಟೇಸ್ಟ್ ನೋಡಕ್ಕೆ? ಕಳ್ಳಿ ಗಿಡದಲ್ಲಿನ ಹಾಲು ಗಿಡಕ್ಕೆ ಮಾತ್ರ ಉಪಯೋಗ ಆಗೋದು. ಬೆಳ್ಳಗಿರೋದೆಲ್ಲಾ ಹಾಲಲ್ಲ ಅಂತ ಅದಕ್ಕೇ ಗಾದೆ ಬಂದಿದ್ದು’

ಕೆಲವೊಮ್ಮೆ ಇಂಥಾ ಮಾತಿಗೆ ಜಗಳ ಶುರುವಾಗುವಂತಿದ್ದರೂ ಒಳ್ಳೆಯ ದಾರಿಯಲ್ಲೇ ವಿಷಯಗಳನ್ನು ನಿಭಾಯಿಸಬೇಕಾಗುತ್ತಿತ್ತು. ಏಕೆಂದರೆ ಆಗಾಗ ಅವನ ಗಾಡಿ ಬೇಕಾಗುತ್ತಿತ್ತಲ್ಲ?

ಮನೋಹರನ ಲೂನಾ ಇವರೆಲ್ಲರ ಏಕೈಕ ರಥವಾಗಿತ್ತಷ್ಟೇ? ಆಗಾಗ ಅವನನ್ನು ಕಾಡಿಸುತ್ತಾ ಪೀಡಿಸುತ್ತಾ ಆ ಲೂನಾ ತೆಗೆದುಕೊಂಡು ಓಡಾಟದ ಎಲ್ಲಾ ಅವಶ್ಯಕತೆಗಳನ್ನೂ ಪೂರೈಸಿಕೊಳ್ಳುತ್ತಿದ್ದರು. ಅವನೂ ಇವರ ವರಸೆಗಳನ್ನು ನೋಡಿ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ತಾನು ದಿನಾ ಹಾಸ್ಟೆಲಿಗೆ ಬಂದು ಮತ್ತೆ ಹೊರಡುವ ತನಕವೂ ಮೂಲೆಯಲ್ಲಿ ಲೂನಾಕ್ಕೆ ನಿಲ್ಲುವುದರ ಹೊರತಾಗಿ ಮತ್ತೇನೂ ಕೆಲಸವಿಲ್ಲವಾದ್ದರಿಂದ ಆ ನಡುವಿನ ಸಮಯದಲ್ಲಿ ಯಾರಾದರೂ ಉಪಯೋಗಿಸಿಕೊಂಡರೆ ಬೇಡ ಎನ್ನುತ್ತಿರಲಿಲ್ಲ. ಒಂದೇ ಕಂಡೀಷನ್ ಎಂದರೆ ಉಪಯೋಗಿಸಿದಷ್ಟು ಪೆಟ್ರೋಲ್ ತುಂಬಿಸಬೇಕು.  

ಇದೇನೂ ತಲೆ ಹೋಗುವಂಥ ಕಂಡೀಷನ್ ಅಲ್ಲದಿದ್ದರೂ ಒಮ್ಮೊಮ್ಮೆ ಹುಡುಗಿಯರ ಹತ್ತಿರ ಪೆಟ್ರೋಲ್ ತುಂಬಿಸಲು ಹಣ ಇರುತ್ತಿರಲಿಲ್ಲ. ಆದರೆ, ಲೂನಾದ ಅವಶ್ಯಕತೆ ಮಾತ್ರ ಬಹಳ ಬಹಳ ‘ಎಮರ್ಜೆನ್ಸಿ’ ಥರದಲ್ಲಿ ಇರುತ್ತಿತ್ತು. ಅಂಥಾ ಸಂದರ್ಭದಲ್ಲಿ ಗಾಡಿ ಕೊಟ್ಟಾಗ ಹುಡುಗಿಯರು ಪೆಟ್ರೋಲ್ ಹಾಕಿಸಲು ಅಸಮರ್ಥರಾಗಿರುತ್ತಿದ್ದರು. ಕೆಲವೊಮ್ಮೆ ರಾತ್ರಾನುರಾತ್ರಿ ಮನೋಹರ ವಾಪಸ್ಸು ಹೋಗುವಾಗ ಪೆಟ್ರೋಲ್ ಖಾಲಿಯಾಗಿ ಗಾಡಿ ನಿಂತಾಗ ಯಾಕಾದರೂ ಹುಡುಗಿಯರ ಮಾತಿಗೆ ಕರಗಿ ಗಾಡಿ ಕೊಟ್ಟೆನೋ ಅನ್ನಿಸುತ್ತಿದ್ದ ಪ್ರಮೇಯಗಳು ಸಾಕಷ್ಟಿದ್ದವು.

ಆದರೂ ಮನೋಹರನಂತಹವರಿಗೆ ಒಳ್ಳೆತನ ಮತ್ತು ನಂಬಿಕೆ ಒಂಥರಾ ಬಿಸಿ ತುಪ್ಪವೇ ಸರಿ. ಇನ್ನೊಬ್ಬರು ಇದರ ಲಾಭವನ್ನು ಪಡೆಯುತ್ತಾರೆ ಅಂತ ಗೊತ್ತಿದ್ದರೂ ನಂಬದೆ ಬೇರೆ ದಾರಿಯೇ ಇರುವುದಿಲ್ಲ, ಏಕೆಂದರೆ ಕ್ಷುಲ್ಲಕತನದಲ್ಲಿ ಬದುಕಲು ಎಲ್ಲರಿಗೂ ಬರುವುದಿಲ್ಲವಲ್ಲ? ಹಾಗಿದ್ದಾಗ ಇರುವುದು ಒಂದೇ ದಾರಿ: ಆಸ್ತಿಕರಾದರೆ ದೇವರಲ್ಲಿ ಮೊರೆ ಇಡುವುದು. ನಾಸ್ತಿಕರಾದರೆ ‘ಸಾಯ್ಲಿ ಹೋಗ್ ಅತ್ಲಾಗೆ’ ಅಂತ ಇದ್ದು ಬಿಡುವುದು.

‘ಆ ಛತ್ರಿಗೋ, ಬಿತ್ರಿಗೋ ಅಥವಾ ಶತ್ರುವಿಗೋ ಒಳ್ಳೆಯ ಬುದ್ಧಿ ಕೊಡು ಅಂತ ಕೇಳಿಕೊಳ್ಳೋದು ಬಿಟ್ಟರೆ ಮತ್ತೇನೂ ಮಾಡೋಕಾಗಲ್ಲ ಬಿಡಿ ಮನೋಹರ್. ಯಾಕೆ ಸುಮ್ಮನೆ ಸಿಟ್ಟು ಮಾಡ್ಕೊಂಡು ಮನಸ್ಸು ಹಾಳ್ ಮಾಡ್ಕೋತೀರಾ?’ ಎಂದು ಬುದ್ಧಿವಾದ ಹೇಳುತ್ತಿದ್ದವಳು ಇಂದುಮತಿ. ಎಲ್ಲರಿಗಿಂತ ಪ್ರಬುದ್ಧೆ ಎನ್ನಿಸಿಕೊಳ್ಳಬೇಕೆಂಬ ಹಂಬಲ ಅವಳಲ್ಲಿ ಬಹಳವಾಗಿತ್ತು. ಇದನ್ನು ಮನೋಹರ ಗಮನಿಸಿದ್ದ.

ಹಾಗಾಗಿ ಒಂದು ದಿನ ಅವಳನ್ನು ಕೂರಿಸಿಕೊಂಡು ದಯವಿಟ್ಟು ಆಗಾಗ ಗಾಡಿ ಕೇಳಬೇಡಿ. ಇಲ್ಲ ಅನ್ನೋಕೆ ನನಗೆ ಕಷ್ಟ ಆಗುತ್ತೆ ಎಂದು ವಿವರಿಸಿದ. ಎರಡು ಗಾಲಿಯ ಯಂತ್ರವೊಂದು ಸ್ನೇಹಕ್ಕೆ ಮೂಲವಾಗದಂತೆ ನೋಡಿಕೊಳ್ಳುವ ನೈತಿಕ ಹೊಣೆ ಇಂದುಮತಿಯ ಮೇಲೆ ಬಂತು.  

ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸರಿಯಾಯಿತು ಎನ್ನುವಂಥ ಹುಡುಗಿಯರಿಗೆ ಗಾಡಿಯ ಅವಶ್ಯಕತೆ ಕಡಿಮೆಯಾಗುವ ಸಮಯವೂ ಬಂತು. ಎಲ್ಲರೂ ತಂತಮ್ಮ ಕೋರ್ಸಿನ ಕೊನೆ ವರ್ಷದಲ್ಲಿದ್ದರು. ಪರೀಕ್ಷೆ ಹತ್ತಿರ ಬಂದಂತೆಲ್ಲಾ ಎಲ್ಲರಿಗೂ ದಿಗಿಲು ಪ್ರಾರಂಭವಾಯಿತು. ಓದುವುದಂತೂ ದೂರ, ಸಿಲಬಸ್ ಕವರ್ ಆಗಿದ್ದೇ ಸಾಧನೆ ಎನ್ನುವಂತಾಗಿತ್ತು.

ಹುಡುಗರ ವಿಷಯ ಬೇರೆ ಇರಬಹುದು. ಆದರೆ ಹುಡುಗಿಯರ ಮಾತು ಮಾತ್ರ ಬೇರೆ. ಎಷ್ಟೇ ಧೈರ್ಯವಂತರಾದರೂ ಹುಡುಗಿಯರು ಪರೀಕ್ಷೆ ಎಂದರೆ ಸ್ವಲ್ಪ ಚಿಂತೆಗೆ ಒಳಗಾಗುತ್ತಿದ್ದರು. ಏಕೆಂದರೆ ಪರೀಕ್ಷೆಯ ಪಾಸು ಫೇಲು ಬರೀ ಫಲಿತಾಂಶ ಮಾತ್ರವಲ್ಲ – ಅದೊಂದು ರೀತಿಯ ಸ್ವಂತಕ್ಕೆ ಹಿಡಿದ ಕನ್ನಡಿಯೂ ಹೌದು.

ಫೇಲಾಗುವುದೆಂದರೆ ಸ್ವಲ್ಪ ರಿಸ್ಕೇ. ಏಕೆಂದರೆ ಫೇಲಾದ ತಕ್ಷಣ ಮನೆಯವರಿಗೆ ಇದು ಮದುವೆ ಮಾಡಲು ಸೂಕ್ತವಾದ ಸಂದರ್ಭದಂತೆ ಕಾಣುತ್ತಿತ್ತು. ಫೇಲಾದ ಅತೀ ‘ಡೆಲಿಕೇಟ್’ ಸಮಯದಲ್ಲಿ ಹುಡುಗಿಯರ ಪ್ರತಿಭಟನೆಯ ಅಭಿವ್ಯಕ್ತಿಗೆ ಹೊಡೆತ ಬೀಳುತ್ತಿತ್ತು. ಪಾಸಾದರೆ ಮದುವೆ ವಿರುದ್ಧದ ಪ್ರತಿಭಟನೆಯನ್ನು ಸ್ವಲ್ಪ ಸ್ಟ್ರಾಂಗಾಗಿ ಮಾಡಬಹುದು ಎನ್ನುವ ಕಾರಣಕ್ಕಾದರೂ ಹುಡುಗಿಯರು ಒಳ್ಳೆಯ ಅಂಕಗಳನ್ನು ತೆಗೆಯಲು ಹರಸಾಹಸ ಮಾಡುತ್ತಿದ್ದರು.

ನಮ್ಮ ನಾಯಕಿಯರೂ ಅದೇ ದಾರಿಯಲ್ಲಿದ್ದರೂ ಹಾಸ್ಟೆಲಿನ ಅನುಭವಗಳನ್ನು ಮೊಗೆಮೊಗೆದು ಕುಡಿದುಬಿಡಬೇಕು ಎನ್ನುವಂತೆ ತೀವ್ರವಾಗಿ ಬದುಕುತ್ತಿದ್ದರು. ಇಂತಹ ಸಂದರ್ಭಗಳಲ್ಲೇ ಬಹಳ ವಿಚಿತ್ರ ಎನ್ನಿಸುವಂಥಾ ಅನುಭವಗಳು ಆಗುತ್ತವೆ. ಸಮಾಜದ ಬದುಕಿಗೆ ಬೇಕಾದ ಇಮೇಜಿನ ಬಗ್ಗೆ ಹುಡುಗಿಯರಿಗೆ ಕಿಂಚಿತ್ತೂ ಕಾಳಜಿ ಇರಲಿಲ್ಲ.

ವಯಸ್ಸೇ ಅಂಥದ್ದು. ಭ್ರಮೆ ಹುಟ್ಟುವ ಬೆನ್ನಲ್ಲೇ ಆ ಪೊರೆಯನ್ನು ಕಳಚುವ ಪ್ರಕ್ರಿಯೆಯೂ ಪ್ರಾರಂಭವಾಗಿರುತ್ತದೆ. ಅದಕ್ಕಾಗಿಯೇ ಹದಿ ವಯಸ್ಸು ವೈರುಧ್ಯಗಳ ಆಗರ. ಆ ವಯಸ್ಸಿನಲ್ಲಿ ಭ್ರಮನಿರಸನ ಎನ್ನುವುದು ಒಂಥರಾ ಅಫೀಮಿನ ಹಾಗೆ ಕೆಲಸ ಮಾಡುತ್ತದೆ. ಒಂದು ಗುಂಪಿನಲ್ಲಿ ಒಬ್ಬರಿಗೆ ಸಿನಿಕತನದ ಗುಂಗು ಹತ್ತಿದ್ದೇ ಹತ್ತಿದ್ದು; ಇನ್ನುಳಿದವರೂ ಅದೇ ಗಾಡಿಗೆ ಟಿಕೇಟು ತೆಗೆಸುವುದರಲ್ಲಿ ಸಂಶಯವೇ ಬೇಡ.

ಈಶ್ವರಿ, ರಿಂಕಿ ಸೂಪರ್ ಸ್ಟಾರ್ ರಜನೀಕಾಂತರನ್ನು ಬಲಮುರಿಯಲ್ಲಿ ಸಾಮಾನ್ಯ ಮನುಷ್ಯನಂತೆ ಕಂಡು, ಯಾಕಾದರೂ ಹಾಗೆ ಕಂಡೆವೋ ಎಂದುಕೊಂಡು ಕೊರಗುತ್ತಾ ಸಮಯ ಕಳೆಯುತ್ತಿರುವಾಗ ಇಂದುಮತಿ, ರಶ್ಮಿ ಮತ್ತು ವಿಜಿ ನಡೆದ ಘಟನೆಯನ್ನು ಸಾದ್ಯಂತವಾಗಿ ಕೇಳಿ, ನಕ್ಕು ಸುಮ್ಮನಾಗಿದ್ದರು. ಭ್ರಮೆ ಕಳಚಿದ ಮೇಲೆ ಈಶ್ವರಿ ತನ್ಮಯಳಾಗಿ ಓದಲು ಶುರು ಮಾಡಿದಳು. ರಿಂಕಿಯೂ ಪುಸ್ತಕಗಳ ಮೊರೆ ಹೋದಳು. ಆದರೆ ಇಂದುಮತಿಗೆ ಎಲ್ಲರೂ ಓದೋದು ನೋಡಿದರೆ ತಲೆ ಧಿಂ ಎನ್ನುತ್ತಿತ್ತು. ಏಕೆಂದರೆ ಅವಳಿಗೆ ಓದಲು ಕೂತರೆ ಸಾಕು ತಲೆನೋವು ಬರುತ್ತಿತ್ತು. ಮೊದಮೊದಲಿಗೆ ಹಾಗಂತ ಹೇಳಿದರೆ ಯಾರೂ ನಂಬಲಿಲ್ಲ. ಕಳ್ಳನಿಗೊಂದು ಪಿಳ್ಳೆ ನೆವ ಎಂದು ತಮಾಷೆ ಮಾಡಿದರು.

ಇಂದುವಿಗೆ ಮೈಗ್ರೇನ್ ಸಮಸ್ಯೆ ಇರಬಹುದು ಎನ್ನುವುದು ಅಗಾಧ ಸಾಧ್ಯತೆಯುಳ್ಳ ಸಂಗತಿಯಾದರೂ ಅವಳ ವಿಷಯಕ್ಕೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಮಾತುಮಾತಿಗೆ ‘ನಮ್ಮಪ್ಪ ಶ್ರೀಮಂತ. ನನ್ನ ದಡ ಹತ್ತಿಸೋದು ಅವರ ಜವಾಬ್ದಾರಿ’ ಎನ್ನುವಂತೆ ನಡೆದುಕೊಳ್ಳುತ್ತಿದ್ದಳಾದ್ದರಿಂದ ಉಳಿದವರು ಅವಳಿಗೆ ಬುದ್ಧಿ ಹೇಳಲು ಹೋಗದೆ ತಮ್ಮ ಪಾಡಿಗೆ ತಮ್ಮ ಪಠ್ಯಗಳನ್ನು ಓದುವುದರಲ್ಲಿ ಮಗ್ನರಾಗಿದ್ದರು. ಆದರೆ ಅವಳ ಸಮಸ್ಯೆಯ ದರ್ಶನ ಮಾಡಿಸುವಂಥ ಕೆಲವು ಘಟನೆಗಳು ನಡೆದು ಇಂದುಮತಿ ಕಣ್ಣಿನ ಡಾಕ್ಟರ್ ಹತ್ತಿರ ಹೋಗುವುದು ಅನಿವಾರ್ಯವಾಯಿತು.

ಸುಂದರವಾಗಬಹುದಾದ ಎಲ್ಲ ಲಕ್ಷಣಗಳನ್ನೂ ಹೊತ್ತ ಒಂದು ಸಂಜೆ ಆಗಸ ಹೃದಯಂಗಮ ನಸುಬಣ್ಣಗಳಲ್ಲಿ ಕಂಗೊಳಿಸುತ್ತಿರುವಾಗ ಇಂದುಮತಿ, ವಿಜಿ ಹಾಸ್ಟೆಲಿನ ಕಾಲು ಹಾಕುತ್ತಿದ್ದರು. ಆಕಾಶದಲ್ಲಿ ಇದ್ದಕ್ಕಿದ್ದ ಹಾಗೆ ಚೀವ್ ಚೀವ್ ಗಲಾಟೆ ಶುರುವಾಯಿತು. ಮಾನಸಗಂಗೋತ್ರಿ ಆವರಣದಲ್ಲಿದ್ದ ಕ್ಯಾಂಟೀನಿನ ಮುಂದಿದ್ದ ಬೃಹತ್ ಆಲದಮರದ ಅನಾಮತ್ ಮೇಲಕ್ಕೆ ನೋಡಿದರೆ ರೆಕ್ಕೆಗಳ ಕಲರವ.

‘ಅರೆ! ಅಲ್ನೋಡು! ಎಷ್ಟು ಗಿಳಿಗಳು ಹಾರಾಡ್ತಿವೆ’ ಎಂದಳು ಇಂದುಮತಿ. ವಿಜಿ ನೋಡಿದಳು. ಹಾಸಿದ ತೆಳು ನೀಲಿ ಆಕಾಶದ ಹಿನ್ನೆಲೆಯಲ್ಲಿ ಹಾರಾಡುತ್ತಿದ್ದ ಕಶೇರುಕಗಳು ಗಿಳಿಗಳಂತೆ ಕಾಣಲಿಲ್ಲ.

‘ಗಿಳಿ ಅಲ್ಲ ಕಣೇ ಇಂದೂ’
‘ಹೆಲೋ! ಕಣ್ ಬಿಟ್ಟು ನೋಡು. ಅವು ಗಿಳಿನೇ. ಎಷ್ಟಗಲ ರೆಕ್ಕೆ ಬಿಚ್ಕೊಂಡಿವೆ!’
‘ಗಿಳಿಗಳ ರೆಕ್ಕೆ ಅಷ್ಟಗಲ ಇರಲ್ಲ ಕಣೇ. ಅಲ್ಲದೆ ಅವು ರೆಕ್ಕೆ ಬಿಚ್ಚಿದ್ರೆ ಇಷ್ಟು ನಿಧಾನವಾಗಿ ಹಾರಾಡಲ್ಲ. ರೆಕ್ಕೆ ಪಟ ಪಟ ಬಡೀತಿರ್ತಾವೆ’
‘ಅಯ್ಯ! ಏನು ಪಕ್ಷಿ ಎಕ್ಸ್‌ಪರ್ಟ್ ಡಾ. ಸಲೀಂ ಅಲಿ ಅವರ ಮನೇಲಿ ಕೆಲ್ಸ ಮಾಡ್ತಿದ್ಯಾ?’
‘ಹಕ್ಕಿಗಳ ಬಗ್ಗೆ ಇಷ್ಟು ತಿಳ್ಕೊಳ್ಳಕ್ಕೆ ಕಾಮನ್ ಸೆನ್ಸ್ ಸಾಕು. ಅಂಥಾ ದೊಡ್ ಮನುಷ್ಯರ ಸಮಯ ಯಾಕೆ ಹಾಳು ಮಾಡ್ಬೇಕು?’
‘ಸರಿ ಹಾಗಾದ್ರೆ. ಮೇಲೆ ಹಾರ್ತಾ ಇರೋವು ಏನು?’

‘ಗಿಳಿಯಂತೂ ಅಲ್ಲ’
‘ಭಾರೀ ಬುದ್ಧಿವಂತೆ. ಉತ್ತರ ಹೇಳು ಅಂದ್ರೆ ಒಗಟು ಹೇಳ್ತೀಯಾ?’
ವಿಜಿ ಸ್ವಲ್ಪ ಹೊತ್ತು ಮೇಲೆ ದಿಟ್ಟಿಸಿ ನೋಡಿದಳು.
‘ಅವು ಬಾವಲಿ ಕಣೇ’
‘ಹ? ಬಾವ್ ಹುಲಿ?’
‘ಅಲ್ಲ...ಬಾವಲಿ ಅಂತಾರೆ... ರಾತ್ರಿ ಹೊತ್ತು ಮಾತ್ರ ಹಾರಾಡ್ತವೆ. ತಲೆಕೆಳಗಾಗಿ ತೂಗ್ತಾವೆ’
‘ಓ! ಬ್ಯಾಟು ಅನ್ನು. ಬಾವ್ಲಿ ಅಂತೆ. ಯಾವ್ ಭಾಷೆನೇ ನೀನ್ ಮಾತಾಡದು?’
‘ಕನ್ನಡದಲ್ಲಿ ಬಾವಲಿ ಅಂತಾರಪ್ಪ. ಆದ್ರೆ ನೀವು ಬ್ಯಾಂಗಲೋರಿಯನ್ಸ್ ಅಲ್ವಾ? ನಿಮಗೆ ಕನ್ನಡ ಗೊತ್ತಿರಕ್ಕೆ ಚಾನ್ಸೇ ಇಲ್ಲ’
‘ತಗೂದ್ ಬಿಟ್ಟಾ ಅಂದ್ರೆ!’

ಹೀಗೇ ತಲೆ ಹರಟೆ ಮಾತನಾಡುವಷ್ಟರಲ್ಲಿ ಹಾಸ್ಟೆಲ್ ಸೇರಿ ಈ ವಿಷಯ ಮರೆತೂ ಹೋದರು. ಆದರೆ ಇಂದುಮತಿಯ ಕಣ್ಣಿನ ಸಮಸ್ಯೆ ಯಾರ ಗಮನಕ್ಕೂ ಬಾರದೆ ಬಹಳ ಬೃಹದಾಕಾರವಾಗಿ ಬೆಳೆಯುತ್ತಿತ್ತು. ಸಮಸ್ಯೆ ಬಹಳ ಬಲವಾಗಿ ಗಮನಕ್ಕೆ ಬಂದದ್ದು ಒಮ್ಮೆ ಇಂದುವೂ ಈಶ್ವರಿಯೂ ಮನೋಹರನ ಗಾಡಿ ಪಡೆದು ಅರಮನೆ ಕಡೆ ಹೋದಾಗ.

ಯಾರನ್ನೋ ಭೇಟಿ ಮಾಡಿ ವಾಪಸ್ಸು ಬರುವಾಗ ಕತ್ತಲಾಗುತ್ತಾ ಬಂದಿತ್ತು. ಮನೋಹರ ತನ್ನ ಲೂನಾ ಕೊಡುವಾಗಲೇ ಜವಾಬ್ದಾರಿ ಇಂದುಮತಿಯದ್ದು ಎಂದು ತಾಕೀತು ಮಾಡಿ ಕೊಟ್ಟಿದ್ದ. ಹಾಗಾಗಿ ಗಾಡಿ ಅವಳೇ ಓಡಿಸುತ್ತಿದ್ದಳು. ಅರಮನೆಯಿಂದ ಅರಸು ರೋಡಿಗೆ ಬಂದು, ಮತ್ತೆ ಕುಕ್ಕರಹಳ್ಳಿ ರಸ್ತೆಯನ್ನೋ ಹುಣಸೂರು ರಸ್ತೆಯನ್ನೋ ಹಿಡಿದರೆ ಹಾಸ್ಟೆಲ್ ಸೇರುತ್ತಿದ್ದರು. ಅರಮನೆಯಿಂದ ಮೈಸೂರಿನ ಅತ್ಯಂತ ಡೆಮಾಕ್ರೆಟಿಕ್ ಸ್ಥಳವಾದ ಕೆಆರ್ ಸರ್ಕಲ್ಲಿನ ಬಳಿಗೆ ಬಂದರು. ಸರ್ಕಲ್ಲು ಡೆಮಾಕ್ರೆಟಿಕ್ ಸ್ಥಳ ಯಾಕೆಂದರೆ ಊರಲ್ಲಿ ನಡೆಯುವ ಬಹುತೇಕ ಪ್ರತಿಭಟನೆಗಳು ಈಗಲೂ ಕೆಆರ್ ಸರ್ಕಲ್ಲಿನಲ್ಲೇ ನಡೆಯುವುದು.

ಇಂದೂ ಲೂನಾ ರೈಡ್ ಮಾಡುತ್ತಾ ಈಶ್ವರಿ ಹಿಂದೆ ಜೀವ ಕೈಯಲ್ಲಿ ಹಿಡಿದು ಸರ್ಕಲ್ ಹತ್ತಿರ ಬರುತ್ತಿರುವಾಗ ಹಸಿರು ಇದ್ದ ಸಿಗ್ನಲ್ ಕೆಂಪಾಗಿಬಿಟ್ಟಿತು. ಇಂದುಮತಿಗೆ ಇದು ಕಾಣಲಿಲ್ಲವೋ ಎಂಬಂತೆ ಮುನ್ನುಗ್ಗುತ್ತಿರುವಾಗ ಅಲ್ಲೇ ಇದ್ದ ಪೊಲೀಸ್ ತಡೆದರು. ‘ಏನ್ರೀ, ಕಣ್ ಕಾಣ್ಸಲ್ವಾ? ರೆಡ್ ಲೈಟಿದೆ ಹಂಗೇ ಹೊಂಟೋಗ್ತಾ ಇದೀರಲ್ಲ?’
‘ಸಾರಿ ಸರ್. ದಾಟ್ಕೊಂಬಿಡನಾ ಅಂತ...ಹೆಹೆಹೆ’
‘ಸುಮ್ನೆ ನಿಂತ್ಕೊಳಮ್ಮಾ! ಅತೀ ಬುದ್ವಂತಿಕೆ ತೋರಿಸ ಬ್ಯಾಡ ನಂತಾವ’
ಇಂದುಮತಿ ಸುಮ್ಮನೆ ನಿಂತಳು. ಸಿಗ್ನಲ್ ಮತ್ತೆ ಹಸಿರಾಗಲು ಬಹಳ ಸಮಯ ಇತ್ತು. ಅಷ್ಟರಲ್ಲಿ ಅವಳ ಪಕ್ಕ ಒಂದು ಮರ್ಸಿಡಿಸ್ ಕಾರ್ ಬಂದು ನಿಂತಿತು. ಅದರಲ್ಲಿದ್ದ ಕಟ್ಟು ಮಸ್ತಾದ ಬೆಳ್ಳನೆ ಯುವಕ ಅಚ್ಚ ಇಂಗ್ಲೀಷಿನಲ್ಲಿ ಇಂದುವನ್ನು ಕೇಳಿದ.

‘ಹೌ ಡು ಯು ಗೆಟ್ ಟು ಮೆಟ್ರೋಪೋಲ್ ಹೋಟೆಲ್?’
‘ಗೋ ಸ್ಟ್ರೇಟ್. ಟರ್ನ್ ರೈಟ್ ಅಟ್ ದ ನೆಕ್ಸ್ಟ್ ಸಿಗ್ನಲ್’
ಮುಂದಿನ ಸಿಗ್ನಲ್ ಅಂದರೆ ಅರಸು ರಸ್ತೆಯ ತುದಿ. ಆದರೆ ಅದು ಕೆಆರ್ ಸರ್ಕಲ್ಲಿನಿಂದ ಕಣ್ಣಳತೆಯಲ್ಲಿ ಕಾಣುತ್ತಿರಲಿಲ್ಲವಾಗಿ ಇಂದುಮತಿಯೇ ಮತ್ತೆ ಮುಂದುವರೆದು ಹೇಳಿದಳು.

‘ನಾವೂ ಅದೇ ದಾರಿಯಲ್ಲೇ ಹೋಗ್ತಿದೀವಿ. ನಮ್ಮನ್ನ ಫಾಲೋ ಮಾಡಿ’ ಎಂದು ಸಿಗ್ನಲ್ಲನ್ನೇ ದಿಟ್ಟಿಸುತ್ತಾ ನಿಂತಳು. ಕಾರಿನಲ್ಲಿದ್ದವರನ್ನು ನೋಡಿ ಈಶ್ವರಿಗೆ ಹೃದಯ ಬಾಯಿಗೆ ಬಂದು ಮಾತು ಹೊರಡದಾಯಿತು. ಅಕ್ಕಪಕ್ಕ ಗುಜು ಗುಜು ಶುರುವಾಯಿತು. ಕಾರಿನಲ್ಲಿದ್ದವರು ಬೇರೆ ಎಲ್ಲರಿಗೂ ಗುರುತು ಸಿಕ್ಕಿದ್ದರೂ ಇಂದುಮತಿಗೆ ಅವರ ಲವಲೇಶ ಪರಿಚಯವೂ ಗೊತ್ತಾಗಲಿಲ್ಲ. ಇದ್ದಕ್ಕಿದ್ದ ಹಾಗೆ ಈಶ್ವರಿಯ ಕಡೆ ತಿರುಗಿ ಇಂದುಮತಿ ಹೇಳಿದಳು.

‘ಸಿಗ್ನಲ್ ಬಣ್ಣ ನನಗೆ ಗೊತ್ತಾಗ್ತಿಲ್ಲ ಕಣೆ. ಕೆಂಪು ಬಣ್ಣ ಗ್ರೀನ್ ಆದ ತಕ್ಷಣ ನನಗೆ ಹೇಳು’
ಅಲ್ಲಿಗೆ ಈಶ್ವರಿಯ ಕತೆ ದೇವರಿಗೇ ಪ್ರೀತಿ ಎನ್ನುವಂತಾಯಿತು. ಸಿಗ್ನಲ್ ಬಣ್ಣ ಗೊತ್ತಿಲ್ಲದೆ ಇವಳು ಗಾಡಿ ಹೇಗೆ ಓಡಿಸುತ್ತಾಳೆ? ಅದಕ್ಕೇ ಇವಳಿಗೆ ಕಾರಿನಲ್ಲಿದ್ದವರ ಗುರುತು ಹತ್ತಿಲ್ಲ... ಹಸಿರು ಸಂಕೇತ ಬಂದಾಗಲೂ ಈಶ್ವರಿಗೆ ಮಾತು ಹೊರಡಲಿಲ್ಲ. ಇಂದುವಿನ ಪಕ್ಕೆಗೆ ತಿವಿದಳು. ಗಾಡಿ ಮುಂದಕ್ಕೆ ಹೋಯಿತು. ಕಾರು ಫಾಲೋ ಮಾಡಿತು. ಮುಂದಿನ ಸಿಗ್ನಲ್ಲಿನಲ್ಲಿ ಬಲಕ್ಕೆ ತಿರುಗಿ ಕಾರಿನಲ್ಲಿದ್ದವರಿಗೆ ಮೆಟ್ರೋಪೋಲ್ ತೋರಿಸಿ ಪ್ರಯಾಣ ಮುಂದುವರೆಸಿದಳು. ಹಾಸ್ಟೆಲ್ ಸೇರಿದ ನಂತರ ನಿಟ್ಟುಸಿರು ಬಿಟ್ಟ ಈಶ್ವರಿ ಇಂದುವನ್ನು ಕೇಳಿದಳು.

‘ಇಂದೂ, ನಿಂಗೆ ಕಣ್ಣು ಕಾಣ್ಸಲ್ವಾ?’
‘ನಿನ್ ಕಣ್ಣಿಗೆ ಕಡ್ಡಿ ಹಾಕಿಬಿಡ್ತೀನಿ. ಸರಿಯಾಗಿ ಕರ್ಕೊಂಡು ಹೋಗಿ ಬಂದಿಲ್ವಾ?’
‘ಅಲ್ಲಾ ಸಿಗ್ನಲ್ ಗ್ರೀನ್ ಆದ್ರೆ ಹೇಳು ಅಂದೆ?’
‘ಅದು ಸಂಜೆ ಅಲ್ವಾ? ಸ್ವಲ್ಪ ಮಬ್ಬು ಬೆಳಕು ಬೇರೆ’
‘ನಿನ್ ತಲೆ. ಬೆಳಕು ಮಬ್ಬಂತೆ. ನಿನ್ನ ಅಲ್ಲಿ ಮೆಟ್ರೋಪೋಲ್ ದಾರಿ ಕೇಳಿದ್ರಲ್ಲ? ಅವರಾದರೂ ಗುರುತು ಸಿಕ್ರಾ?’
‘ಅವನೇನು ನನ್ ಬಾಮೈದನಾ ಗುರುತು ಸಿಕ್ಕಕ್ಕೆ?’

‘ಲೈ ಕಾರಿನಲ್ಲಿದ್ದೋನು ಫೇಮಸ್ ಮನುಷ್ಯ. ಅಲ್ಲಿದ್ದೋರೆಲ್ಲಾ ಗುರುತು ಹಿಡಿದ್ರು...ನಿನಗೆ ಗೊತ್ತಾಗಲಿಲ್ಲ ಅಂದ್ರೆ?’
‘ಸರಿ ನೀನೇ ಹೇಳು. ಯಾರು ಅಂತ’
‘ಡ್ರೈವ್ ಮಾಡತಾ ಇದ್ದೋನು ಹಿಂದಿ ಹೀರೊ ಅಕ್ಷಯ್ ಕುಮಾರ್ ಕಣೇ! ಅವನ ಪಕ್ಕ ಕೂತಿದ್ದು ಡೇವಿಡ್ ಧವನ್. ಸಿನಿಮಾ ಡೈರೆಕ್ಟರ್ರು’
‘ಥೂ ನಿನ್ನ! ಮೊದ್ಲೇ ಹೇಳಕ್ಕೆ ಆಗಲಿಲ್ವಾ?’
‘ನಿಂಗೆ ಕಣ್ ಕಾಣಲ್ಲ ಅಂತ ನಂಗೆ ಹೆಂಗೆ ಗೊತ್ತಾಗ್ಬೇಕು?’
‘ಕಣ್ಣು ನನ್ನದಲ್ಲ ಮಬ್ಬಾಗಿರೋದು. ನಿನ್ನದು. ನಿನಗೆ ರಜನೀಕಾಂತೂ ಗುರುತು ಸಿಕ್ಕಲಿಲ್ಲ ಅಲ್ವಾ?’
ಪದಗಳು ಸೋಲುವ ಹೊತ್ತು ಹಲವಾರು ಬಾರಿ ಎಲ್ಲರ ಜೀವನದಲ್ಲೂ ಬರುತ್ತೆ. ಈಶ್ವರಿ ಇಂದುವಿನ ಹತ್ತಿರ ಕುತರ್ಕದ ಚರ್ಚೆ ಮುಂದುವರೆಸಲಾಗದೆ ಸುಮ್ಮನಾದಳು. ಮಾರನೇ ದಿನವೇ ಇನ್ಯಾರೋ ಈಶ್ವರಿಯನ್ನು ಕೇಳಿದರು.

‘ಕತ್ಲಲ್ಲಿ ಕಣ್ ಕಾಣಲ್ವಂತಲ್ಲ ನಿಂಗೆ?’
‘ಹಹಹಹಹ! ಹೌದಾ?’
‘ಮತ್ತೆ ನಿನ್ನೆ ಆಕ್ಟರ್ರು ಅಕ್ಷಯ್ ಕುಮಾರ್ ಕಂಡ್ರೆ ಗುರುತೇ ಸಿಕ್ಕಲಿಲ್ವಂತಲ್ಲಾ? ಅದೇನ್ ಪಿಚ್ಚರ್ ಅಭಿಮಾನಿಯೋಪ್ಪಾ ನೀನು’
‘ಯಾರ್ ಹೇಳಿದ್ದು?’
‘ಇಂದುಮತಿ ಹೇಳಿದ್ಲು’
‘ಸರಿ ಬಿಡು. ಈವತ್ತೇ ಡಾಕ್ಟರ್ ಹತ್ರ ಹೋಗ್ತೀನಿ’ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.